ಡಿವಿಜಿ ಕೃತಿಸಾಹಿತ್ಯದ ಕನ್ನಡಿ
ಸುರಪುರ: ಕನ್ನಡ ಸಾಹಿತ್ಯದಲ್ಲಿ ಮಕುಂತಿಮ್ಮನ ಕಗ್ಗ ಮೇರು ಕೃತಿಯಾಗಿದೆ. ಈ ಕಗ್ಗದ ಮೂಲಕ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ ಡಿ.ವಿ. ಗುಂಡಪ್ಪನವರ ಕೃತಿಗಳು ಸಾಹಿತ್ಯದ ಕೈಗನ್ನಡಿ ಇದ್ದಂತೆ ಎಂದು ಕಸಾಪ ತಾಲೂಕಾಧ್ಯಕ್ಷ ಶಾಂತಪ್ಪ ಬೂದಿಹಾಳ ಹೇಳಿದರು.
ಸಮೀಪದ ರಂಗಂಪೇಟೆಯ ಪ್ರಿಯದರ್ಶಿನಿ ಪ್ರೌಢಶಾಲೆಯಲ್ಲಿ ಕಸಾಪ ತಾಲೂಕು ಘಟಕ ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ಡಿವಿ ಗುಂಡಪ್ಪನವರ ಬರೆಹ ಹಾಗೂ ಬದುಕು ಕುರಿತು ಉಪನ್ಯಾಸ ನೀಡಿದರು.
ಗುಂಡಪ್ಪನವರು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ವೈಚಾರಿಕ ನಿಲುವನ್ನು ಮೂಡಿಸಲು ಪ್ರಯತ್ನಿಸಿದರು. 945 ಪದ್ಯಗಳನ್ನು ಒಳಗೊಂಡ ಕಗ್ಗ ವಿಶಿಷ್ಟ ಸಾಹಿತ್ಯಿಕ ಕೃತಿಯಾಗಿದೆ. ಸಾಹಿತ್ಯದ ಹಲವಾರು ಮಜುಲುಗಳನ್ನು ಒಳಗೊಂಡಿರುವ ಈ ಮಂಕುತ್ತಿಮ್ಮನ ಕಗ್ಗ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಕೃತಿಯಾಗಿದೆ. ಇದುವರೆಗೂ 14 ಮುದ್ರಣಗಳನ್ನು ಕಂಡು 1 ಲಕ್ಷ ಪ್ರತಿಗಳು ಮಾರಾಟವಾಗಿರುವುದೇ ಈ ಕಾವ್ಯದ ಶ್ರೇಷ್ಠತೆಗೆ ಸಾಕ್ಷಿಯಾಗಿದೆ ಎಂದರು.
ಜಾನಪದ ಸಾಹಿತಿ ಸೂಗಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚುಟುಕು ಸಾಹಿತಿ ನಾಗಣ್ಣ ತ್ರಿವೇದಿ, ಪ್ರಕಾಶ ಅಂಗಡಿ ವೇದಿಕೆಯಲ್ಲಿದ್ದರು. ಗಂಗಾಧರ ಪತ್ತಾರ ನಿರೂಪಿಸಿ, ವಂದಿಸಿದರು.