ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಸೆರೆ
ಕನ್ನಡಪ್ರಭ ವಾರ್ತೆ,ಗುಲ್ಬರ್ಗ,ಜು.25
ನಗರದ ಆಳಂದ ರಸ್ತೆಯಲ್ಲಿರುವ ಚೋರ್ ಗುಂಬಜ್‌ನಲ್ಲಿ ಈಚೆಗೆ ನಡೆದ ವ್ಯಕ್ತಿಯೊಬ್ಬನ ಕೊಲೆ ರಹಸ್ಯ ಬೇಧಿಸುವಲ್ಲಿ ಗುಲ್ಬರ್ಗ ಪೊಲೀಸರು ಯಶಸ್ವಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖುರ್ಷಿದ್ ಅಹ್ಮದ್, ಗೌಸಪಾಶಾ, ಅನ್ವರ್ ಹುಸೇನ್ ಮತ್ತು ಶಮಶೋದ್ದೀನ್ ಅಲಿಯಾಸ್ ಇರ್ಫಾನ್ ಎಂಬುವರನ್ನು ಬಂಧಿಸಿ ಅವರಿಂದ ಟಿವಿಎಸ್ ಸ್ಕೂಟಿಯ ಬಿಡಿಭಾಗ ಮತ್ತು ಕೊಲೆಗೆ ಬಳಸಿದ ತಲೆದಿಂಬು, ದ್ವಿಚಕ್ರ ವಾಹನ, ಪೆಟ್ರೋಲ್ ತರಲು ಬಳಸಿದ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 9ರಂದು ರಾತ್ರಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಲಾಗಿತ್ತು. ಕೊಲೆಯಾದ ವ್ಯಕ್ತಿಯಾರು ಮತ್ತು ಕೊಲೆಗೆ ಕಾರಣವೇನು ಎಂಬುವುದು ನಿಗೂಢವಾಗಿಯೇ ಉಳಿದಿತ್ತು.
ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರ ತಂಡ ಕೊನೆಗೂ ಕೊಲೆ ರಹಸ್ಯವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೋಜಾ ಬಡಾವಣೆಯ ಇಕ್ಬಾಲ್ (50) ಕೊಲೆಯಾದ ವ್ಯಕ್ತಿ ಎಂಬುವುದು ಪೊಲೀಸರು ಗುರುತಿಸಿದ್ದಾರೆ.
ದೂರು ದಾಖಲು: ಅಪರಿಚಿತ ವ್ಯಕ್ತಿಯ ಕೊಲೆ ಕುರಿತಂತೆ ಪೊಲೀಸರು ನಗರದ ವಿವಿಧೆಡೆ ಭಿತ್ತಿಪತ್ರಗಳನ್ನು ಅಂಟಿಸಿದ್ದರು. ಇದೇ ಸಂದರ್ಭದಲ್ಲಿ ಕೊಲೆಯಾದ ಇಕ್ಬಾಲ್ ಪುತ್ರ ಶಹಾಬಾಜ್ ರೋಜಾ ಪೊಲೀಸ್ ಠಾಣೆಯಲ್ಲಿ ತನ್ನ ತಂದೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದ.
ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಶವದ ಭಾವಚಿತ್ರಗಳನ್ನು ಆತನಿಗೆ ತೋರಿಸಿದಾಗ ಶಹಾಬಾಜ್ ಇದು ತನ್ನ ತಂದೆಯ ಶವ ಎಂದು ಗುರುತಿಸಿದ ನಂತರ ತನಿಖೆ ನಡೆಸಿದ ಪೊಲೀಸರು ಇಕ್ಬಾಲ್‌ನ ವಿರೋಧಿಗಳು ಯಾರು ಎಂಬುವುದನ್ನು ತಿಳಿದುಕೊಂಡು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎ ಉಪ ವಿಭಾಗದ ಡಿಎಸ್ಪಿ ಉದಯಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಸ್ಮಾ ಅಲಿಯಾಸ್ ಅಮಿನಾಬೇಗಂ ಗಂಡ ಅನ್ವರ್ ಹುಸೇನ್ ಎಂಬ ಮಹಿಳೆ ಇಕ್ಬಾಲ್‌ನ ಮನೆಯಲ್ಲಿ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದಾಗ ಇಕ್ಬಾಲ್‌ನ ಜತೆ ಸಂಬಂಧ ಬೆಳೆದಿತ್ತು. ಆಕೆಯ ಪತಿ ಅನ್ವರ್ ಹುಸೇನ್ ಮೃತಪಟ್ಟ ಮೇಲೆ ಖುರ್ಷಿದ್ ಅಹ್ಮದ್ ಎಂಬಾತನೊಂದಿಗೆ ಎರಡನೇ ಮದುವೆಯಾಗಿದ್ದಳು. ಮದುವೆಯ ನಂತರ ವೀಸಾ, ಪಾಸ್‌ಫೋರ್ಟ್ ತೆಗೆಸಿ ದುಬೈಗೆ ಹೋಗಿದ್ದಳು.
ಅನೈತಿಕ ಸಂಬಂಧ ಕಾರಣ: ಖುರ್ಷಿದ ಜತೆ ಎರಡನೇ ಮದುವೆಯಾದ ನಂತರವೂ ಇಕ್ಬಾಲ್ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಆತನ ಜತೆಗಿನ ಸಂಬಂಧ ಕಳೆದುಕೊಳ್ಳುವಂತೆ ಖುರ್ಷಿದ್ ಆಸ್ಮಾಗೆ ಬುದ್ದಿವಾದ ಹೇಳಿದ್ದರೂ, ಇಕ್ಬಾಲ್ ಜತೆ ಸಂಬಂಧ ಮುಂದುವರಿಸಿ ಆತನೊಂದಿಗೆ ದುಬೈನಿಂದ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಆಸ್ಮಾಳ ಮಗಳ ಮೇಲೂ ಇಕ್ಬಾಲ್ ಕಣ್ಣು ಹಾಕಿದ್ದನು. ಇದರಿಂದ ಬೇಸತ್ತ ಖುರ್ಷಿದ್ ಅಹ್ಮದ್ ಗೌಸ್ ಪಾಶಾ, ಅನ್ವರ್ ಹುಸೇನ್, ಇರ್ಫಾನ್ ಅಲಿಯಾಸ್ ಶಹಾಬುದ್ದೀನ್ ಅವರೊಂದಿಗೆ ಸೇರಿ ಇಕ್ಬಾಲ್‌ನನ್ನು ಕೊಲೆಗೈದು ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದರು ಎಂದು ಡಿಎಸ್ಪಿ ಉದಯಕುಮಾರ್ ವಿವರಿಸಿದರು.
ಕೊಲೆ ಕೃತ್ಯದಲ್ಲಿ ಭಾಗಿಯಾದ ಇವರು ಇಕ್ಬಾಲ್‌ನ ಟಿವಿಎಸ್ ಸ್ಕೂಟಿಯನ್ನು ಗುರುತು ಸಿಗದಂತೆ ಅದರ ಬಿಡಿ ಭಾಗಗಳನ್ನು ಪ್ರತ್ಯೇಕಿಸಿ ಮಾರಾಟ ಮಾಡಿದ್ದರು. ಅದನ್ನು ಸಹಿತ ಮತ್ತು ಕೊಲೆಗೆ ಬಳಸಿದ ತಲೆದಿಂಬು, ದ್ವಿಚಕ್ರ ವಾಹನ, ಪೆಟ್ರೋಲ್ ತರಲು ಬಳಸಿದ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಎಸ್ಪಿ ಅಮಿತಸಿಂಗ್, ಹೆಚ್ಚುವರಿ ಎಸ್ಪಿ ಕಾಶಿನಾಥ ತಳಕೇರಿ, ಎ. ಉಪ ವಿಭಾಗದ ಡಿಎಸ್ಪಿ ಉದಯಕುಮಾರ್ ಅವರ ಮಾರ್ಗದರ್ಶನದಲ್ಲಿ ರೋಜಾ ಪಿಐ ನಾರಾಯಣಪ್ಪ, ಬ್ರಹ್ಮಪುರ ಪಿಐ ಶರಣಬಸವ ಭಜಂತ್ರಿ, ರಾಘವೇಂದ್ರ ನಗರ ಪಿಎಸ್‌ಐ ಪರಶುರಾಮ ಇಕ್ಕಳಕಿ ಹಾಗೂ ಸಿಬ್ಬಂದಿ ಕೊಲೆ ರಹಸ್ಯವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.