ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುನಿಪುಂಗವರ ವೈಭವ

Mainashree
Updated On : 28 Jul 2013, 10:57 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜು.27
ಒಂದೆಡೆ ಸಾರಿ ಭಜಿಸಿರೋ ಟೀಕಾರಾಯರಂಘ್ರಿಯಾ, ಘೋರ ಪಾತಕಾಂಬುಂಧಿಯ ಪಾರುಮಾಳ್ಪರಾ... ಎಂದು ಮುನಿ ಪುಂಗವರ ಭಜಿಸುವ ಭಕ್ತ ವೃಂದ, ಈ ಮುನಿ ಒಲಿದರೆ ಅವನೇ ಭಾಗ್ಯವಂತ... ಎಂದು ಹೇಳುತ್ತ ಜಯತೀರ್ಥರ ಮುತ್ತಿನ ಹಾರಗಳಿಂದ ಅಲಂಕೃತ ವೃಂದಾವನ ಕಂಡು ಪುಳಕಿತಗೊಳ್ಳುವ ಭಕ್ತವೃಂದ ಇನ್ನೊಂದೆಡೆ... ಇವೆಲ್ಲದರ ಮಧ್ಯೆ ಪುಷ್ಪಾಲಂಕೃತ ರಥದಲ್ಲಿ ಮುನಿಪುಂಗವರ ಉತ್ಸವ ಪ್ರತಿಮೆಯೊಂದಿಗೆ ಅದ್ಧೂರಿ ರಥೋತ್ಸವ...
ವೇದಘೋಷ, ಪಂಡಿತರಿಂದ ಉಪನ್ಯಾಸಗಳು ಹೀಗೆ ಹತ್ತು ಹಲವು ಧಾರ್ಮಿಕ ಸಭೆ- ಸಮಾರಂಭಗಳಿಗೆ ಇಲ್ಲಿಂದ 40 ಕಿಮೀ ದೂರದಲ್ಲಿನ ಕಾಗಿಣಾ ತಟಾಕದಲ್ಲಿರುವ ಇತಿಹಾಸ ಪ್ರಸಿದ್ಧ ಮಳಖೇಡದ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನ ಕಂಗೊಳಿಸಿತು.
ದ್ವೈತ ವೇದಾಂತ ಚಕ್ರವರ್ತಿಗಳೆಂದೇ ಖ್ಯಾತರಾದ ಮಜ್ಜಯತೀರ್ಥರ ಆರಾಧನೆ ಜಿಲ್ಲೆಯ ಸೇಡಂ ತಾಲೂಕಿನ ಶ್ರೀಕ್ಷೇತ್ರ ಮಳಖೇಡದ ಕಾಗಿಣಾ ತೀರದಲ್ಲಿನ ಮೂಲವೃಂದಾವನ ಸನ್ನಿಧಾನದಲ್ಲಿ ಶುಕ್ರವಾರದಿಂದಲೇ ಆರಂಭವಾಗಿದ್ದು, ಆಷಾಢ ಬಹುಳ ಪಂಚಮಿ ದಿನವಾದ ಶನಿವಾರ ಗುರುಗಳ ಮಧ್ಯಾರಾಧನೆ ವೈಭವ.
ಜಯತೀರ್ಥರು ತತ್ವಜ್ಞಾನ ಪ್ರಪಂಚದ ಧ್ರುವತಾರೆಗಳು, ಅವರು ರಚಿಸಿದ ಶ್ರೀಮನ್ನ್ಯಾಯಸುಧಾ ಗ್ರಂಥ ತಾತ್ವಿಕ ಪ್ರಪಂಚದ ಮೇರುಕೃತಿ. ಮಧ್ವಾಚಾರ್ಯರ ಭಾಷ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಟ್ಟ ಶ್ರೇಯಸ್ಸು ಅವರದು.
ತಪ್ತಮುದ್ರಾಧಾರಣೆ: ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥರ ಸಾರಥ್ಯದಲ್ಲಿ ಇಲ್ಲಿನ ಎಲ್ಲ ಸಮಾರಂಭಗಳು ನೆರವೇರಿದವು. ಬೆಳಗಿನ ಸುಪ್ರಭಾತ ಹಾಗೂ ಅಷ್ಟೋತ್ತರದೊಂದಿಗೆ ಜಯತೀರ್ಥರ ಮಧ್ಯಾರಾಧನೆ ಶುಭಾರಂಭಗೊಂಡಿತು. ಸತ್ಯಾತ್ಮತೀರ್ಥರಿಂದ ಸೇರಿದ್ದ 15 ಸಾವಿರಕ್ಕೂ ಅಧಿಕ ಭಕ್ತವೃಂದಕ್ಕೆ ಬೆಳಗಿನ ಜಾವವೇ ತಪ್ತ ಮುದ್ರಾಧಾರಣೆ ನಡೆಯಿತು. ನಂತರ ಶ್ರೀಗಳು ನ್ಯಾಯಸುಧಾ ಪ್ರವಚನ- ಪಾರಾಯಣಾದಿಗಳನ್ನೆಲ್ಲ ಪೂರೈಸಿಕೊಂಡು ಬಂದು ರಥೋತ್ಸವಕ್ಕೆ ಮಂಗಳಾರತಿ ಮೂಲಕ ಚಾಲನೆ ನೀಡಿ ಮೂಲರಾಮ ದೇವರ ಪೂಜೆಗೆ ಅಣಿಯಾದರು.
ವಿಶ್ವಗುರು ಮಧ್ವಾಚಾರ್ಯರ ಮೂಲಮಹಾ ಸಂಸ್ಥಾನವಾದ ಮದುತ್ತರಾದಿ ಮಠದ ಪೀಠಾಧಿಪತಿಗಳಾದ ಸತ್ಯಾತ್ಮತೀರ್ಥ ಪಾದಂಗಳವರು ಈ ಆರಾಧನಾ ಮಹೋತ್ಸವದ ಸಾರಥ್ಯ ವಹಿಸಿಕೊಂಡಿದ್ದು ಇದು ಭಕ್ತರಲ್ಲಿ ಎಲ್ಲಿಲ್ಲದ ಉತ್ಸಾಹ ಮೂಡಿಸಿತ್ತು.
ಗುಲ್ಬರ್ಗದ ಧೀಮಪಿ ಟ್ರಸ್ಟ್ ಗೋವುಗಳ ಸಂರಕ್ಷಣಾ ಅಭಿಯಾನದ ಹಿನ್ನೆಲೆಯಲ್ಲಿ ಹೊರತಂದಿರುವ ಗಾವೋ ವಿಶ್ವಸ್ಯ ಮಾತರ- ಕೃತಿ ಮತ್ತು ಜಯತೀರ್ಥರ ಮೂಲ ವೃಂದಾವನ ಮಳಖೇಡ ಎಂಬ ಮುಕ್ಕುಂದಿ ಆಚಾರ್ಯರ ವಿಮರ್ಶಾ ಕೃತಿಗಳ ಲೋಕಾರ್ಪಣೆ ನಡೆಯಿತು.
ಬಿಜಾಪುರದಿಂದ ಪಾದಯಾತ್ರೆ ತಂಡ: ಬಿಜಾಪುರದಿಂದ 300 ಕಿ.ಮೀ. ದೂರವನ್ನು ನಡೆಯುತ್ತಲೇ 5 ದಿನಗಳಲ್ಲಿ ಕ್ರಮಿಸಿ ವಾದಿರಾಜ ಅವಧಾನಿ ನೇತೃತ್ವದಲ್ಲಿ 21 ಯಾತ್ರಿಕರ ತಂಡ ಶನಿವಾರ ಮಳಖೇಡ ತಲುಪಿದೆ. ನಿತ್ಯವೂ 40 ರಿಂದ 50 ಕಿಮೀ ನಡೆಯುವುದು, ದಾರಿಯಲ್ಲಿ ಮೊಕ್ಕಾಂ ಹೂಡುವುದು, ಅಲ್ಲೇ ಊಟೋಪಚಾರ, ಮತ್ತೆ ನಡೆಯುವುದು... ಹೀಗೆ 5 ದಿನಗಳಲ್ಲಿ ಬಿಜಾಪುರದಿಂದ ಮಳಖೇಡಕ್ಕೆ ತಾವು ಬಂದಿರುವುದಾಗಿ ತಂಡದ ಸದಸ್ಯರು 'ಕನ್ನಡಪ್ರಭ' ಜೊತೆ ಮಾತನಾಡುತ್ತ ಹೇಳಿದ್ದಾರೆ.
ಇಂದು ಉತ್ತರಾರಾಧನೆ: 28ರಂದು ಜಯರಾಯರ ಉತ್ತರಾರಾಧನೆ ಮಹೋತ್ಸವ. ಶ್ರೀಗಳಿಂದ ಬೆಳಗ್ಗೆ 6.30ಕ್ಕೆ ಸುಧಾ ಪಾಠ, 10ಕ್ಕೆ ಮನ್ಯುಸೂಕ್ತ ಹೋಮ, ಗಜವಾಹನೋತ್ಸವ, ಶ್ರೀಗಳಿಂದ ಸಂಸ್ಥಾನ ಪೂಜೆ, ಸಂಜೆ 6ಕ್ಕೆ ಪ್ರವಚನ, ಶ್ರೀಗಳ ಅಮೃತೋಪದೇಶ ನಡೆಯಲಿವೆ. ಆರಾಧನೆಗೆ ಇಂದ್ರ ಭವನ ಅಲಂಕೃತಗೊಂಡಿದ್ದು, ಸಕಲ ಸಿದ್ಧತೆಗಳು ಹೊಣೆ ಪಂಡಿತ ವೆಂಕಣ್ಣಾಚಾರ್ಯ ಪೂಜಾರರದ್ದು.
ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳು ಹಾಗೂ ಉತ್ತರ ಭಾರತದ ಅನೇಕ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಮಳಖೇಡಕ್ಕೆ ಆಗಮಿಸಿದ್ದು, ಗುರುಗಳ ಆರಾಧನೆಯಲ್ಲಿ ಭಾಗವಹಿಸಿ ಅವರ ಕೃಪಾಶೀರ್ವದಕ್ಕೆ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement