'ಹಳಕಟ್ಟಿ ವಚನ ಗುಮ್ಮಟ'
ಕನ್ನಡಪ್ರಭ ವಾರ್ತೆ ಯಾದಗಿರಿ ಜು.23
ಇಂದು ನಾವೆಲ್ಲ ವಚನಗಳನ್ನು ಹಾಗೂ ಶರಣ ಸಾಹಿತ್ಯವನ್ನು ಓದುತ್ತಿದ್ದೇವೆಂದರೆ ಅದಕ್ಕೆ ಮುಖ್ಯ ಕಾರಣ ಫ.ಗು. ಹಳಕಟ್ಟಿಯವರು. ಅವರು ಶರಣ ಸಂಸ್ಕೃತಿ- ಸಾಹಿತ್ಯವನ್ನು ಸಂರಕ್ಷಿಸಿ ಪ್ರಕಟಿಸಿದ್ದಾರೆ ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ಗಾಜರಕೋಟದಲ್ಲಿ ಅರಿವು- ಆಚಾರ ಕಾರ್ಯಕ್ರಮದಲ್ಲಿ ಹಳಕಟ್ಟಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಶರಣರ ವಚನ ಸಾಹಿತ್ಯದ ಹಸ್ತಪ್ರತಿಗಳು ಅಲ್ಲಲ್ಲಿ ಚದುರಿ ಹೋಗಿದ್ದವು. ಹಳಕಟ್ಟಿಯವರು ಶರಣ ಸಾಹಿತ್ಯದ ರಕ್ಷಣೆಯ ಸಲುವಾಗಿ ಎಲ್ಲೆಡೆ ತಿರುಗಾಡಿ ವಚನ ಸಾಹಿತ್ಯದ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳನ್ನು ಕೈ ಬರಹದಲ್ಲಿ ಬರೆದು ಸಂಪಾದಿಸಿದರು. ತಮ್ಮ ಸ್ವಂತ ಮನೆಯನ್ನು ಮಾರಿ ಪ್ರಿಂಟಿಂಗ್ ಪ್ರೆಸ್ ತೆರೆದು ವಚನ ಸಂಪುಟಗಳನ್ನು ಮುದ್ರಣ ಮಾಡಿದರು ಎಂದರು.
ವಚನ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಆದ್ದರಿಂದಲೇ ಅವರನ್ನು ವಚನ ಸಾಹಿತ್ಯದ ಪಿತಾಮಹ, ವಚನ ಗುಮ್ಮಟ ಎನ್ನಲಾಗುತ್ತದೆ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಅಖಂಡೇಶ್ವರ ಹಿರೇಮಠ, ಫ.ಗು. ಹಳಕಟ್ಟೆಯವರ ಜೀವನ, ಸಾಧನೆಗಳ ಬಗ್ಗೆ ಸವಿಸ್ತಾರವಾಗಿ ವಿಚಾರ ಮಂಡಿಸಿದರು. ಸಿದ್ದಯ್ಯಸ್ವಾಮಿ ಮಠಪತಿ, ವಚನ ಸಾಹಿತ್ಯದ ಸಂರಕ್ಷಣೆಯ ಇತಿಹಾಸವನ್ನು ಮತ್ತು ವಿದ್ವಾಂಸರ ದೃಷ್ಟಿಯಲ್ಲಿ ಹಳಕಟ್ಟಿಯವರು ಕುರಿತಾಗಿ ಉಪನ್ಯಾಸ ನೀಡಿದರು.
ಪಾದಪೂಜೆ: ಸೇವಾ ಸಮಿತಿ ವತಿಯಿಂದ ಗುರು ಪೂರ್ಣಿಮೆಯ ನಿಮಿತ್ತ ಶಾಂತವೀರ ಸ್ವಾಮೀಜಿಯವರ ಪಾದಪೂಜೆ, ಸನ್ಮಾನವನ್ನು ನೆರವೇರಿಸಿದರು. ಶಂಕ್ರಪ್ಪ ಅರುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಜಲಿಂಗ ಪರಡಿ ಸ್ವಾಗತಿಸಿ, ವಂದಿಸಿದರು. ಶಂಭುಲಿಂಗಪ್ಪ ಅರುಣಿ, ಅಂಬ್ರಣ್ಣ ಗುರುಮಠಕಲ್ ಇತರರು ಇದ್ದರು.