ಸಂಪರ್ಕ ಕಡಿತ..
ಕನ್ನಡಪ್ರಭ ವಾರ್ತೆ ಯಾದಗಿರಿ ಜು.26
ಕೃಷ್ಣಾ ನದಿಯಲ್ಲಿ ಶುಕ್ರವಾರ ಪ್ರವಾಹ ಉಂಟಾಗಿದ್ದು, ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕೊಳ್ಳೂರು ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಸಾವಿರಾರು ಎಕರೆಯಲ್ಲಿ ಬೆಳೆದ ಬತ್ತ ಹಾಗೂ ಕಬ್ಬಿನ ಗದ್ದೆಗಳು, ಹತ್ತಾರು ಪಂಪ್ಸೆಟ್ ಜಲಾವೃತಗೊಂಡಿವೆ.
ನಾರಾಯಣಪುರ ಜಲಾಶಯದ 24 ಕ್ರಸ್ಟ್ ಗೇಟ್ಗಳನ್ನು ತೆರೆದು 2.50 ಲಕ್ಷ ಕ್ಯುಸೆಕ್ ನೀರು ಹೊರಬಿಡುತ್ತಿರುವುದರಿಂದ ಕೃಷ್ಣಾ ನದಿ ನೆರೆ ಸಷ್ಟಿಸಿದೆ. ಇದರಿಂದ ಶಹಾಪುರ ತಾಲೂಕಿನ ಕೊಳ್ಳೂರು ಸೇತುವೆ ಮೇಲಿಂದ ಸುಮಾರು ಅರ್ಧ ಅಡಿ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಬೀದರ್- ಬೆಂಗಳೂರು ಹೆದ್ದಾರಿಯ ದೇವದುರ್ಗ ಸಂಪರ್ಕ ಕಡಿತಗೊಂಡಿದೆ. ಶುಕ್ರವಾರ ಮಧ್ಯಾಹ್ನದಿಂದ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು, ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ.
ಸಂಪರ್ಕ ಕಡಿತ: ಶಹಾಪುರ ತಾಲೂಕಿನ ಕೊಳ್ಳೂರು, ಯಕ್ಷಿಂತಿ, ಹಯ್ಯಾಳ ಬಿ ಮುಂತಾದ ನದಿ ತೀರದ ಗ್ರಾಮಗಳ ಸಾವಿರಾರು ಎಕರೆ ಜಮೀನು ಮುಳುಗಡೆಯಾಗಿದೆ. ಬತ್ತ, ಹೆಸರು, ಕಬ್ಬು ಬೆಳೆದ ಹೊಲಗಳು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ನಡುಗಡ್ಡೆ ಸಂಪರ್ಕ ಕಡಿತಗೊಂಡಿದೆ.
ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಸದ್ಯ 2.50 ಲಕ್ಷ ಕ್ಯುಸೆಕ್ ಒಳ ಹರಿವಿದ್ದು, 2.30 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ. ರಾತ್ರಿ ವೇಳೆ ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾದ್ಯತೆ ಇದೆ ಎಂದು ಅಣೆಕಟ್ಟೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ನದಿ ತೀರದ ಜನರು ಸುರಕ್ಷತೆಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಯಾರೂ ನದಿಗೆ ಇಳಿಯದಂತೆ ಎಚ್ಚರಿಸಿದೆ.
ಕೇಂದ್ರ ಸ್ಥಾನ ಬಿಡಬೇಡಿ: ನದಿಗಳ ತೀರದಲ್ಲಿ ಪ್ರವಾಹ ಉಂಟಾದಲ್ಲಿ ನಾಗರಿಕರು ಮತ್ತು ಗ್ರಾಮಗಳು ಸಮಸ್ಯೆಗೆ ಒಳಗಾಗುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಿಲ್ಲೆಯ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದೆಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಸೂಚಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಬೇಕು. ತುರ್ತು ಸಂದರ್ಭವನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ತಮ್ಮ ಅಧೀನಲ್ಲಿರುವ ಸಿಬ್ಬಂದಿಗೆ ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಕ್ತ ನಿರ್ದೇಶನಗಳನ್ನು ನೀಡಲು ಸೂಚಿಸಿದೆ. ಅದರಂತೆ ತುರ್ತು ಪರಿಸ್ಥಿಯನ್ನು ಹೊರತುಪಡಿಸಿ ಅವರಿಗೆ ರಜೆ ಮೇಲೆ ತೆರಳಬಾರದೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆಯೂ ಅವರು ಸೂಚಿಸಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಅನಿವಾರ್ಯ ಪರಿಸ್ಥಿಯಲ್ಲಿ ಕೇಂದ್ರ ಸ್ಥಾನವನ್ನು ಬಿಡಬೇಕಾದಾಗ ಜಿಲ್ಲಾಧಿಕಾರಿಗಳ ಪೂರ್ವಾನುಮತಿಯನ್ನು ತಪ್ಪದೇ ಪಡೆಯಬೇಕು. ಇದಕ್ಕೆ ತಪ್ಪಿದಲ್ಲಿ ಅಂಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಕೃಷ್ಣಾ ಕಾಲುವೆಗೆ ಬಾಗಿನ
ಕೆಂಭಾವಿ: ಕೃಷ್ಣಾ ಕಾಲುವೆ ನೀರಾವರಿ ಪ್ರದೇಶದ ಪ್ರತಿಯೊಬ್ಬ ರೈತರು ನೀರಿನ ಉಪಯೋಗವನ್ನು ಸಮಗ್ರವಾಗಿ ತಿಳಿದು ಬಳಕೆ ಮಾಡಬೇಕು. ವೃಥಾ ನೀರು ಪೋಲಾಗದಂತೆ ನೋಡಿಕೊಂಡು ಜಮೀನುಗಳಿಗೆ ಒದಗಿಸಿ ಭೂಮಿ ತಾಯಿ ಮಡಿಲನ್ನು ತುಂಬಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಕೆಂಭಾವಿ ಘಟಕದ ಅಧ್ಯಕ್ಷ ಭೀಮನಗೌಡ ಕಾಚಾಪೂರ ಹೇಳಿದರು. ಪಟ್ಟಣದ ಹೃದಯ ಭಾಗದಲ್ಲಿ ಹರಿದಿರುವ ಶಹಾಪುರ ಶಾಖಾ ಕಾಲುವೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಸರ್ಕಾರ ಕಾವೇರಿ ನದಿಗೆ ತೋರಿದ ಪ್ರೀತಿ, ಕಾಳಜಿಯನ್ನು ಕೃಷ್ಣಾ ನದಿಗೆ ತೋರುತ್ತಿಲ್ಲ. ಪ್ರತಿ ವರ್ಷ ಕಾವೇರಿ ನದಿಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಾರೆ. ಆದರೆ ಈ ಭಾಗದ ರೈತರ ಜೀವನಾಡಿಯಾಗಿರುವ ಕೃಷ್ಣಾ ನದಿಗೆ ಹೊಸ ನೀರು ಬಂದಾಗ ಸರ್ಕಾರದ ಪರವಾಗಿ ಯಾವೊಬ್ಬ ಸಚಿವರೂ ಬಾಗಿನ ಅರ್ಪಿಸದೇ ತಾತ್ಸಾರ ಮಾಡುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು. ಕೆಜೆಪಿ ಮುಖಂಡ ಸುರೇಶ ಸೊನ್ನದ, ನಾಗರೆಡ್ಡಿ ಧರಿ, ಸುಭಾಸ ಮ್ಯಾಗೇರಿ, ರವಿ ಮಿರ್ಜಿ, ಶಿವು ಹೊಸಮನಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.