ಜ್ವಲಂತ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ, ಯಾದಗಿರಿ, ಜು.25
ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ನೇತೃತ್ವದಲ್ಲಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಜನತೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಮತ್ತು ಕಾಲೇಜು ವಿದ್ಯಾರ್ಥಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಶಿಕ್ಷಣ ಕೇಂದ್ರ ಆರಂಭಿಸಿ: ಯಾದಗಿರಿ ನಗರವನ್ನು ಸ್ವಚ್ಛಗೊಳಿಸಿ, ರಸ್ತೆ ದುರಸ್ತಿ ಮಾಡಿ, ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು ನೇಮಕ ಮಾಡಿ, ಖಾಲಿಯಿರುವ ಸಾವಿರಾರು ಶಿಕ್ಷಕರ ಹುದ್ದೆಗಳನ್ನು ಕೂಡಲೆ ಭರ್ತಿಮಾಡಿ. ಕುಡಿಯುವ ನೀರಿನ ಖಾಸಗೀಕರಣ ಕೈ ಬಿಡಿ, ಮೆಡಿಕಲ್-ಎಂಜಿನಿಯರಿಂಗ್-ಡಿಪ್ಲೋಮಾ-ಐಟಿಐ ಕಾಲೇಜು ಆರಂಭಿಸಿ, ಮಹಿಳಾ ಪದವಿ ಕಾಲೇಜು ಆರಂಭಿಸಿ, ರೈತರ ಜಮೀನಿಗೆ ಪಟ್ಟಾ ನೀಡಿ ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಜನರಿಗೆ ಪ್ಲೋರೈಡ್-ಆರ್ಸೆನಿಕ್ ರಸಾಯನಿಕ ಮಿಶ್ರಿತ ನೀರು ಕುಡಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹರಿಸುವಂತೆ ಆಗ್ರಹಪಡಿಸಿದರು.
ವಿವಿಧ ಗ್ರಾಮಗಳ ಮಂದಿ: ಯಾದಗಿರಿ ನಗರದ ಅಜೀಜ್ ಕಾಲನಿ, ಮಧನಪುರ್ ಗಲ್ಲಿ, ಶಿವನಗರ, ವಿವೇಕಾನಂದ ನಗರ, ಚಿರಂಜೀವಿ ನಗರ, ಬಸವೇಶ್ವರ ನಗರ, ಬಾಲಾಜಿ ನಗರ, ಆಸರ್ ಮೋಹಲ್ಲಾ ಬಡಾವಣೆಗಳು ಮತ್ತು ಇಮ್ಲಾಪುರ್, ಇಂದಿರಾ ನಗರ, ಧರ್ಮಪುರ್, ಧರ್ಮಪುರ ತಾಂಡ, ಚಿಂತನಹಳ್ಳಿ, ಚಿಂತನಹಳ್ಳಿ ತಾಂಡ, ಸುಭಾಸ್ ನಗರ, ಮಗದಂಪುರ ತಾಂಡಾ, ಯಂಪಾಡ, ಯಂಪಾಡ ತಾಂಡಾ, ಚೆಪೆಟ್ಲಾ, ಚಂದುನಾಯ್ಕ ತಾಂಡಾ, ಬಾಚವಾರ ಮತ್ತಿತರ ಗ್ರಾಮಗಳ ನೂರಾರು ನಾಗರಿಕರು, ರೈತರು, ಮಹಿಳೆಯರು ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಎಸ್ಯುಸಿಐ ಗುಲ್ಬರ್ಗ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್, ಜಿಲ್ಲಾ ಸಂಚಾಲಕ ಕೆ. ಸೋಮಶೇಖರ್ ಮಾತನಾಡಿದರು. ಸದಸ್ಯೆ ಡಿ. ಉಮಾದೇವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರಮ್ಮ ಸಿ.ಕೆ., ಸಿದ್ದಪ್ಪ ಬಡಿಗೇರ್, ಖಾಜಾ ಮೈನೋದ್ಧೀನ್, ವೆಂಕಟರೆಡ್ಡಿ ಸಕ್ಲಾಸ್ ಪಲ್ಲಿ, ಪೀತ್ಯಾ ನಾಯ್ಕ, ರವಿ, ರುದ್ರಪ್ಪ, ಧೂಳಪ್ಪ, ಲಚಮಯ್ಯ, ರಾಮಲಿಂಗಪ್ಪ, ನರಸಪ್ಪ, ನರಸಪ್ಪ ಬದ್ದಿಗಿ, ಮಗದಂಪುರ ತಾಂಡಾದ ಶಂಕರ, ಹಣಮಂತ ಪೂಜಾರಿ, ಲಚ್ಚು ನಾಯ್ಕ, ಧರ್ಮಾ ನಾಯ್ಕ, ಶಂಕರ್ ರಾಠೋಡ್, ಕಾಲೇಜು ಪ್ರತಿನಿಧಿಗಳಾದ ಗಾಳೆಪ್ಪ, ಸಂತೋಷ್, ಅನೀಲ, ನಿರ್ಮಲ, ಪರಶುರಾಮ, ಮಂಜುಳಾ, ಶಶಾಂಕ, ರಮೇಶ, ಭಾರತಿ, ಪೂಜಾ ಇದ್ದರು. ಮನವಿಯನ್ನು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರಿಗೆ ಸಲ್ಲಿಸಲಾಯಿತು.