ರೈತರ ಮೇಲೆ ಕಾಡುಹಂದಿ ದಾಳಿ
ಗುಲ್ಬರ್ಗ: ಹೊಲದಲ್ಲಿ ಎತ್ತುಗಳನ್ನು ಮೇಯಿಸುತ್ತಿದ್ದ ರೈತನೊಬ್ಬನ ಮೇಲೆ ಕಾಡುಹಂದಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಗುಲ್ಬರ್ಗ ತಾಲೂಕಿನ ಬೇಲೂರ್(ಜೆ) ಗ್ರಾಮದಲ್ಲಿ ಬುಧವಾರ ನಡೆದಿದೆ. ಮಾಳಪ್ಪ ತಂದೆ ಸಿದ್ರಾಮಪ್ಪ ಪೂಜಾರಿ(50) ಎಂಬ ರೈತನ ಮೇಲೆ ಕಾಡು ಹಂದಿ ದಾಳಿ ನಡೆಸಿದ್ದು, ಗಾಯಗಳಾಗಿವೆ. ಹಂದಿ ದಾಳಿಯಿಂದ ಗಾಯಗೊಂಡಿರುವ ರೈತನನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಕಸ್ಮಿಕ; ರೈತ ಸಾವು
ಗುಲ್ಬರ್ಗ: ಬಾವಿಯಲ್ಲಿ ಬಿದ್ದು ರೈತನೊಬ್ಬ ಮೃತಪಟ್ಟ ಘಟನೆ ಕೆರಿಭೋಸಗಾ ಗ್ರಾಮದಲ್ಲಿ ನಡೆದಿದೆ. ಬಾಬು ತಂದೆ ಬೆಳ್ಳೆಪ್ಪ (40) ಎಂಬ ರೈತನೇ ಮೃತಪಟ್ಟ ದುರ್ದೈವಿ. ಈತ ಸ್ವಂತ ಹೊಲದಲ್ಲಿರುವ ಬಾವಿಯಿಂದ ನೀರು ತರಲು ಹೋದಾಗ ಕಾಲುಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರ ಸಾವು
ಗುಲ್ಬರ್ಗ: ಕ್ರೂಸರ್ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಔರಾದ್ ಹತ್ತಿರ ಸಂಭವಿಸಿದೆ. ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ರೇವಪ್ಪ ತಂದೆ ಮಲಕಪ್ಪ ಶಿಂಧೆ (28) ಎಂಬಾತನೆ ಮೃತಪಟ್ಟ ನತದೃಷ್ಟ. ಈತ ಆಳಂದನಿಂದ ದ್ವಿಚಕ್ರ ವಾಹನದ ಮೇಲೆ ಅಂಕಲಗಾ ಗ್ರಾಮಕ್ಕೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗ- ನಾಣ್ಯ ಕಳವು
ಗುಲ್ಬರ್ಗ: ಮನೆ ಬೀಗ ಮುರಿದು ಕಳ್ಳರು 1 ಲಕ್ಷ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋದ ಘಟನೆ ನಗರದ ಖೂಬಾ ಪ್ಲಾಟ್‌ನಲ್ಲಿರುವ ಬಾಲ್ ಘಾಟ್ ಕಾಂಪೌಂಡ್‌ನಲ್ಲಿ ನಡೆದಿದೆ. ಎಂಆರ್ ಆಗಿ ಕೆಲಸ ನಿರ್ವಹಿಸುತ್ತಿರುವ ನವೀದ್ ಅಹ್ಮದ್ ತಂದೆ ಸಂಗ್ರಾಮ ಎಂಬುವರ ಮನೆ ಬೀಗ ಮುರಿದು 35 ಗ್ರಾಂ ಬಂಗಾರ ಮತ್ತು ರು. 3 ಸಾವಿರ ನಗದು ಸೇರಿ ಒಟ್ಟು ರು. 1 ಲಕ್ಷ ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋಗಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯ ಆತ್ಮಹತ್ಯೆ
ಗುಲ್ಬರ್ಗ: ಇಲ್ಲಿನ ವಿದ್ಯಾನಗರದ ನಿವಾಸಿಯಾಗಿರುವ ವೈದ್ಯರೊಬ್ಬರು ಮೈಮೇಲೆ ಸೀಮೆಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಡಾ. ಗಿರೀಶ (38) ಎಂಬ ವೈದ್ಯರೇ ಆತ್ಮಹತ್ಯೆ ಮಾಡಿಕೊಂಡವರು. ಇವರು ನಗರದ ಆಲ್ ಬ್ರದರ್ ಟೆಂಡಲ್ ಕಾಲೇಜಿನಲ್ಲಿ ದಂತ ವೈದ್ಯರಾಗಿ ಮತ್ತು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ತಾಯಿ ನಿಧನ ಹೊಂದಿರುವುದು ಮತ್ತು ತನಗೆ ಆಗಿರುವ ಮೂಲವ್ಯಾಧಿ ಗುಣಮುಖವಾಗದೆ ಇರುವುದರಿಂದ ಮನನೊಂದ ವೈದ್ಯರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.