ಖರ್ಗೆ ಕಣಕ್ಕೆ ಮುಖಂಡರ ಅಸ್ತು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.27
ಬರುವ ಲೋಕಸಭಾ ಚುನಾವಣೆಯಲ್ಲಿ ಗುಲ್ಬರ್ಗ ಲೋಕಸಭಾ ಅಭ್ಯರ್ಥಿಯನ್ನಾಗಿ ಮಲ್ಲಿಕಾರ್ಜುನ ಖರ್ಗೆನ್ನು ಕಣಕ್ಕಿಳಿಸುವ ಕುರಿತು ಶನಿವಾರ ನಗರದಲ್ಲಿ ನಡೆದ ಕಾಂಗ್ರೆಸ್ ಸಮಾರಂಭದಲ್ಲಿ ಪಕ್ಷದ ಜಿಲ್ಲೆಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಕ್ಕೂರಲಿನಿಂದ ಸಮ್ಮತಿ ಸೂಚಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಮತ್ತು ಮುಂಬರುವ ಲೋಕಸಭಾ ಚುನಾವಣೆ ಕುರಿತ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಮಾರಂಭದಲ್ಲಿ ಪಕ್ಷದ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಅವರು ಮುಂದಿನ ಗುಲ್ಬರ್ಗ ಲೋಕಸಭಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಆಗಬೇಕೆಂದು ಪ್ರಸ್ತಾಪಿಸಿದಾಗ ಸಮಾರಂಭದಲ್ಲಿದ್ದ ಎಲ್ಲ ಮುಖಂಡರು, ಕಾರ್ಯಕರ್ತರು ಕೈ ಎತ್ತುವ ಮೂಲಕ ಸಮ್ಮತಿ ಸೂಚಿಸಿದರು.
ಖರ್ಗೆ ಹೆಸರು ಅನುಮೋದನೆ: ಸಮಾರಂಭಕ್ಕೆ ವೀಕ್ಷಕರಾಗಿ ಆಗಮಿಸಿದ ಐ.ಜಿ. ಸನದಿ, ಬಿ.ಆರ್. ಪಾಟೀಲ್, ಪ್ರೇಮಕುಮಾರ್, ಡಿ.ಸಿ. ಅಲೆಕ್ಸಾಂಡರ್ ಅವರ ಸಮ್ಮುಖದಲ್ಲಿ ವೈದ್ಯಕೀಯ ಶಿಕ್ಷಣ ಡಾ. ಶರಣಪ್ರಕಾಶ ಪಾಟೀಲ್ ಎಲ್ಲ ಮುಖಂಡರ ಹಾಗೂ ಕಾರ್ಯಕರ್ತರ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಅನುಮೋದಿಸಿದರು. ಬೀದರ್ ಸಂಸದ ಧರ್ಮಸಿಂಗ್ ಮತ್ತು ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಖರ್ಗೆ ಗುಲ್ಬರ್ಗ ಲೋಕಸಭಾ ಚುನಾವಣೆ ಸ್ಪರ್ಧಿಸಲಿ ಎಂದು ಅನುಮೋದನೆ ನೀಡಿದರು.
ಹೈಕಮಾಂಡ್ ವರದಿ: ವೀಕ್ಷಕರಾಗಿ ಆಗಮಿಸಿದ ಐ.ಜಿ. ಸನದಿ, ಬಿ.ಆರ್. ಪಾಟೀಲ್, ಪ್ರೇಮಕುಮಾರ್, ಡಿ.ಸಿ. ಅಲೆಕ್ಸಾಂಡರ್ ಮಾತನಾಡಿ, ಗುಲ್ಬರ್ಗ ಲೋಕಸಭಾ ಚುನಾವಣೆಗೆ ಖರ್ಗೆ ಅಭ್ಯರ್ಥಿ ಮಾಡಲು ಜಿಲ್ಲೆಯ ಎಲ್ಲ ಮುಖಂಡರು, ಕಾರ್ಯಕರ್ತರು ಒಕ್ಕೊರಲಿನಿಂದ ಸಮ್ಮತಿ ನೀಡಿದ್ದು, ಇಲ್ಲಿನ ವರದಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ ಮೂಲಕ ಹೈಕಮಾಂಡ್ ಸೋನಿಯಾಗಾಂಧಿ ಅವರಿಗೆ ಸಲ್ಲಿಸಲಾಗುವುದು ಎಂದರು.
ಧರ್ಮಸಿಂಗ್ ಮಾತನಾಡಿ, ಹೈ.ಕ. ಭಾಗದ ಪ್ರಮುಖ ಬೇಡಿಕೆಯಾಗಿರುವ 371 (ಜೆ) ವಿಧಿ, ರೇಲ್ವೆ ಕಾಮಗಾರಿ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಖರ್ಗೆಗೆ ಜಿಲ್ಲೆಯ ಜನತೆ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಕೋಮವಾದಿ, ಭ್ರಷ್ಟ ಕೆಜೆಪಿ ನಾಯಕ ಯಡಿಯೂರಪ್ಪ ಮತ್ತೆ ಬಿಜೆಪಿ ಮರಳಿದ್ದಾರೆಂಬ ಸುದ್ದಿ ಹಬ್ಬಿದ್ದು, ಯಡಿಯೂರಪ್ಪನಂತಹ ಹತ್ತು ಜನ ಬಿಜೆಪಿ ಪಕ್ಷಕ್ಕೆ ಸೇರಿದರೂ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯ ಸಿಗಲಿದೆ ಎಂದರು.
ಸಮಾರಂಭದಲ್ಲಿ ಶಾಸಕರಾದ ಪ್ರಿಯಾಂಕ್ ಖರ್ಗೆ, ಅಲ್ಲಮಪ್ರಭು ಪಾಟೀಲ್, ಉಮೇಶ ಜಾಧವ, ಜಿ. ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಾಗಣಗೌಡ ಸಂಕನೂರ, ಉಪಾಧ್ಯಕ್ಷ ಇಕ್ಬಾಲ್ ಅಹ್ಮದ್ ಸರಡಗಿ ಸೇರಿದಂತೆ ಹಲವಾರು ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.