'ಸಂಸ್ಕೃತಿ, ಸಂಸ್ಕಾರದಿಂದ ವ್ಯಕ್ತಿತ್ವ ವಿಕಸನ ಸಾಧ್ಯ'
ಸುರಪುರ: ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನ ಹೊಂದಿದರೆ ಸಾಲದು. ಅದರ ಜೊತೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಒಲವು ಬೆಳಸಿಕೊಳ್ಳಬೇಕು. ಸಾಹಿತ್ಯ, ಸಂಸ್ಕೃತಿ, ಸಂಸ್ಕಾರದಿಂದ ನಿಮ್ಮ ವ್ಯಕ್ತಿತ್ವ ವಿಕಸನವಾಗಲು ಸಾಧ್ಯವಾಗುತ್ತದೆ ಎಂದು ಗುಲ್ಬರ್ಗ ಕಾಯಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ್ ಹೇಳಿದರು.
ಇಲ್ಲಿಯ ವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜ್ಞಾನಪೀಠ ಗಾರುಡಿಗ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭವ್ಯ ಪರಂಪರೆಯುಳ್ಳ ಸುರಪುರ ಇತಿಹಾಸ ಹಾಗೂ ಐತಿಹಾಸಿಕ ಕುರುಹಗಳ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಮರಾಠಿಗರಾಗಿದ್ದರೂ ಕನ್ನಡದ ಕೆಚ್ಚು: ಸಾಹಿತಿ ಸಾಹೇಬಗೌಡ ಬಿರಾದಾರ, ಗಿರೀಶ ಕರ್ನಾಡ್ರ ಕುರಿತು ಉಪನ್ಯಾಸ ನೀಡಿ, ಕರ್ನಾಡರು ಮೂಲತಃ ಮರಾಠಿಗರಾಗಿದ್ದು ಅವರಲ್ಲಿ ಕನ್ನಡದ ಕೆಚ್ಚು ಅಪಾರವಾಗಿತ್ತು ಎಂದರು. ಅವರೊಬ್ಬ ರಂಗ ಕಲಾವಿದರು ಎಂದು ಬಣ್ಣಿಸಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಶಾಂತಪ್ಪ ಬೂದಿಹಾಳ, ಚುಟುಕು ಸಾಹಿತಿ ನಾಗಪ್ಪ ತ್ರಿವೇದಿ, ತಿರುಮಲರಾವ ಅವಂಟಿ ಮತ್ತಿತರರಿದ್ದರು.