ಕೃಷಿ ಅಧಿಕಾರಿಗಳಿಂದ ಹೆಸರು ಬೆಳೆ ಪರಿಶೀಲನೆ
ಯಾದಗಿರಿ: ತಾಲೂಕಿನ ಹತ್ತಿಕುಣಿ, ಯಡ್ಡಳ್ಳಿ, ಕಟಗಿ ಶಹಾಪುರ ಹಾಗೂ ಬಂದಳ್ಳಿ ಗ್ರಾಮದ ರೈತರ ಜಮೀನಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಹೆಸರು ಬೆಳೆಯ ಎಲೆ ಹಳದಿಯಾಗಿರುವುದನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೈತರೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದ ಅಧಿಕಾರಿಗಳು, ಕಳೆದ 15 ದಿನಗಳಿಂದ ಈ ಭಾಗದಲ್ಲಿ ಸತತ ಜಡಿ ಮಳೆಯಾಗಿರುವುದರಿಂದ ಭೂಮಿಯಲ್ಲಿ ತೇವಾಂಶ ಪ್ರಮಾಣ ಹೆಚ್ಚಾಗಿ ಹೆಸರು ಬೆಳೆಯ ಎಲೆ ಹಳದಿಯಾಗಿದೆ. ಯಾವುದೇ ಕಾರಣಕ್ಕೂ ರೈತರು ಆತಂಕ ಪಡುವ ಅಗತ್ಯವಿಲ್ಲ. ಜಮೀನಿನಲ್ಲಿ ನಿಂತ ನೀರನ್ನು ಮೊದಲು ಬಸಿಗಾಲುವೆ ಮಾಡುವ ಮೂಲಕ ನೀರು ಹೊರ ಹಾಕಬೇಕೆಂದು ಹೇಳಿದರು.
ಮಳೆ ನಿಂತ ಮೇಲೆ ಬೆಳೆಯಲ್ಲಿರುವ ಕಳೆಯನ್ನು ತೆಗೆಯಬೇಕು. ಅಂದಾಗ ಮಾತ್ರ ಬೆಳೆಯಲ್ಲಿ ಚೇತರಿಕೆ ಕಂಡು ಬರುತ್ತದೆ ಎಂದು ಸಲಹೆ ನೀಡಿದ ಅವರು, ರೈತರ ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಧರ್ಮಣ್ಣ, ವಿಶ್ವನಾಥ, ರೈತರಾದ ಭೀಮರಡ್ಡಿ ಕೌಳೂರ್, ಬಸಪ್ಪ, ಸಿದ್ದಣಗೌಡ ರಾಂಪುರಳ್ಳಿ, ದೇವಿಂದ್ರಪ್ಪ ಇದ್ದರು.
--