ಪ್ರಯಾಣೋತ್ಸವ ಯೋಜನೆ: ಮುಂಗಡ ಆಸನಕ್ಕೆ ರಿಯಾಯ್ತಿ
ಕನ್ನಡಪ್ರಭ ವಾರ್ತೆ,ಗುಲ್ಬರ್ಗ,ಜು.25
ಗುಲ್ಬರ್ಗ ಕೇಂದ್ರವಾಗಿರುವ ಹಾಗೂ ಹೈ-ಕ ವ್ಯಾಪ್ತಿಯ 6 ಹಾಗೂ ಮುಂಬೈ ಕರ್ನಾಟಕ ವ್ಯಾಪ್ತಿಯ 1 ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಲ್ಲಿ ತನ್ನ ಜಾಲ ಹೊಂದಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಈಕರಸಾಸಂಸ್ಥೆ) ತನ್ನ ಸೇವೆಗಳನ್ನೇ ಜನ ಹೆಚ್ಚು ಬಳಸುವಂತೆ ಆಕರ್ಷಿಸಲು ಹತ್ತು ಹಲವು ಸೇವೆಗಳನ್ನು- ಸೌಕರ್ಯಗಳನ್ನು ಒದಗಿಸುತ್ತ ಸಾಗಿದೆ. ಈ ಸೇವೆಗಳ ಸಾಲಿಗೆ ಇದೀಗ ರಿಯಾಯ್ತಿ ಮುಂಗಡ ಕಾಯ್ದಿರಿಸುವ ಸೇವೆ ಸೇರಿಕೊಂಡಿದೆ.
ತನ್ನ ಪ್ರಯಾಣಿಕರಿಗೆ ಮಿತವ್ಯಯಕರ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಯಾಣೋತ್ಸವ ನೂತನ ಪ್ರಯಾಣಿಕರ ಸ್ನೇಹಿ ಕಾರ್ಯಕ್ರಮವನ್ನು ಸಂಸ್ಥೆ ಇದೀಗ ಹಮ್ಮಿಕೊಂಡಿದೆ. ಈ ಯೋಜನೆಯು ಮುಂಗಡ ಆಸನ ಕಾಯ್ದಿರಿಸುವ ಪ್ರಯಾಣಿಕರಿಗೆ ಮಾತ್ರ ಲಭ್ಯವಿದ್ದು ವಿವರಗಳು ಈ ಕೆಳಗಿನಂತಿರುತ್ತವೆ.
ಹೆಚ್ಚು ಪ್ರಯಾಣಿಸಿ ಹೆಚ್ಚು ಉಳಿಸಿ: ಈ ಯೋಜನೆಯಲ್ಲಿ ಇ- ಟಿಕೆಟ್ ಮತ್ತು ಎಂ- ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರ 4ನೇ ಟಿಕೆಟ್‌ಗೆ ಮಾತ್ರ ಪ್ರಯಾಣ ದರದಲ್ಲಿ ಶೇ.30ರಷ್ಟು ರಿಯಾಯಿತಿಯನ್ನು ಕಲ್ಪಿಸಲಾಗಿದೆ. ಈ ಸೌಲಭ್ಯವನ್ನು ಪಡೆಯಲು ಇ- ಟಿಕೆಟ್ ಮತ್ತು ಎಂ ಟಿಕೆಟ್ ಬಳಕೆದಾರರು ಒಂದೇ ಯುಸರ್ ಐಡಿಯಿಂದ ಕಾಯ್ದಿರಿಸಬೇಕಾಗುತ್ತದೆ. ಈ ಯೋಜನೆಯು ಇ- ಟಿಕೆಟ್ ಮತ್ತು ಎಂ- ಟಿಕೆಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ.
ವಾರಾಂತ್ಯ ಜನದಟ್ಟಣೆ ನಿವಾರಿಸಿ: ಈ ಯೋಜನೆಯು ವಾರದ 3 ದಿನಗಳಿಗೆ ಅಂದರೆ ಮಂಗಳವಾರ, ಬುಧವಾರ ಮತ್ತು ಗುರುವಾರ ಮಾತ್ರ ಮುಂಗಡ ಆಸನ ಕಾಯ್ದಿರಿಸುವ ಎಲ್ಲಾ ಟಿಕೆಟ್‌ಗಳಿಗೆ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿಯನ್ನು ಕಲ್ಪಿಸಲಾಗಿದೆ. ಸದರಿ ರಿಯಾಯಿತಿಯನ್ನು ಸಂಸ್ಥೆಯ ಮುಂಗಡ ಆಸನ ಕಾಯ್ದಿರಿಸುವ ಎಲ್ಲಾ ಸಾರಿಗೆಗಳಿಗೆ ಪಡೆಯಬಹುದಾಗಿದೆ.
ಈ ಸೌಲಭ್ಯವು ದಿನಾಂಕ 15.7.2013 ರಿಂದ 30.9.2013 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ.
ಈ ಸೌಲಭ್ಯಗಳೊಂದಿಗೆ ಸಂಸ್ಥೆಯು ಈ ಕೆಳಕಾಣಿಸಿದ ಸೌಲಭ್ಯಗಳನ್ನು ಒದಗಿಸಲಾಗಿದೆ
1) 4 ಜನ ಮತ್ತು ಮೇಲ್ಪಟ್ಟ ಒಂದು ಗುಂಪಿನ ಪ್ರಯಾಣಿಕರು ಮುಂಗಡ ಆಸನ ಕಾಯ್ದಿರಿಸಿದಲ್ಲಿ ಪ್ರಯಾಣ ದರದಲ್ಲಿ ಶೇ.5 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿರುತ್ತದೆ.
2) ಅದೇ ರೀತಿ ಪ್ರಯಾಣಿಕರು ಮುಂಗಡ ಟಿಕೆಟಿನಲ್ಲಿ ಹೋಗುವ ಮತ್ತು ಬರುವ (್ಟಟಿಢಿಛ್ಠಜ ಛಟಿಜ ್ಠಜಡ್ಡ್ಠಿಟಿ ಞ್ಟ್ಡ್ಠಟಿಜಣ) ಆಸನಗಳನ್ನು ಕಾಯ್ದಿರಿಸಿದಲ್ಲಿ, ಬರುವ ಪ್ರಯಾಣ ದರದ ಮೇಲೆ ಶೇ.10 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.
ಈ ಮೇಲಿನ ಸೌಲಭ್ಯಗಳನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳುವಂತೆ ಈ.ಕ.ರ.ಸಾ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಕೋರಿದ್ದಾರೆ.