ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.23
ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಹಗಲಿರುಳು ಮಳೆ ಸುರಿಯುತ್ತಿರುವುದರಿಂದ ಕೆಲವು ಸ್ಥಳಗಳಲ್ಲಿ ಕೃಷಿ ಕಾಯಕಕ್ಕೆ ತೊಂದರೆಯಾಗಿದೆ. ಆದರೂ ಬಹುತೇಕ ಎಲ್ಲ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚುರುಕಾಗಿದೆ.
ಏಕೆಂದರೆ ಕಳೆದ 3 ವರ್ಷಗಳಿಂದ ಜಿಲ್ಲೆಯಲ್ಲಿ ಮುಂಗಾರು ಮಳೆಯೇ ನಾಪತ್ತೆಯಾಗಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಈ ವರ್ಷ ಕಾಯಂ ಅತಿಥಿಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಜುಲೈ 22ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 159.02 ಮಿ.ಮೀ ಬೀಳಬೇಕು. ವಾಸ್ತವದಲ್ಲಿ 176. 93 ಮಿ.ಮೀ. ಮಳೆ ಬಿದ್ದಿದೆ. ಶೇ.111ರಷ್ಟು ಮಳೆಯಾಗಿದೆ. ಜೇವರ್ಗಿ ತಾಲೂಕು ಒಂದನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಚಿತ್ತಾಪುರ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ.
ಎಲ್ಲೆಲ್ಲಿ ಎಷ್ಟೆಷ್ಟು?: ಜುಲೈ 22ರವರೆಗೆ ಅಫಜಲ್ಪುರ ತಾಲೂಕಿನಲ್ಲಿ 144. 9 ಮಿ. ಮೀ. ವಾಡಿಕೆ ಮಳೆ ಬಿದ್ದಿರುವ ಮಳೆ 124 ಮಿ. ಮೀ., ಆಳಂದ ತಾಲೂಕಿನಲ್ಲಿ 158 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 162 ಮಿ.ಮೀ. ಆಗಿದೆ.
ಚಿಂಚೋಳಿ ತಾಲೂಕಿನಲ್ಲಿ 207 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 224 ಮಿ.ಮೀ., ಚಿತ್ತಾಪುರ ತಾಲೂಕಿನಲ್ಲಿ 147 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 120 ಮಿ.ಮೀ., ಗುಲ್ಬರ್ಗ ತಾಲೂಕಿನಲ್ಲಿ 143 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 163 ಮಿ.ಮೀ., ಜೇವರ್ಗಿ ತಾಲೂಕಿನಲ್ಲಿ 141.5 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 115. 5 ಮಿ.ಮೀ. ಹಾಗೂ ಸೇಡಂ ತಾಲೂಕಿನಲ್ಲಿ 201 ಮಿ.ಮೀ. ವಾಡಿಕೆ ಮಳೆ, ಬಿದ್ದಿರುವ ಮಳೆ 230 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ಇಲಾಖೆ ತಿಳಿಸಿದೆ.
ಜು.23 ಮಂಗಳವಾರ ಸಹ ಮಳೆ ಮುಂದುವರಿದಿದ್ದು, ಸೇಡಂ ತಾಲೂಕಿನಲ್ಲಿ ಅತಿಹೆಚ್ಚು 18. 6 ಮಿ.ಮೀ., ಅತಿ ಕಡಿಮೆ ಜೇವರ್ಗಿ ತಾಲೂಕಿನಲ್ಲಿ 0.2 ಮಿ.ಮೀ. ಮಳೆ ದಾಖಲಾಗಿದೆ. ಆಳಂದದಲ್ಲಿ 7.4 ಮಿ.ಮೀ, ಅಫಜಲ್ಪುರ ತಾಲೂಕಿನಲ್ಲಿ 1.0 ಮಿ.ಮೀ., ಚಿಂಚೋಳಿಯಲ್ಲಿ 9. 2 ಮಿ.ಮೀ, ಚಿತ್ತಾಪುರದಲ್ಲಿ 9.6 ಮಿ.ಮೀ. ಹಾಗೂ ಗುಲ್ಬರ್ಗ ತಾಲೂಕಿನಲ್ಲಿ 2 ಮಿ.ಮೀನಷ್ಟು ಮಳೆಯಾಗಿದೆ.
ಜಡಿ ಮಳೆ: 21 ಮನೆ ಕುಸಿತ
ಚಿಂಚೋಳಿ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟು 21 ಮನೆಗಳು ಭಾಗಶಃ ಕುಸಿದು ಬಿದ್ದಿವೆ.
ಚಿಂಚೋಳಿ ಪಟ್ಟಣದಲ್ಲಿ 8 ಮನೆ, ಸುಲೇಪೇಟ್‌ದಲ್ಲಿ 10, ಕೋಡ್ಲಿಯಲ್ಲಿ 3 ಮನೆಗಳು ಭಾಗಶಃ ಕುಸಿದಿವೆ. ಮಳೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಜಗನ್ನಾಥ ರೆಡ್ಡಿ ತಿಳಿಸಿದ್ದಾರೆ. ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ತುಂತುರು ಮಳೆ ಬರುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಂಚೋಳಿಯಲ್ಲಿ 29.6 ಮಿಮೀ, ಕೋಡ್ಲಿಯಲ್ಲಿ 27.6 ಮಿಮೀ, ಕುಂಚಾವರಂನಲ್ಲಿ 57 ಮಿಮೀ, ಸುಲೇಪೇಟ್‌ನಲ್ಲಿ 26.6 ಮಿಮೀ, ಐನಾಪುರದಲ್ಲಿ ಶೇ.48.2 ಮಿಮೀ ಮತ್ತು ಚಿಮ್ಮನಚೋಡನಲ್ಲಿ 30 ಮಿಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಮುಲ್ಲಾಮಾರಿ ಜಲಾಶಯ: ಮುನ್ನೆಚ್ಚರಿಕೆ
ಗುಲ್ಬರ್ಗ: ಚಿಂಚೋಳಿ ತಾಲೂಕಿನ ನಾಗರಾಳ ಗ್ರಾಮದ ಬಳಿಯಿರುವ ಮುಲ್ಲಾಮಾರಿ ಯೋಜನೆಯ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ. ಜಲಾಶಯಕ್ಕೆ ನಿರಂತರವಾಗಿ ಒಳ ಹರಿವು ಇದ್ದು, ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿರುತ್ತದೆ. ಗರಿಷ್ಠ ಮಟ್ಟದ ನಂತರ ಬಂದ ಒಳಹರಿವಿನ ನೀರನ್ನು ಅಣೆಕಟ್ಟೆ ಕೋಡಿಯ ಮುಖಾಂತರ ನದಿ ಪಾತಳಿಗೆ ಬಿಡಲಾಗುವುದು. ಗ್ರಾಮಗಳಾದ ಚಿಮ್ಮನಚೋಡ, ತಾದ್ಲಾಪುರ, ಕನಕಪುರ, ಗೌಡನಹಳ್ಳಿ, ಗಾರಂಪಳ್ಳಿ, ದೇಗಲಮಡಿ, ನೀಮಾಹೊಸಳ್ಳಿ, ಭಕ್ತಂಪಳ್ಳಿ, ಗರಗಪಳ್ಳಿ, ಗಣಾಪುರ, ಇರಗಪಳ್ಳಿ, ಖರ್ಚಖೇಡ ಹಾಗೂ ಜಟ್ಟೂರು ಗ್ರಾಮಗಳಲ್ಲಿ ಪ್ರವಾಹದಿಂದ ತೊಂದರೆಯುಂಟಾಗಬಹುದು.