ಬುದ್ಧಿ ಹೇಳಿದಕ್ಕೆ ಆತ್ಮಹತ್ಯೆ ಯತ್ನ
ಗುಲ್ಬರ್ಗ: ಹೆತ್ತವರು ಬುದ್ಧಿವಾದ ಹೇಳಿದಕ್ಕೆ ವಿಷ ಸೇವಿಸಿ ಮಗಳೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಾಳಾ ಗ್ರಾಮದಲ್ಲಿ ನಡೆದಿದೆ. ದ್ವಿತೀಯ ಪಿಯು ಓದುತ್ತಿರುವ ಭಾಗಶ್ರೀ ಎಂಬ ವಿದ್ಯಾರ್ಥಿನಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಕೆ. ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗೆ ಶಿಕ್ಷೆ
ಗುಲ್ಬರ್ಗ: ಗುಲ್ಬರ್ಗದ ಜಾಂಭವೀರ ನಗರ ಗಾಜೀಪುರ ಅತ್ತರ ಕಾಂಪೌಂಡ್ ಬಡಾವಣೆಯ ಅವಿನಾಶ ಸಿದ್ರಾಮ ಕೊಡೆಕಲ್ ಕಲಬೆರಕೆ ಹೆಂಡ ತಯಾರಿಸಿ ಮಾರಾಟ ಮಾಡುತ್ತಿದ್ದ. ಈ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜೆಎಂಎಫ್ಸಿ ನ್ಯಾಯಾಲಯ ನ್ಯಾಯಮೂರ್ತಿ ಪೃಥ್ವಿರಾಜ ವರಣೀಕರ್ ಐಪಿಸಿ ಬೇರೆ ಬೇರೆ ಕಲಂಗಳಡಿ ಶಿಕ್ಷೆ ವಿಧಿಸಿದ್ದಾರೆ.ಆರೋಪಿಗೆ ಕಲಂ 32, 34 ಅಡಿ 6 ತಿಂಗಳ ಕಾರಾಗೃಹ ಮತ್ತು ರು. 20 ಸಾವಿರ ದಂಡ, 273, 284, ಭಾರತೀಯ ದಂಡ ಸಂಹಿತೆಯಡಿ 6 ತಿಂಗಳ ಕಾರಾಗೃಹ ಶಿಕ್ಷೆ ಮತ್ತು ರು. 2 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸ್ಟವ್ ಸಿಡಿದು ಸಾವು
ಅಡುಗೆ ಮಾಡುತ್ತಿದ್ದ ವೇಳೆ ಸ್ಟವ್ ಸಿಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ರಾಜಾಪುರ ಇಟ್ಟಿಗೆ ಭಟ್ಟಿಯಲ್ಲಿ ನಡೆದಿದೆ. ಶಿವ ತಂದೆ ಜಗನ್ನಾಥ ರಾಠೋಡ (25) ಎಂಬಾತನೆ ಮೃತಪಟ್ಟ ನತದೃಷ್ಟ. ಸ್ಟವ್ ಸಿಡಿದು ಗಂಭೀರವಾಗಿ ಗಾಯಗೊಂಡಿದ್ದ ಈತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ. ಗುಲ್ಬರ್ಗ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆತ್ಮಹತ್ಯೆ
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ಕದ್ದರಗಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗೀತಾ(24) ಎಂಬ ಮಹಿಳೆಯೇ ಆತ್ಮಹತ್ಯೆಗೆ ಶರಣಾದ ನತದೃಷ್ಟೆ. ಮೂರು ದಿನಗಳ ಹಿಂದೆ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಳು. ತೀವ್ರ ಸುಟ್ಟಗಾಯಗಳಾಗಿದ್ದ ಈಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಗಳವಾರ ಮೃತಪಟ್ಟಿದ್ದಾಳೆ. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕ್ಕಿ: ಕಾರ್ಮಿಕ ಬಲಿ
ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಸಾವಳಗಿ ಗ್ರಾಮದ ಸಮೀಪ ಟ್ರ್ಯಾಕ್ಟರ್ ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ನಡೆದಿದೆ. ಡಬರಾಬಾದ್ ಇಟ್ಟಂಗಿ ಭಟ್ಟಿಯಲ್ಲಿ ಕಾರ್ಮಿಕನಾಗಿದ್ದ ಶ್ರೀಧರ ತಂದೆ ಕಾಶಿನಾಥ (28) ಮೃತಪಟ್ಟ ದುರ್ದೈವಿ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಸಾವು
ಚಿತ್ತಾಪುರದ ಮರತೂರ ಗ್ರಾಮದ ವಿಜ್ಞಾನೇಶ್ವರ ಕಾಲೇಜು ಹತ್ತಿರ ದ್ವಿಚಕ್ರ ವಾಹನ ಜಾರಿಬಿದ್ದು, ಗಾಯಗೊಂಡಿದ್ದ ದ್ವಿಚಕ್ರ ಸವಾರ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಪ್ರಕಾಶ (32) ಎಂಬಾತ ಮೃತಪಟ್ಟ ದುರ್ದೈವಿ. ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.