ಅಹಿಂಸಾ ಮಾರ್ಗದಿಂದ ಧರ್ಮ ರಕ್ಷಣೆ ಸಾಧ್ಯ: ನೀಲಂಗಿ
ಸೇಡಂ: ಮಾತಾ ಮಾಣಿಕೇಶ್ವರಿಯವರ ಅಹಿಂಸೆಯೇ ಪರಮ ಧರ್ಮ ಎಂಬ ವಾಕ್ಯದಂತೆ ಪ್ರತಿಯೊಬ್ಬರೂ ಅಹಿಂಸಾ ಮಾರ್ಗದಲ್ಲಿ ನಡೆದರೆ ಧರ್ಮ ಜಾಗೃತಿ ಹಾಗೂ ರಕ್ಷಣೆ ಸಾಧ್ಯ ಎಂದು ಪುರಸಭೆ ಸದಸ್ಯ ರಾಜಕುಮಾರ್ ನೀಲಂಗಿ ಹೇಳಿದರು.
ಇಲ್ಲಿನ ದೊಡ್ಡ ಅಗಸಿ ಬಡಾವಣೆಯ ಈಶ್ವರಲಿಂಗ ದೇವಸ್ಥಾನದಲ್ಲಿ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರ 80ನೇ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕೃತಿಯನ್ನು ರಕ್ಷಿಸಬೇಕು. ಪ್ರಾಣಿ ಬಲಿ ಮಾಡಬಾರದು ಎಂಬ ಅಮ್ಮನ ಮಾತಿನಂತೆ ಇಂದಿನ ಸಮಾಜ ನಡೆದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತೆ. ಮಾತಾ ಮಾಣಿಕೇಶ್ವರಿ ಅಮ್ಮನವರ ಜನ್ಮದಿನದಂದು ಯುವಕರು ಮಾಡುತ್ತಿರುವ ಅನ್ನಸಂತರ್ಪಣೆ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮಕ್ಕೂ ಮುಂಚಿತವಾಗಿ ಮಾತಾ ಮಾಣಿಕೇಶ್ವರಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಲಾಯಿತು. ಗಂಗಮ್ಮ ತಾಯಿ, ಮಾಣಿಕಮ್ಮ ತಾಯಿ, ನಾಗಮ್ಮ ತಾಯಿ, ಸುಮಾ, ಮಹಾದೇವಿ ತೋಟ್ನಳ್ಳಿ, ಶಾಂತಾ, ಮುತ್ತಮ್ಮ ನಾಚವಾರ, ದಿಗಂಬರ್ ತಾಯಿ, ರಾಮು, ರಾಜು ಬಾಗೋಡಿ, ಬಸ್ಸು ನಾಚವಾರ, ಶರಣು, ಅರುಣ, ಮಲ್ಲಿಕಾರ್ಜುನ ರಾಜಾಪುರ, ಜಗದೀಶ ಕಿರ್ಮನಕರ್, ಖ್ಯಾದಿಗೆಪ್ಪ ಮಂಗಲಗಿ ಇದ್ದರು.