'ಕೋಲಿ ಸಮಾಜದ ಪರ ನಾನಿದ್ದೇನೆ'
ಕನ್ನಡಪ್ರಭ ವಾರ್ತೆ ಯಾದಗಿರಿ ಜು. 24
ಹಿಂದುಳಿದ ವರ್ಗದಿಂದಲೇ ಬಂದಿರುವ ನನಗೆ ಅವರ ನೋವಿನ ಬಗ್ಗೆ ಗೊತ್ತಿದೆ. ಹಾಗೆಯೇ ಹಿಂದುಳಿದ ವರ್ಗದ ಜನಾಂಗಗಳೆಲ್ಲ ಒಂದೇ. ಕೋಲಿ ಸಮಾಜದ ಸಮಸ್ಯೆಗಳನ್ನು ಅತೀ ಸಮೀಪದಿಂದ ಕಂಡಿದ್ದೇನೆ. ಹೀಗಾಗಿ ಕೋಲಿ ಸಮಾಜದ ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮೊಂದಿಗೆ ನಾನಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೋಲಿ ಸಮಾಜದ ರಾಜ್ಯಧ್ಯಕ್ಷ ವಿಠ್ಠಲ ಹೇರೂರ ನೇತೃತ್ವದಲ್ಲಿ ಮಂಗಳವಾರ ನಡೆದ ಟೋಕರಿ ಕೋಲಿಯ ಪರ್ಯಾಯ ಪದ ಜಾತಿಗಳಾದ ಕಬ್ಬಲಿಗ, ಕಬ್ಬೇರ, ಗಂಗಾಮತ ಮುಂತಾದುವುಗಳನ್ನು ಎಸ್‌ಟಿ ಸೇರ್ಪಡೆಗಾಗಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ಸದನದಲ್ಲಿ ಧ್ವನಿಯೆತ್ತುವೆ- ಎಚ್ಡಿಕೆ: ಎಸ್‌ಟಿ ಸೇರ್ಪಡೆಗಾಗಿ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಕೋಲಿ ಸಮಾಜದ ಸಮಸ್ಯೆಗಳ ಪರವಾಗಿ ಸದನದಲ್ಲಿ ಧ್ವನಿ ಎತ್ತುವುದಾಗಿ ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿ, ಅಧ್ಯಯನದ ವರದಿಯನ್ನು ತಕ್ಷಣವೇ ತರಿಸಿಕೊಳ್ಳುವುದಾಗಿ ಹೇಳಿದರು. ಸಚಿವ ಬಾಬುರಾವ ಚಿಂಚನಸೂರ ಮತ್ತು ಶಾಸಕರಾದ ಮಧು ಬಂಗಾರಪ್ಪ, ಮನೋಹರ ತಹಸೀಲ್ದಾರ್, ಶಿವಶಂಕರ ಕೋಳಿವಾಡ, ಶಿವಣ್ಣ ಇತರ ಶಾಸಕರು ವೇದಿಕೆಯಲ್ಲಿದ್ದರು.
ಸಿಎಂ ಆಗಮನಕ್ಕೆ ಪಟ್ಟು: ಮೈಸೂರಿನ ಉರಿಲಿಂಗಪೆದ್ದಿ ಮಠಾಧೀಶ ಜ್ಞಾನಪ್ರಕಾಶ ಸ್ವಾಮೀಜಿ ಉಪನ್ಯಾಸ ನೀಡಿದರು. ಮಂಗಳವಾರ ಬೆ.11ಕ್ಕೆ ಆರಂಭವಾದ ರ್ಯಾಲಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದದ್ದರಿಂದ ರಾತ್ರಿ 8ರವರೆಗೂ ರ್ಯಾಲಿ ಸಾಗಿತು. ಸಿಎಂ ಮನೆಗೆ ನಮ್ಮ ನಡಿಗೆ ಎಂದು ನಿರ್ಧಾರ ತೆಗೆದುಕೊಂಡ ಕೆಲ ಕ್ಷಣಗಳಲ್ಲೇ ಸಿದ್ದರಾಮಯ್ಯನವರು ಸ್ಥಳಕ್ಕೆ ಬರುವುದಾಗಿ ಸಂದೇಶ ಕಳುಹಿಸಿದರು. ನಂತರ ಅವರು ಆಗಮಿಸಿ ಸಮಾಜದ ಮನವಿಯನ್ನು ಸ್ವೀಕರಿಸಿದರು.
ಅಂಬಿಗರ ಚೌಡಯ್ಯನವರ ಪೀಠದ ಅಧ್ಯಕ್ಷ ಶಾಂತಮುನಿ ಸ್ವಾಮೀಜಿ, ದೇವಾಪುರದ ಬಸವಾನಂದ ಸ್ವಾಮಿ, ಡಾ. ಬುಳ್ಳಾ, ಶಂಕರಕಟ್ಟಿ ಸಾಂಗವಿ, ಚಿನ್ನಸ್ವಾಮಿ ಕನಕಪುರ, ಶೋಭಾ ಭಾಣೆ, ಗಂಗಾಧರ ಬೆಳಗಾವಿ, ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಇತರರು ಇದ್ದರು.