ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಧಿಕ ಮಳೆ; ಉದ್ದು, ಹೆಸರು ಬೆಳೆ ಹಾನಿ

Lingaraj Badiger
Updated On : 27 Jul 2013, 11:23 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.26
ಜಿಲ್ಲೆಯಲ್ಲಿ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಚಿತ್ತಾಪುರ ಹಾಗೂ ಚಿಂಚೋಳಿಗಳಲ್ಲಿ ಹೆಸರು, ಉದ್ದು ಬಿತ್ತನೆಯಾದ ಹೊಲಗದ್ದೆಗಳಲ್ಲಿ ನೀರು ನಿಲ್ಲುವ ಮೂಲಕ ಬೆಳೆಗಳು ಕೊಳೆಯುವ ಹಂತ ತಲುಪಿವೆ. ಆಗಿರಬಹುದಾದ ಹಾನಿಯ ಬಗ್ಗೆ ಕೃಷಿ ಇಲಾಖೆ ಸಮೀಕ್ಷೆ ಆರಂಭಿಸಿದೆ. ಇನ್ನೆರಡು ದಿನಗಳಲ್ಲಿ ಹಾನಿಯ ಅಂದಾಜು ಸಿಗಲಿದೆ ಎಂದು ಜಿಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್, ಕೃಷಿಕ ಸಮಾಜ ಮುಖಂಡ ಸಿದ್ರಾಮಪ್ಪ ಧಂಗಾಪುರ ಮತ್ತು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಳತ್ಕರ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜುಲೈ ತಿಂಗಳ ವಾಡಿಕೆ ಮಳೆ ಪ್ರಮಾಣ 352 ಮಿಮಿ, ಆದರೆ ಜು.25 ರೊಳಗಾಗಿಯೇ ಜಿಲ್ಲೆಯಲ್ಲಿ ಒಟ್ಟು 407 ಮಿಮೀ ಮಳೆ ಸುರಿದಿದೆ. ಈ ಪೈಕಿ ಚಿತ್ತಾಪುರ ಮತ್ತು ಚಿಂಚೋಳಿಗಳಲ್ಲಿ ಅತಿ ಹೆಚ್ಚು. ಹೀಗಾಗಿ ಈಗಾಗಲೇ 20ಕ್ಕೂ ಹೆಚ್ಚಿನ ದಿನಗಳ ಬೆಳೆಯಾಗಿರುವ ಹೆಸರು- ಉದ್ದು ತೊಂದರೆಗೆ ಸಿಲುಕಿವೆ ಎಂದರು.
ಹೊಲದಲ್ಲಿ ಕಳೆ ವಿಪರೀತ ಬೆಳೆದು ನಿಂತಿದೆ. ಕಸ ಕೀಳಲು ಕಾರ್ಮಿಕರೇ ಸಿಗುತ್ತಿಲ್ಲ. ಹೀಗಾಗಿ ರೈತರೆಲ್ಲ ಅನಿವಾರ್ಯವಾಗಿ ಕಳೆನಾಶಕಕ್ಕೆ ಬೆನ್ನು ಬಿದ್ದಿದ್ದಾರೆ. ಕಳೆನಾಶಕ ವಿಪರೀತ ಬಳಕೆಯೂ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ. ಆದಾಗ್ಯೂ ರೈತರು ಸಮಯ- ಸಂದರ್ಭ ನೋಡಿಕೊಂಡು ಕಳೆನಾಶಕ ಬಳಸಬೇಕೆಂದು ಬಸವರಾಜ ಪಾಟೀಲ್ ಮನವಿ ಮಾಡಿದರು.
ತೊಗರಿ ಬಿತ್ತನೆ ನೋಟ: ಜಿಲ್ಲೆಯಲ್ಲಿ 5.72 ಲಕ್ಷ ಬಿತ್ತನೆ ಕ್ಷೇತ್ರದ ಪೈಕಿ ಈಗಾಗಲೇ 4.48 ಲಕ್ಷ ಹೆಕ್ಟರ್ ಬಿತ್ತನೆಯಾಗಿದೆ. ಇದರಲ್ಲಿ ತೊಗರಿ, ಹೆಸರು ಹಾಗೂ ಉದ್ದು ಮತ್ತು ಅಲಸಂದಿ ಕ್ಷೇತ್ರ ಸೇರಿಕೊಂಡಿದೆ. ಸತತ ಮಳೆಯಿಂದ ಬಿತ್ತನೆ 15 ದಿನಗಳ ವಿಳಂಬವಾಗಿದೆ. ಇನ್ನು ವಾರದೊಳಗೆ ಜಿಲ್ಲೆಯಲ್ಲಿ ಬಿತ್ತನೆ ಪೂರ್ಣಗೊಳ್ಳಲಿದೆ ಎಂದು ಬಸವರಾಜ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯಲ್ಲಿ 3.65 ಲಕ್ಷ ಹೆಕ್ಟರ್ ತೊಗರಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಇದುವರೆಗೂ 2.85 ಲಕ್ಷ ಹೆಕ್ಟರ್ ಬಿತ್ತನೆಯಾಗಿದೆ. ಜು.31ರವರೆಗೂ ತೊಗರಿ ಬಿತ್ತನೆಗೆ ಅವಕಾಶವಿದೆ. ಈ ದಿನಗಳಲ್ಲಿ ರೈತರು ಹೆಚ್ಚಿನ ಪ್ರಮಾಣ ತೊಗರಿಯನ್ನೇ ಬಿತ್ತಲಿದ್ದಾರೆಂದು ಜಂಟಿ ಕೃಷಿ ನಿರ್ದೇಶಕ ಬಳತ್ಕರ್ ಹೇಳಿದರು.
ಅಲಸಂದಿ ಬಿತ್ತನೆ ಗುರಿ 7 ಸಾವಿರ ಹೆಕ್ಟೇರ್ ಇತ್ತು. ಆದರೀಗ 13 ಸಾವಿರ ಹೆಕ್ಟರ್ಗೆ ಹೆಚ್ಚಿದೆ. ಇದರಿಂದ ಜಿಲ್ಲೆಯಲ್ಲಿ ಇದೊಂದು ಹೊಸ ಬೆಳವಣಿಗೆಯಾಗಿ ದಾಖಲಾಗಿದೆ ಎಂದು ಬಸವರಾಜ ಹೇಳಿದರು.
ಖರ್ಗೆಗೆ ಅಭಿನಂದನೆ: ತೊಗರಿ ಬೆಂಬಲ ಬೆಲೆ 3,850ರಿಂದ 4,300ಕ್ಕೆ ಹೆಚ್ಚಿಸಲು ಕಾರಣರಾದ ಮಲ್ಲಿಕಾರ್ಜುನ ಖರ್ಗೆಯವರ ಪ್ರಯತ್ನ ಅಭಿನಂದನಾರ್ಹ. ಬರುವ ದಿನಗಳಲ್ಲಿ ಇದನ್ನು 5,500ಕ್ಕೆ ನಿಗದಿಪಡಿಸಬೇಕು. ಉದ್ದು- ಹೆಸರು 3 ತಿಂಗಳ ಬೆಳೆಯಾದರೆ ತೊಗರಿ 6 ತಿಂಗಳ ಬೆಳೆಯಾಗಿದೆ. ಇದಕ್ಕೆ ಖರ್ಚು- ವೆಚ್ಚವೂ ಹೆಚ್ಚಾಗಿದೆ. ಅದಕ್ಕೇ ಕೇಂದ್ರ ಬೆಂಬಲ ಬೆಲೆ ಹೆಚ್ಚಿಸಬೇಕೆಂದು ಕೃಷಿ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement