ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸಜ್ಜು

Lingaraj Badiger
Updated On : 24 Jul 2013, 11:36 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಜು.23
ಸುರಪುರ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಈಗ ಬಿಡುಗಡೆ ಮಾಡುತ್ತಿರುವ ನೀರಿನಿಂದ ಅಪಾಯದಂತಹ ಪರಿಸ್ಥಿತಿ ಇಲ್ಲ. ಆದರೂ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿ ಹೇಳುವುದರ ಜತೆಗೆ ಮುಂಬರುವ ದಿನಗಳಲ್ಲಿ ಪ್ರವಾಹದಂತಹ ತುರ್ತು ಸಂದರ್ಭ ಉಂಟಾದಲ್ಲಿ ಅದಕ್ಕಾಗಿ ಎಲ್ಲ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತಿಳಿಸಿದರು.
ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ನೀರಿನ ಮಟ್ಟ, ನೀರು ಬಿಡುಗಡೆಯ ಬಗ್ಗೆ ಮಂಗಳವಾರ ಪರಿಶೀಲಿಸಿದ ನಂತರ, ಬೆಚ್ಚಿಗಡ್ಡಿ ಗ್ರಾಮದ ಸಮೀಪದ ನೀಲಕಂಠರಾಯನಗಡ್ಡಿ ಗ್ರಾಮದ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಯಾವಾಗ ಅಪಾಯ ಸಾಧ್ಯತೆ?: ಬಸವಸಾಗರ ಜಲಾಶಯದಿಂದ ಈಗ ಬಿಡುಗಡೆಯಾಗುತ್ತಿರುವ ನೀರಿನಿಂದ ಯಾವುದೇ ಗ್ರಾಮಗಳಿಗೆ ಮತ್ತು ಜನ, ಜಾನುವಾರುಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗಿ ಆಲಮಟ್ಟಿ ಜಲಾಶಯಕ್ಕೆ ಬಂದು, ಅಲ್ಲಿಂದ ಸುಮಾರು 3 ಲಕ್ಷ ಕ್ಯುಸೆಕ್ ನೀರು ಬಿಟ್ಟಲ್ಲಿ ಮಾತ್ರ ಬಸವಸಾಗರದಿಂದ ಬಿಡುಗಡೆಯಾಗುವ ನೀರಿನಿಂದ ಜಿಲ್ಲೆಯ ಸುಮಾರು 15 ಹಳ್ಳಿಗಳು ಬಾಧಿತವಾಗುವ ಸಂಭವ ಒದಗಿಬರಬಹುದು. ಆದರೆ ಸದ್ಯಕ್ಕೆ ಅಪಾಯದಂತಹ ಪರಿಸ್ಥಿತಿ ಇಲ್ಲ ಎಂದು ಅವರು ಹೇಳಿದರು.
ಯೋಜನೆ ಸಿದ್ಧಪಡಿಸಿಕೊಳ್ಳಿ: ಮುಂಬರುವ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾದರೆ ನಿಭಾಯಿಸಲು ಅಧಿಕಾರಿಗಳು ಸಜ್ಜುಗೊಳ್ಳವಂತೆ ಈಗಾಗಲೇ ಸೂಚಿಸಲಾಗಿದೆ. ಅಧಿಕಾರಿಗಳು ಸಹ ಅಂಥ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕೆಂದು ಸೂಚಿಸಿದ ಅವರು, 2009ರಲ್ಲಿ ಉಂಟಾಗಿದ್ದ ಪ್ರವಾಹದ ಸಂದರ್ಭದಲ್ಲಿ ಬಾಧಿತವಾಗಿದ್ದ ಗ್ರಾಮಗಳ ಜನ, ಜಾನುವಾರು, ಅವರ ಆಸ್ತಿಪಾಸ್ತಿ ರಕ್ಷಣೆ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಗಂಜಿ ಕೇಂದ್ರಗಳಂತಹ ವ್ಯವಸ್ಥೆ ಕಲ್ಪಿಸುವ ಕುರಿತಂತೆ ಯೋಜನೆಗಳನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಶ್ವತ ಪರಿಹಾರಕ್ಕೆ ಯತ್ನ: ಬೆಚ್ಚಿಗಡ್ಡಿ ಸಮೀಪದ ನೀಲಕಂಠರಾಯಗಡ್ಡಿ ಗ್ರಾಮಕ್ಕೆ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ ಎಂಬುದನ್ನು ಗಮನಿಸಲಾಗಿದೆ. ಇಲ್ಲಿ ಖುದ್ದಾಗಿ ಪರಿಶೀಲನೆ ನಡೆಸಲಾಗಿದೆ. ಅಲ್ಲಿಯ ನಿವಾಸಿಗಳು ನದಿ ಈಜಿ ದಾಟುವಂತಹ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ನದಿಗೆ ತೂಗುಸೇತುವೆ ನಿರ್ಮಾಣ ಮಾಡುವ ಬಗ್ಗೆ ಜು. 27ರಂದು ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆಯಲು ಉದ್ದೇಶ ಹೊಂದಲಾಗಿದೆ.
ಅದರಂತೆ ಸಂಬಂಧಪಟ್ಟ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಈ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಸದ್ಯಕ್ಕೆ ಗ್ರಾಮಸ್ಥರಿಗೆ ಎಲ್ಲ ಪಡಿತರ ವಸ್ತುಗಳನ್ನು ನೀಡುವಂತಹ ವ್ಯವಸ್ಥೆ ಜಾರಿಯಲ್ಲಿಡಬೇಕು. ಮುಂಬರುವ ದಿನಗಳಲ್ಲಿ ಈ ಜನರಿಗೆ ಪಡಿತರ ಚೀಟಿ, ಔಷಧ ವ್ಯವಸ್ಥೆ ಕಲ್ಪಿಸಬೇಕು. ತುರ್ತು ಸಂದರ್ಭದಲ್ಲಿ ದೋಣಿಯ ವ್ಯವಸ್ಥೆ ಮಾಡಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಜಮಾದಾರ್ ಹೇಳಿದರು.
ಎಸ್ಪಿ ವಂಶಿಕೃಷ್ಣ, ಜಿಪಂ ಸಿಇಒ ಎಸ್.ಎ. ಜಿಲಾನಿ, ಕೆಬಿಜೆಎನ್ನೆಲ್ ಅಧಿಕಾರಿಗಳು ಇದ್ದರು.

ಬಸವಸಾಗರ ಜಲಾಶಯಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ
ಹುಣಸಗಿ: ಸುರಪುರ ತಾಲುಕಿನ ಬಸವಸಾಗರ ಜಲಾಶಯಕ್ಕೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಮತ್ತು ಎಸ್ಪಿ ವಂಶಿಕೃಷ್ಣ ಮಂಗಳವಾರ ಭೇಟಿ ನೀಡಿ ಜಲಾಶಯದ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಜಮಾದಾರ್, ಪ್ರಕೃತಿ ವಿಕೋಪ ನಿರ್ವಹಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಜಲಾಶಯಕ್ಕೆ ಒಳಹರಿವಿನ ನೀರಿನ ಪ್ರಮಾಣ ಹೆಚ್ಚಾಗಿದ್ದು, ನದಿಗೆ ಹರಿಸುವ ನೀರಿನ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ. ನಿಗಮದ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಎಲ್ಲ ರೀತಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ನದಿಗೆ ನೀರು ಹರಿಸುತ್ತಿರುವುದರಿಂದ ನದಿ ಪಾತ್ರದಲ್ಲಿನ ಗ್ರಾಮಗಳ ಸುರಕ್ಷತೆ ಬಗ್ಗೆ ಗಮನಹರಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಸದ್ಯ ಜಲಾಶಯಕ್ಕೆ 1.40 ಲಕ್ಷ ಕ್ಯುಸೆಕ್ ನೀರು ಒಳಹರಿವಿದ್ದು, ಅಷ್ಟೇ ಪ್ರಮಾಣದ ನೀರನ್ನು 20 ಗೇಟುಗಳ ಮೂಲಕ ನದಿಗೆ ಬಿಡಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಹಾಗೂ ಪರಿಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement