ನಾಳೆಯಿಂದ ವಸ್ತು ಪ್ರದರ್ಶನ
ಗುಲ್ಬರ್ಗ: ನಗರದ ಎಸ್‌ಟಿಬಿಟಿ ಹತ್ತಿರವಿರುವ ಮಹ್ಮದಿ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ಜು.27 ರಂದು ಮಧ್ಯಾಹ್ನ 2ಕ್ಕೆ ಇನ್‌ಸ್ಪೈರ್ ಅವಾರ್ಡ್ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.
ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ವಸ್ತುಪ್ರದರ್ಶನ ಉದ್ಘಾಟಿಸುವರು. ಗುಲ್ಬರ್ಗ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ, ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಶರಣಪ್ರಕಾಶ ಪಾಟೀಲ್, ಬೀದರ್ ಲೋಕಸಭಾ ಸದಸ್ಯ ಡಾ. ಎನ್. ಧರ್ಮಸಿಂಗ್, ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಹಾಗೂ ಜಿಪಂ ಅಧ್ಯಕ್ಷ ಶರಣಪ್ಪ ಪಾಟೀಲ್ ತೇಲ್ಕೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ವಸ್ತು ಪ್ರದರ್ಶನ ಪ್ರಾರಂಭಿಸಿದ್ದು, ಜುಲೈ 27ರಿಂದ 30ರವರೆಗೆ ಹಮ್ಮಿಕೊಂಡಿದೆ.
ಜು.27 ಹಾಗೂ 28 ರಂದು ಆಳಂದ, ಗುಲ್ಬರ್ಗ ಉತ್ತರ ಮತ್ತು ಗುಲ್ಬರ್ಗ ದಕ್ಷಿಣ ಎನ್‌ಸ್ಪೈರ್ ಅವಾರ್ಡ್ ಪಡೆದ ವಿದ್ಯಾರ್ಥಿಗಳು ಮತ್ತು ಜು.29 ಮತ್ತು 30ರಂದು ಚಿತ್ತಾಪುರ ಮತ್ತು ಸೇಡಂ ವಿದ್ಯಾರ್ಥಿಗಳು ತಪ್ಪದೇ ತಮ್ಮ ಮಾರ್ಗದರ್ಶಕ ಶಿಕ್ಷಕರೊಂದಿಗೆ ಕಡ್ಡಾಯವಾಗಿ ಭಾಗವಹಿಸುವಂತೆ ಕೋರಲಾಗಿದೆ.
ಅವಾರ್ಡ್ ಪಡೆದ ಶಾಲಾ ಮುಖ್ಯ ಗುರುಗಳು ಹೆಚ್ಚಿನ ಮಾಹಿತಿಗೆ ತಮ್ಮ ತಾಲೂಕಿನ ಕ್ಷೇತ್ರ ಶಿಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.