ಬಸ್ ಸೌಲಭ್ಯಕ್ಕಾಗಿ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಯಾದಗಿರಿ: ತಾಲೂಕಿನ ಹತ್ತಿಕುಣಿ ಗ್ರಾಮ ಹಾಗೂ ಸುತ್ತಮುತ್ತಲಿನಿಂದ ದಿನಾಲೂ ಯಾದಗಿರಿಗೆ ಆಗಮಿಸುವ ಕಾಲೇಜು ವಿದ್ಯಾರ್ಥಿಗಳಿಗಾಗಿ ಬೆಳಗ್ಗೆ ವಿಶೇಷ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಶನಿವಾರ ಯಡ್ಡಳ್ಳಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ದಿನಾಲೂ ಹತ್ತಿಕುಣಿ, ಯಡ್ಡಳ್ಳಿ, ಬಾಚವಾರ, ಹೊರುಂಚಾ ಹಾಗೂ ಬಂದಳ್ಳಿ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಜಿಲ್ಲಾ ಕೇಂದ್ರ ಯಾದಗಿರಿಗೆ ಆಗಮಿಸುತ್ತಾರೆ. ಆದರೆ ಬೆಳಗ್ಗೆ ಸೂಕ್ತ ಬಸ್ ಸೌಕರ್ಯವಿಲ್ಲದೆ ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಕುರಿತು ಈಶಾನ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಅನೇಕ ಬಾರಿ ಲಿಖಿತ ಮನವಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಅನಿವಾರ್ಯವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದರು.
ಸಂಚಾರ ಅಸ್ತವ್ಯಸ್ತ: ವಿದ್ಯಾರ್ಥಿಗಳು ಸೇಡಂ- ಯಾದಗಿರಿ ಬಸ್ಸನ್ನು 1 ಗಂಟೆಗೂ ಹೆಚ್ಚು ಕಾಲ ತಡೆದು ಪ್ರತಿಭಟಿಸಿದರು. ಇದರಿಂದ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಸಂಸ್ಥೆ ಅಧಿಕಾರಿಗಳು ವಿದ್ಯಾರ್ಥಿಗಳ ಮನವಿಯನ್ನು ಆಲಿಸಿದರು. ಭಾನುವಾರದಿಂದಲೇ ಬೆಳಗ್ಗೆ ಬಸ್ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು. ನಂತರ ಸಾರಿಗೆ ಸಂಚಾರ ಆರಂಭವಾಯಿತು.
ಹುಣಸಗಿ ವರದಿ: ಪಟ್ಟಣದ ಸರ್ಕಾರಿ ಪಪೂ ಮತ್ತು ಪದವಿ ಕಾಲೇಜುಗಳಿಗೆ ಗೆದ್ದಲಮರಿ, ಕೊಡೇಕಲ್ ಇನ್ನಿತರ ಕಡೆಗಳಿಂದ ವಿದ್ಯಾರ್ಥಿಗಳು ನಿತ್ಯ ಬರುತ್ತಿದ್ದು, ಸೂಕ್ತ ಸಮಯಕ್ಕೆ ಬಸ್ ಸಂಚಾರ ವ್ಯವಸ್ಥೆ ಇಲ್ಲದ್ದರಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಘಟಕ ವ್ಯವಸ್ಥಾಪಕರಿಗೆ ಬರೆದ ಮನವಿ ಪತ್ರವನ್ನು ಹುಣಸಗಿ ಸಂಚಾರಿ ನಿಯಂತ್ರಕ ಬಸವರಾಜ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ಅವ್ಯವಸ್ಥೆ: ವಿದ್ಯಾರ್ಥಿ ಪ್ರತಿನಿಧಿ ಮಲ್ಲಪ್ಪ ಅಂಗಡಿ ಮಾತನಾಡಿ, ಕೊಡೇಕಲ್, ರಾಜನಕೋಳೂರ, ಬಲಶೆಟ್ಟಿಹಾಳ, ಕಾಮನಟಗಿಯಿಂದ ನಿತ್ಯ ಕಾಲೇಜುಗಳಿಗೆ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರುತ್ತಾರೆ. ಆದರೆ ಬೆಳಗ್ಗೆ ಈ ಗ್ರಾಮಗಳಿಂದ ಕಾಲೇಜುಗಳಿಗೆ ಬರಲು ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಆದ್ದರಿಂದ ಕಾಲೇಜು ಸಮಯಕ್ಕೆ ಸರಿಯಾಗಿ ಹಾಜರಾಗಬೇಕಾದರೆ ಬೆಳಗ್ಗೆ 7ಗಂಟೆಗೆ ಕೊಡೇಕಲ್ನಿಂದ ಹುಣಸಗಿಗೆ ಒಂದು ಬಸ್ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಮುಂದಿನ ವಾರದಲ್ಲಿಯೇ ಬಸ್ ಪ್ರಾರಂಭಿಸಿಬೇಕು. ಇಲ್ಲದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಿದರು. ವಿದ್ಯಾರ್ಥಿಗಳಾದ ಆನಂದ ಮಾರನಾಳ, ಬಸವರಾಜ, ಅಶೋಕ, ಸಾಯಬಣ್ಣ, ಜುಮ್ಮಣ್ಣ ಜೋಗಿನ್, ಮಹಾದೇವ ಚಲುವಾದಿ, ಹುಸೇನಬಾಶಾ, ರಾಜೇಶ್ವರಿ, ಶಿವಶರಣಪ್ಪ ಕುಂಬಾರ, ಗೀತಾ, ಸೌಮ್ಯಾ, ವಿಜಯಶ್ರೀ, ಚನ್ನಮ್ಮ ಇತರರು ಇದ್ದರು.