ಪೌರಾಡಳಿತ ಸಚಿವರ ಪ್ರವಾಸ
ಗುಲ್ಬರ್ಗ: ಪೌರಾಡಳಿತ, ಸಾರ್ವಜನಿಕ ಉದ್ಯಮಗಳು, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ ಮತ್ತು ಹಜ್ ಸಚಿವರು ಹಾಗೂ ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ರೈಲಿನ ಮೂಲಕ ಜುಲೈ 27 ರಂದು ಬೆಳಗ್ಗೆ 9ಕ್ಕೆ ಗುಲ್ಬರ್ಗಕ್ಕೆ ಆಗಮಿಸುವರು. ಅಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕ ಭೇಟಿ ಹಾಗೂ ಕುಂದುಕೊರತೆಗಳ ವಿಚಾರಣೆ ಮತ್ತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು. ಜು.28ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕ ಭೇಟಿ ಹಾಗೂ ಕುಂದುಕೊರತೆಗಳ ವಿಚಾರಣೆ ಮತ್ತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗುಲ್ಬರ್ಗದಿಂದ ಸೇಡಂಗೆ ತೆರಳಿ ಅಲ್ಲಿಂದ ರಾಜಧಾನಿ ಎಕ್ಸ್ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಇಂದು ವೃಂದಾವನ ಪ್ರತಿಷ್ಠಾಪನೆ ದಿನ
ಗುಲ್ಬರ್ಗ: ಜು.27ರಂದು ಬಿದ್ದಾಪುರ ಕಾಲೋನಿಯ ರಾಯರ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 8ನೇ ವರ್ಷದ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆ ದಿನ ಆಚರಿಸಲಾಗುವುದು. ಅಂದು ಜಯತೀರ್ಥರ ಆರಾಧನೆಯನ್ನು ಆಚರಿಸಲಾಗುತ್ತಿದೆ. ಬೆಳಿಗ್ಗೆ 8ರಿಂದ 10ರವರೆಗೆ ಅಷ್ಟೋತ್ತರ, ವಾಯುಸ್ತುತಿಪಾರಾಯಣ, ಚರ್ತುವೇದಗಳ ಪಾರಾಯಣ, 10ಕ್ಕೆ ದಾಸವಾಣಿ ಕಾರ್ಯಕ್ರಮ ನಡೆಯುವುದು. ಪಂಡಿತರಿಂದ ಉಪನ್ಯಾಸ ನಡೆಯುವುದು. ಅಲಂಕಾರ ಸೇವೆ, ಹಸ್ತೋದಕ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕೆಂದು ವ್ಯವಸ್ಥಾಪಕ ನವಲಿ ಕೃಷ್ಣಾಚಾರ್ಯ ಪ್ರಕಟಣೆ ಮೂಲಕ ಕೋರಿದ್ದಾರೆ.
ರೈತರ ಪ್ರವಾಸಕ್ಕೆ ಹಸಿರು ನಿಶಾನೆ
ಗುಲ್ಬರ್ಗ: ಜು.26ರಿಂದ 28ರವರೆಗೆ ನವದೆಹಲಿಯಲ್ಲಿ ನಡೆಯುವ ಕೃಷಿ ಮತ್ತು ತೋಟಗಾರಿಕೆ ಎಕ್ಸಫೋ ಮೇಳಕ್ಕೆ ತೆರಳಿದ ಜಿಲ್ಲೆಯ 15 ರೈತ ಕೃಷಿ ಪಂಡಿತ ಮತ್ತು ಕೃಷಿ ಪ್ರಶಸ್ತಿ ಪಡೆದ ರೈತರ ಪ್ರವಾಸಕ್ಕೆ ಗುಲ್ಬರ್ಗ ಜಂಟಿ ಕೃಷಿ ನಿರ್ದೇಶಕ ಐ.ಈ. ಬಳತ್ಕರ್ ಹಸಿರು ನಿಶಾನೆ ತೋರಿಸಿ ಶುಭ ಕೋರಿದರು. ಬುಧವಾರ ಬೆಳಗ್ಗೆ 6ಕ್ಕೆ ಕರ್ನಾಟಕ ಎಕ್ಸ್ಪ್ರೆಸ್ ಮುಖಾಂತರ ರೈತರು ನವದೆಹಲಿ ಪ್ರವಾಸ ಕೈಗೊಂಡರು. ಈ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ್ ರಂಗರಾವ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಬಸವರಾಜ ಮಾಲಿಪಾಟೀಲ್ ಮತ್ತು ರಮೇಶ ಹರವಾಳ ಇದ್ದರು.
ಪ್ರತಿಭೋತ್ಸವ ಮುಂದೂಡಿಕೆ
ಗುಲ್ಬರ್ಗ: ಗಾನಯೋಗಿ ಡಾ. ಪುಟ್ಟರಾಜ ಸಂಗೀತ ಕಾಲೇಜಿನಿಂದ ಜು.27ರಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಾಂಸ್ಕೃತಿಕ ಪ್ರತಿಭೋತ್ಸವ ಕಾರ್ಯಕ್ರಮ ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ತಿಳಿಸಿದೆ. ಆ.17ರಂದು ಬೆ.9ರಿಂದ ಸಂಜೆ 5ರವರೆಗೆ ಕನ್ನಡ ಭವನದಲ್ಲಿ ನಡೆಯಲಿದೆ. ವಿವರಕ್ಕೆ ಮೊ. 9900410402ಗೆ ಸಂಪರ್ಕಿಸಬಹುದು.