ಅವ್ಯವಹಾರ ಖಂಡಿಸಿ ಸುರಪುರದಲ್ಲಿ ದಲಿತ ಸೇನೆ ಬೃಹತ್ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಸುರಪುರ ಜು.23
ಇಲ್ಲಿಯ ತಾಲೂಕು ಪಂಚಾಯಿತಿ ಕಚೇರಿ ಮುಂದೆ ದಲಿತ ಸೇನೆ ತಾಲೂಕು ಘಟಕ ಸೋಮವಾರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಸೇನೆಯ ಮುಖಂಡರು ಮಾತನಾಡಿ, ತಾಲೂಕಿನ ಎಸ್.ಡಿ. ಗೋನಾಲ ಗ್ರಾಮದಲ್ಲಿ 2010-11ನೇ ಸಾಲಿನ ಬಸವ ವಸತಿ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಲ್ದಾಳ ಗ್ರಾಪಂ ಕಾರ್ಯದರ್ಶಿ ಹಾಗೂ ಬಿಲ್ ಕಲೆಕ್ಟರ್‌ಗಳು ಅವ್ಯವಹಾರದಲ್ಲಿ ಭಾಗಿಯಾಗಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಬೋಗಸ್ ದಾಖಲೆ ಸೃಷ್ಟಿ: ಎಸ್.ಡಿ. ಗೋನಾಲ ಗ್ರಾಮದ ಮನೆಯ ಸುತ್ತ 70 ವರ್ಷಗಳಿಂದ ವಾಸವಾಗಿದ್ದ ಮನೆಯ ಸುತ್ತಳತೆಯನ್ನು ತಪ್ಪಾಗಿ ನಮೂದಿಸಿದ್ದಾರೆ. ಗ್ರಾಮದ ಮನೆಗಳ ಸರ್ವೇ ಮತ್ತು ನೀಲ ನಕಾಶೆ ಸಿದ್ಧತೆಯಲ್ಲಿ ಕೂಡಾ ಸಂಪೂರ್ಣವಾಗಿ ಅದಲುಬದಲು ಮಾಡಿರುತ್ತಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮದಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡದೆ ಬೋಗಸ್ ಬಿಲ್ ಸೃಷ್ಟಿಸಿ ಅನುದಾನ ಎತ್ತಿ ಹಾಕಿದ್ದಾರೆ. ಈ ಬಗ್ಗೆ ಮಾಹಿತಿ ಕೇಳಿದರೆ ಕಾರ್ಯದರ್ಶಿ ಮತ್ತು ಬಿಲ್ ಕಲೆಕ್ಟರ್‌ಗಳು ಅಸಂಬದ್ಧವಾಗಿ ನಡೆದುಕೊಳ್ಳುತ್ತಾರೆಂದು ಕಿಡಿ ಕಾರಿದರು.
ಅಮಾನತಿಗೆ ಒತ್ತಾಯ: ಕರ್ತವ್ಯ ಲೋಪವೆಸಗಿರುವ ಅವರಿಬ್ಬರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಸೂಕ್ತ ತನಿಖೆಗೊಳಪಡಿಸಬೇಕು. ಮನೆಗಳ ಸರ್ವೇ ಕಾರ್ಯ ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳ ಮನವಿ ಪತ್ರವನ್ನು ತಾಪಂ ಅಧಿಕಾರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸೇನೆಯ ಮುಖಂಡರಾದ ಹಣಮಂತ ಕವಡಿಮಟ್ಟಿ, ಬಲಭೀಮ ದೊಡ್ಡಮನಿ, ಹಣಮಂತ ಗೋನಾಲ, ಬಸವರಾಜ ಕರಡಕಲ್, ರಂಗಣ್ಣ ಸೂಗೂರು, ಸಾಬಣ್ಣ ಕಿರದಳ್ಳಿ, ಕೆಂಚಪ್ಪ ಕಟ್ಟಿಮನಿ, ಅಯ್ಯಪ್ಪ ಕಟ್ಟಿಮನಿ, ಮಾನಪ್ಪ ದೊಡ್ಡಮನಿ ಇತರರಿದ್ದರು.