ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಲುವೆಯಲ್ಲಿ ನೀರು, ರೈತರ ಚಿತ್ತ ಹೊಲದತ್ತ

Lingaraj Badiger
Updated On : 26 Jul 2013, 11:54 am

ಹುಣಸಗಿ: ಅನೇಕ ತಿಂಗಳಿಂದ ಬರಿದಾಗಿದ್ದ ಕಾಲುವೆಗಳನ್ನು ನೋಡಿ ಬೇಸತ್ತಿದ ರೈತರು ಸದ್ಯ ತುಂಬಿ ತುಳುಕುವ ಕಾಲುವೆಗಳನ್ನು ಕಂಡು ಖುಷಿ ಆಗಿದ್ದಾರೆ. ನಾರಾಯಣಪುರ ಜಲಾಶಯದಿಂದ ಕಾಲುವೆಗಳಲ್ಲಿ ನೀರು ಹರಿಸಲಾಗಿದ್ದು, ನೀರನ್ನು ತಮ್ಮ ಹೊಲ ಗದ್ದೆಗಳಿಗೆ ಹರಿಸುವಲ್ಲಿ ರೈತರು ನಿರತರಾಗಿದ್ದಾರೆ. ಬತ್ತ ನಾಟಿ ಮಾಡಲು ಸಿದ್ದರಾಗಿದ್ದು, ಕೃಷಿ ಕಾರ್ಮಿಕರೊಂದಿಗೆ ಗದ್ದೆಗಳತ್ತ ಮುಖ ಮಾಡಿದ್ದಾರೆ.
ನಾಟಿಗೆ ತಯಾರಿ: ಕಳೆದ ಎರಡು ವರ್ಷಗಳಿಂದ ಬೇಸಿಗೆ ಹಂಗಾಮಿನ ಬೆಳೆ ಬಾರದೇ ಕಂಗಾಲಾಗಿದ್ದ ರೈತರು ಸದ್ಯ ಬತ್ತ ನಾಟಿ ಮಾಡಲು ಎಲ್ಲ ರೀತಿಯಿಂದಲೂ ಸಜ್ಜಾಗುತ್ತಿದ್ದಾರೆ. ಗದ್ದೆಯನ್ನು ಹದಗೊಳಿಸುವುದು, ಗೊಬ್ಬರ ಹಾಕಿ ನಾಟಿಗೆ ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಬಣಗುಡುತ್ತಿದ್ದ ಹೊಲ, ಗದ್ದೆಗಳಲ್ಲಿ ಇದೀಗ ರೈತರು, ಕಾರ್ಮಿಕರು ಕಾಣಿಸಿಕೊಂಡು ತಮ್ಮ ನಿತ್ಯದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವರ್ಷ ಜುಲೈ ತಿಂಗಳ ಎರಡನೇ ವಾರದಲ್ಲಿಯೇ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ಬಹುತೇಕ ಜನ ರೈತರು ಗದ್ದೆಗಳಿಗೆ ನೀರು ತುಂಬಿಸುವ ಮತ್ತು ಸಸಿಮಡಿಗಳ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.
ಭರ್ಜರಿ ಸಿದ್ಧತೆ: ಕೆಲ ರೈತರು ಕೊಳವೆ ಬಾವಿ, ತೆರೆದ ಬಾವಿಗಳಿರುವವರ ಜಮೀನನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಂಡು ಅಲ್ಲಿ ಬತ್ತದ ಸಸಿಮಡಿಗಳನ್ನು ಹಾಕಿಕೊಂಡಿದ್ದರೆ, ಇನ್ನು ಕೆಲವರು ಮತ್ತೊಬ್ಬರಿಂದ ಬತ್ತದ ಸಸಿಗಳನ್ನು ಖರೀದಿಸಿ ನಾಟಿ ಮಾಡಲು ಅಣಿಗೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಹುಣಸಗಿ ಮತ್ತು ಸುತ್ತ ಮುತ್ತಲಿನ ಗ್ರಾಮಗಳಾದ ವಜ್ಜಲ್, ಬಲಶೆಟ್ಟಿಹಾಳ, ಇಸಾಂಪೂರ, ಅರಕೇರಾ (ಜೆ.), ಗುಳಬಾಳ, ಗೆದ್ದಲಮರಿ, ಕುಪ್ಪಿ, ದ್ಯಾಮನಹಾಳ, ಕಾಮನಟಗಿ ಸೇರಿದಂತೆ ಅನೇಕ ನೀರಾವರಿ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿವೆ. ಟ್ರ್ಯಾಕ್ಟರ್ ಹಾಗೂ ಇತರೆ ಕೃಷಿ ಯಂತ್ರೋಪಕರಣಗಳಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಭಾರೀ ಬೇಡಿಕೆ ಬಂದಿದೆ. ಹೀಗಾಗಿ ಈ ಭಾಗದ ರೈತರಿಗೆ ಇನ್ನು ಒಂದು ತಿಂಗಳ ಕಾಲ ಪುರಸೊತ್ತಿಲ್ಲವೆಂದು ಕಾಮನಟಗಿ ಗ್ರಾಮದ ರೈತ ರಂಗಪ್ಪ ಡಂಗಿ ಮತ್ತು ದ್ಯಾಮನಹಾಳ ಗ್ರಾಮದ ರೈತ ಲಕ್ಷ್ಮೀಕಾಂತ ಕುಲಕರ್ಣಿ ಹೇಳುತ್ತಾರೆ.
ಮಳೆಯಿಂದ ಮನೆಗಳಿಗೆ ಹಾನಿ
ಯಾದಗಿರಿ: ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಮಳೆಯಿಂದಾಗಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮಣ್ಣು ಹಾಗೂ ಕಲ್ಲಿನ ಮನೆಗಳು ಬಿದ್ದಿದ್ದು, ಅಪಾರ ನಷ್ಟ ಅನುಭವಿಸಿದ್ದಾರೆ. ಗ್ರಾಮದ ಮಸ್ತೆಪ್ಪ, ಶಿವರಾಜ, ಯಂಕಪ್ಪ ಪಿಡೇನೋರ, ಮಲ್ಲಪ್ಪ ಹರಿಜನ, ದೇವಪ್ಪ ಬಡಗೇರ, ಶರಣಮ್ಮ ಇಳಿಗೇರ ಸೇರಿದಂತೆ ಅನೇಕರ ಮನೆಗಳ ಛಾವಣಿ ಕುಸಿದಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಗೋಡೆ ಹಾಗೂ ಛಾವಣಿ ನೆನೆದು ಬಿದ್ದಿವೆ. ಮಂಗಳವಾರ ಈ ಘಟನೆ ಜರುಗಿದೆ. ಗ್ರಾಮ ಲೆಕ್ಕಾಧಿಕಾರಿ ಮಮತಾ ಪರಿಶೀಲಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement