ಸಂಕ್ಷಿಪ್ತ ಸುದ್ದಿ
ಹೋಮಿಯೋಪತಿ ಶಿಬಿರ ಇಂದು
ಗುಲ್ಬರ್ಗ: ನಗರದ ಲಾಲಗೇರಿ ಕ್ರಾಸ್ನಲ್ಲಿರುವ ನಂದಿ ಹೋಮಿಯೋಪತಿ ಕ್ಲಿನಿಕ್ನಲ್ಲಿ ಜು.28 ರಂದು ಉಚಿತ ಹೋಮಿಯೋಪತಿ ಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ. ಸೊಂಟನೋವು, ಕುತ್ತಿಗೆ ನೋವು, ಕೈಕಾಲುಗಳಲ್ಲಿ ಜೋಮು, ಕೈಕಾಲು ಹರಿಯುವುದು, ಸಂಧಿವಾತ, ಸ್ಥೂಲಕಾಯ, ಅಲರ್ಜಿ, ಅಸ್ತಮಾ, ಉಬ್ಬಸ ಬರುವುದು ಮುಂತಾದ ರೋಗಗಳಿಗೆ ಚಿಕಿತ್ಸೆ ನೀಡಿ ಔಷಧಿ ನೀಡಲಾಗುವುದು. ನುರಿತ ಹೋಮಿಯೋಪತಿಕ್ ವೈದ್ಯರಾದ ಡಾ. ಶರಣ ಎನ್. ಕಂಠಿ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದ್ದು, ಹೆಚ್ಚಿನ ಸಾರ್ವಜನಿಕರು ಇದರ ಸದುಪಯೋಗ ಪಡೆಯಲು ಕೋರಲಾಗಿದೆ.
ಹೆಪಟೈಟಿಸ್ ಬಿ, ಸಿ ತಪಾಸಣೆ ಇಂದು
ಗುಲ್ಬರ್ಗ: ವಿಶ್ವ ಹೆಪಟೈಟಿಸ್ ದಿನಾಚರಣೆ ಅಂಗವಾಗಿ ನಗರದ ಚಿರಾಯು ಆಸ್ಪತ್ರೆಯಲ್ಲಿ ಜು.28 ರಂದು ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಉಚಿತ ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಪತ್ತೆದಾರಿ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಚೆರಮನ್ ಡಾ. ಮಂಜುನಾಥ ದೋಶೆಟ್ಟಿ ತಿಳಿಸಿದ್ದಾರೆ.ಪರಿಣಿತ ತಜ್ಞ ವೈದ್ಯರಾದ ಡಾ. ನಾಗರಾಜ ಕೋತ್ಲಿ ಅವರು ಶಿಬಿರ ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗೆ 08472- 241717, 261717, 8494904305ಗೆ ಸಂಪರ್ಕಿಸಲು ಕೋರಲಾಗಿದೆ.
ಕಾಯಿಸಿ, ಆರಿಸಿದ ನೀರು ಕುಡಿಯಿರಿ
ಗುಲ್ಬರ್ಗ: ನಗರಕ್ಕೆ ನೀರು ಸರಬರಾಜು ಮಾಡುತ್ತಿರುವ ಭೀಮಾ ಮತ್ತು ಬೆಣ್ಣೆತೋರಾ ನದಿಯ ನೀರನ್ನು ಶುದ್ಧೀಕರಿಸಿ ಸೂಪರ್ ಕ್ಲೋರಿನೇಷನ್ ಮಾಡಿ ವಿತರಣೆ ಮಾಡಲಾಗುತ್ತಿದೆ. ಆದರೂ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವುದರಿಂದ ನಾಗರಿಕರು ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯುಬೇಕು ಎಂದು ನೀರು ಸರಬರಾಜು ಮಂಡಳಿ ತಿಳಿಸಿದೆ. ಗ್ರಾಹಕರು ತಮ್ಮ ಮನೆಗೆ ಅಳವಡಿಸಿಕೊಂಡು ನಳದ ಜೋಡಣೆಗೆ ತೊಟ್ಟಿಗಳನ್ನು ಕಡ್ಡಾಯವಾಗಿ ಕೂಡಿಸಿಕೊಳ್ಳಬೇಕು ಹಾಗೂ ನಳದ ತಗ್ಗುಗಳನ್ನು ಮುಚ್ಚಬೇಕು. ತಗ್ಗುಗಳಲ್ಲಿ ಹೊಲಸು ನೀರು ಸಂಗ್ರಹಣೆಯಾಗಿ ಅದೇ ನೀರು ಮತ್ತೆ ನಳದ ತೊಟ್ಟಿಯ ಮುಖಾಂತರ ಗ್ರಾಹಕರಿಗೆ ತಲುಪುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ ಎಂದು ತಿಳಿಸಿದೆ.
ನಾಳೆ ನೇತ್ರ ಚಿಕಿತ್ಸೆ
ಗುಲ್ಬರ್ಗ: ಹೈ.ಕ. ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ನೇತ್ರ ಚಿಕಿತ್ಸಾ ಶಾಸ್ತ್ರ ವಿಭಾಗ ಹಾಗೂ ಜರ್ಮನಿಯ ಹಮಾರಾ ಬಂಧನ ಸಂಸ್ಥೆಯ ಸಹಯೋಗದಲ್ಲಿ ಜು.29 ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ಗುಲ್ಬರ್ಗ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಹೈ.ಕ. ಶಿಕ್ಷಣ ಸಂಸ್ಥೆಯ ಐಟಿಟಿ ಕಾಲೇಜಿನ ಆವರಣದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಹಲವಾರು ಕಣ್ಣಿನ ತೊಂದರೆಗಳಿಂದ ಬಳಲುತ್ತಿರುವ ಗುಲ್ಬರ್ಗ, ಯಾದಗಿರಿ ಮತ್ತು ಬೀದರ್ ಜಿಲ್ಲೆ ಸೇರಿದಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ನಾಗರಿಕರು ಈ ಉಚಿತ ನೇತ್ರ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.
ವೃತ್ತಿ ಪರೀಕ್ಷೆ: ನಿಷೇಧಾಜ್ಞೆ
ಗುಲ್ಬರ್ಗ: ಗುಲ್ಬರ್ಗ ನಗರ ಹಾಗೂ ತಾಲೂಕು ಪರೀಕ್ಷಾ ಕೇಂದ್ರಗಳಲ್ಲಿ ಜು.26 ರಿಂದ 31ರವರೆಗೆ ಅಖಿಲ ಭಾರತ ವೃತ್ತಿ ಪರೀಕ್ಷೆ (ಐಟಿಐ) ಜರುಗಲಿವೆ. ಪರೀಕ್ಷೆಗಳನ್ನು ಸುಸೂತ್ರವಾಗಿ ಜರುಗಿಸಲು ಅನುವಾಗುವಂತೆ ಪರೀಕ್ಷೆಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗಳು ಪರೀಕ್ಷೆ ಕೇಂದ್ರ ಸುತ್ತಮುತ್ತಲಿನ 200 ಮೀಟರ್ ಅಂತರದಲ್ಲಿ ಪ್ರವೇಶ ಮಾಡದಂತೆ ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಅಂತರದಲ್ಲಿ ಇರುವ ಜಿರಾಕ್ಸ್ ಅಂಗಡಿಗಳು ಹಾಗೂ ಪುಸ್ತಕ ಮಳಿಗೆಗಳನ್ನು ಮುಚ್ಚುವಂತೆ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪರೀಕ್ಷೆ ನಡೆಯುವ ಕೇಂದ್ರಗಳ ಪರೀಕ್ಷೆ ಸಮಯದಲ್ಲಿ ಸಂಬಂಧಪಟ್ಟ ಪರೀಕ್ಷಾ ಸಿಬ್ಬಂದಿ ಸೇರಿದಂತೆ ಯಾವುದೇ ವ್ಯಕ್ತಿಗಳು ಹಾಗೂ ಅಭ್ಯರ್ಥಿಗಳು ಮೊಬೈಲ್ ಹೊಂದದಂತೆ ಮತ್ತು ಉಪಯೋಗಿಸದಂತೆ ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 35 (ಸಿ)ರ ಅಡಿಯಲ್ಲಿ ನಿಷೇಧಿಸಲಾಗಿದೆ.
ಡಿ.ಇಡಿ ದಾಖಲಾತಿ ಅವಧಿ ವಿಸ್ತರಣೆ
ಗುಲ್ಬರ್ಗ: ವೆಬ್ಸೈಟ್ನಲ್ಲಿ ಜು.7ರಂದು ಪ್ರಕಟಿಸಿದಂತೆ 2013-14ನೇ ಸಾಲಿಗೆ ಪ್ರಥಮ ವರ್ಷದ ಡಿ.ಇಡಿ. ದಾಖಲಾತಿಗೆ ಜು.25ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ಪ್ರಸ್ತುತ ದಾಖಲಾತಿಗಳು ನಿರೀಕ್ಷಿಸಿದ ಮಟ್ಟದಲ್ಲಿ ಆಗದಿರುವುದರಿಂದ ದಾಖಲಾತಿ ದಿನಾಂಕವನ್ನು ಜು.31ರವರೆಗೆ ವಿಸ್ತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸದೆ ಇದ್ದು, ಅಭ್ಯರ್ಥಿಗಳು ಡಯಟ್ನಲ್ಲಿ ನೋಂದಣಿ ಮಾಡಿಸಿದ್ದಲ್ಲಿ ಅವರೂ ದಾಖಲಾತಿ ಪಡೆಯಬಹುದು ಎಂದು ತಿಳಿಸಲಾಗಿದೆ.
ಕೇಂದ್ರ ರೇಲ್ವೆ ಸಚಿವರ ಪ್ರವಾಸ
ಗುಲ್ಬರ್ಗ: ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಜು.29 ರಾತ್ರಿ 8ಕ್ಕೆ ರೈಲಿನ ಮೂಲಕ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಜು.30 ರಂದು ಬೆಳಿಗ್ಗೆ 11ಕ್ಕೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ 150ನೇ ರಾಷ್ಟ್ರೀಯ ಹೆದ್ದಾರಿಯ ಅಡಿಗಲ್ಲು ಸಮಾರಂಭ ನೆರವೇರಿಸುವರು. ಮಧ್ಯಾಹ್ನ 2.30ಕ್ಕೆ ಹೆಲಿಕಾಪ್ಟರ್ ಮೂಲಕ ಅಫಜಲ್ಪುರಕ್ಕೆ ತೆರಳಿ ನ್ಯಾಷನಲ್ ಹಾಲ್ನಲ್ಲಿ ಗುಲ್ಬರ್ಗ-ಮಹಾರಾಷ್ಟ್ರ ಗಡಿ ಭಾಗದ ರಸ್ತೆಯ ಮುಂದುವರೆದ ಕಾಮಗಾರಿಯ ಅಡಿಗಲ್ಲು ಸಮಾರಂಭ ನೆರವೇರಿಸುವರು. ಸಂಜೆ 4.30ಕ್ಕೆ ಅಫಜಲ್ಪುರದಿಂದ ಹೈದ್ರಾಬಾದಿಗೆ ತೆರಳುವರು.
330 ಕ್ಯು. ನೀರು ಮುಲ್ಲಾಮಾರಿಗೆ
ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಒಂದು ಗೇಟಿನ ಮೂಲಕ 330 ಕ್ಯುಸೆಕ್ ನೀರು ಮುಲ್ಲಾಮಾರಿ ನದಿಗೆ ಗುರುವಾರ ರಾತ್ರಿ ಹರಿದು ಬಿಡಲಾಗಿದೆ ಎಂದು ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೈಯದ್ ಶಾಹೀದ್ ಅಲಿ ತಿಳಿಸಿದ್ದಾರೆ. ಕೆಳದಂಡೆ ಮುಲ್ಲಾಮಾರಿ ಜಲಾಶಯದ ಗರಿಷ್ಟಮಟ್ಟ 491 ಮೀಟರ್ ಇದ್ದು, 370 ಕ್ಯುಸೆಕ್ ಒಳ ಹರಿವು ಇರುವುದರಿಂದ ನೀರಿನ ಮಟ್ಟ ಕಾಯ್ದುಕೊಳ್ಳಲು ಒಂದು ಗೇಟು 1 ಫೀಟ್ ಎತ್ತರಗೊಳಿಸಿ ನೀರು ಹೊರಕ್ಕೆ ಹರಿದು ಬಿಡಲಾಗುತ್ತಿದೆ ಎಂದು ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಕೊಲೆ; ಯುವತಿ ಗುರುತು ಪತ್ತೆ
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ಮರಗೋಳ ಕ್ರಾಸ್ ಹತ್ತಿರ ಕೊಲೆಯಾದ ಯುವತಿಯ ಗುರುತು ಪತ್ತೆಯಾಗಿದೆ. ಕೊಲೆಯಾದ ಯುವತಿಯನ್ನು ಜೇವರ್ಗಿ ತಾಲೂಕಿನ ಯಡ್ರಾಮಿ ಗ್ರಾಮದ ಭಾಗ್ಯ ತಂದೆ ಶರಣಪ್ಪ (20) ಎಂದು ಗುರುತಿಸಲಾಗಿದೆ. ಭಾಗ್ಯಳ ಗೆಳತಿಯೊಬ್ಬಳು ಸೇಡಂನಲ್ಲಿದ್ದು, ಭಾಗ್ಯ ಗೆಳತಿ ಬಳಿ ಹೋದಾಗ ಅಲ್ಲಿ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆದಿದೆ. ಆ ಯುವಕನನ್ನು ಪ್ರೀತಿಸುತ್ತಿದ್ದ ಭಾಗ್ಯ ಮದುವೆಯಾಗುವಂತೆ ಒತ್ತಡ ಹೇರಿದ್ದಳು. ಅದಕ್ಕೆ ಯುವಕ ನಿರಾಕರಿಸಿದ್ದ ಎಂದು ತಿಳಿದು ಬಂದಿದೆ. ಯುವತಿಯ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕೊಲೆಗೆ ಪ್ರೇಮ ಪ್ರಕರಣವೇ ಕಾರಣವೆಂದು ತಿಳಿದು ಬಂದಿದೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಸರಾ ಕ್ರೀಡಾಕೂಟ ಮುಂದಕ್ಕೆ
ಗುಲ್ಬರ್ಗ: ಜು.31 ಹಾಗೂ ಆಗಸ್ಟ್ 1ರಂದು ನಡೆಯಬೇಕಿದ್ದ ಅಫಜಲ್ಪುರ ತಾಲೂಕು ಮಟ್ಟದ ಪೈಕಾ ಕ್ರೀಡಾಕೂಟ ಹಾಗೂ ದಸರಾ ಕ್ರೀಡಾಕೂಟವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಿ ಅವುಗಳನ್ನು ಆಗಸ್ಟ್ 3 ಮತ್ತು 4ರಂದು ಹಾಗೂ ಆಳಂದ ತಾಲೂಕು ಮಟ್ಟದ ಪೈಕಾ ಹಾಗೂ ದಸರಾ ಕ್ರೀಡಾಕೂಟ ಜು.29 ಮತ್ತು 30ರಂದು ನಡೆಯಬೇಕಿದ್ದ ಕ್ರೀಡಾಕೂಟಗಳು ಆಗಸ್ಟ್ 5 ಮತ್ತು 6ರಂದು ನಡೆಯಲಿವೆ. ಈ ಎರಡೂ ತಾಲೂಕುಗಳ ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಹೆಚ್ಚಿನ ಮಾಹಿತಿಗೆ ಹಾಕಿ ತರಬೇತುದಾರ ರಾಮಚಂದ್ರ ಮೊ. 8861487321ನ್ನು ಸಂಪರ್ಕಿಸಲು ಕೋರಲಾಗಿದೆ.