ನೀಲಕಂಠರಾಯನಗಡ್ಡೆ ನಿವಾಸಿಗಳು ಅತಂತ್ರ
ಕನ್ನಡಪ್ರಭ ವಾರ್ತೆ ಯಾದಗಿರಿ ಜು.28
ಕೃಷ್ಣೆ ಪ್ರವಾಹದಿಂದ ನಡುಗಡ್ಡೆಯಾದ ಸುರಪುರ ತಾಲೂಕಿನ ನೀರಕಂಠರಾಯನಗಡ್ಡೆಗೆ ಸಂಪರ್ಕ ಕಲ್ಪಿಸಲು ತರಲಾಗಿದ್ದ ಬೋಟ್ ಕೆಟ್ಟು ಅಲ್ಲಿಯ ನಿವಾಸಿಗಳು ಅತಂತ್ರರಾಗಿದ್ದಾರೆ. ಅಗತ್ಯ ಸಾಮಗ್ರಿ ಖರೀದಿಸಲು ಶನಿವಾರ ಬೋಟ್ನಲ್ಲಿ ಬೆಂಚಿಗಡ್ಡಿಗೆ ಆಗಮಿಸಿದ್ದ ಗಡ್ಡೆ ನಿವಾಸಿಗಳು ವಾಪಸ್ಸಾಗಲು ಸಾಧ್ಯವಾಗದೇ ಅತಂತ್ರರಾಗಿದ್ದಾರೆ.
ಜೋಳದ ಹಿಟ್ಟು ಹಾಗೂ ಇನ್ನಿತರ ಅಗತ್ಯ ದಿನಬಳಕೆ ಸಾಮಗ್ರಿಗಳು ಖಾಲಿಯಾಗಿದ್ದರಿಂದ ನಾಲ್ವರು ಶನಿವಾರ ಬೋಟ್ ಸಹಾಯದಿಂದ ಈ ಕಡೆ ಬಂದಿದ್ದರು. ಗಡ್ಡೆಯಿಂದ ಈ ನಾಲ್ವರನ್ನು ಇತ್ತ ಕರೆತರುವಾಗಲೇ ಬೋಟ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಶನಿವಾರ ಸಂಜೆಯೊಳಗೆ ದುರಸ್ತಿಯಾಗಬಹುದು ಎಂದುಕೊಂಡು ಗಡ್ಡೆ ನಿವಾಸಿಗಳು ಅಗತ್ಯ ಸಾಮಗ್ರಿಗಳನ್ನು ಖರೀದಿಸಿಕೊಂಡಿದ್ದರು. ಆದರೆ ಭಾನುವಾರವೂ ಅದು ದುರಸ್ತಿಯಾಗದ ಕಾರಣ ಗಡ್ಡೆಯಿಂದ ಆಗಮಿಸಿದ್ದವರು ವಾಪಸ್ಸಾಗಲು ಸಾಧ್ಯವಾಗದೇ ಅತಂತ್ರರಾಗಿದ್ದಾರೆ.
ತೊಂದರೆಯಲ್ಲಿ ಕುಟುಂಬಗಳು: ನಾವು ಶನಿವಾರವೇ ನದಿ ದಾಟಿ ಬಂದಿದ್ದೇವೆ. ಗಡ್ಡೆಯ ಅನೇಕ ಕುಟುಂಬಗಳು ಅಗತ್ಯ ಸಾಮಗ್ರಿ ಇಲ್ಲದೇ ತೊಂದರೆಯಲ್ಲಿದ್ದಾರೆ. ಅದಕ್ಕಾಗಿ ಖರೀದಿಸಲು ನಾಲ್ವರು ಬೋಟ್ ಸಹಾಯದಿಂದ ಬಂದಿದ್ದೇವೆ. ಆದರೆ ಬೋಟ್ ದುರಸ್ತಿ ಇನ್ನೂ ಆಗಿಲ್ಲ. ಇದರಿಂದ ಇಲ್ಲೇ ರಾತ್ರಿ ಕಳೆಯುವಂತಾಯಿತು. ಭಾನುವಾರವೂ ಬೋಟ್ ದುರಸ್ತಿಯಾಗಿಲ್ಲ. ಇದರಿಂದ ನಾವು ಆತಂಕದಲ್ಲಿದ್ದೇವೆ. ಅಧಿಕಾರಿಗಳು ನಮ್ಮ ಕಷ್ಟವನ್ನು ಅರಿಯುತ್ತಿಲ್ಲ ಎಂದು ನೀಲಕಂಠರಾಯನಗಡ್ಡಿಯಿಂದ ಪಡಿತರ ಸಾಮಗ್ರಿ ಖರೀದಿಸಲು ಬೆಂಚಿಗಡ್ಡಿಗೆ ಆಗಮಿಸಿರುವ ಕನಕಪ್ಪ ಹೇಳುತ್ತಾರೆ.
ನಷ್ಟ ಪರಿಶೀಲನೆ: ನಾರಾಯಣಪುರ ಜಲಾಶಯದಿಂದ 2.30 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಕೊಳ್ಳೂರು ಸೇತುವೆಯಲ್ಲಿ ವಾಹನ ಸಂಚಾರ ಮುಕ್ತಗೊಳಿಸಲಾಗಿದೆ. ಆದರೆ ನದಿ ಪಾತ್ರದ ಅನೇಕ ಹಳ್ಳಿಗಳ ಜಲಾವೃತಗೊಂಡಿದ್ದ ಹೊಲಗಳಲ್ಲಿ ಇನ್ನೂ ನೀರು ಇಳಿದಿಲ್ಲ. ಈ ಕುರಿತು ಆಗಿರುವ ನಷ್ಟವನ್ನು ಪರಿಶೀಲಿಸುವ ಕಾರ್ಯಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ನೀರಿನಲ್ಲಿ ಬೆಳೆ- ರೈತರಲ್ಲಿ ಆತಂಕ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರನ್ನು ಬಿಟ್ಟಿರುವುದರಿಂದ ಹಯ್ಯಾಳ(ಬಿ) ಹೋಬಳಿಯ ನದಿ ಪಾತ್ರದ ಅನೇಕ ಗ್ರಾಮಗಳ ಹೊಲಗಳು ಜಲಾವೃತಗೊಂಡಿವೆ. ಬತ್ತ, ಹತ್ತಿ ಹಾಗೂ ಹೆಸರು ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ನಿಂತಿವೆ. ಇದರಿಂದ ರೈತರು ತೀವ್ರ ಆತಂಕದಲ್ಲಿದ್ದಾರೆ.
ಈ ಬಾರಿ ಹೆಸರು ಬೆಳೆ ಚೆನ್ನಾಗಿ ಬರುತ್ತದೆ ಎಂಬ ನೀರಿಕ್ಷೆಯಲ್ಲಿದ್ದ ರೈತರಿಗೆ ಕೃಷ್ಣಾ ನದಿಗೆ ಪ್ರವಾಹ ಬಂದು ಬೆಳೆದ ಬೆಳೆಗಳು ನೀರಿನಲ್ಲಿ ನಿಂತಿರುವುದರಿಂದ ರೈತರ ಮೊಗದಲ್ಲಿ ಚಿಂತೆ ಆವರಿಸಿದೆ. ಶಹಾಪುರ ತಾಲೂಕಿನ ಐಕೂರ ಗ್ರಾಮದ ಅನತಿ ದೂರದಲ್ಲಿ ಕೃಷ್ಣಾ ನದಿ ಹರಿಯುತ್ತಿದೆ. ನದಿಗೆ ಪ್ರವಾಹ ಬಂದಿರುವುದರಿಂದ ತೀರದ ನೂರಾರು ಎಕರೆ ಹೊಲಗಳು ಜಲಾವೃತಗೊಂಡಿವೆ.
ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬೇಕಿದ್ದ ವಾಣಿಜ್ಯ ಬೆಳೆಗಳು ಪ್ರವಾಹದ ನೀರಿನಲ್ಲಿ ನಿಂತಿವೆ. ಎರಡು ದಿನಗಳಿಂದ ಹೊಲಗಳಲ್ಲಿ ನೀರು ನಿಂತಿದ್ದು, ಇನ್ನೂ ಕೆಲ ದಿನ ಇದೇ ಪರಿಸ್ಥಿತಿ ಮುಂದುವರಿದರೆ ಬೆಳೆ ಸಂಪೂರ್ಣವಾಗಿ ಕೊಳೆತು ಹೋಗಲಿದೆ. ಇದರಿಂದ ರೈತರಿಗೆ ಮುಂದೇನು ಮಾಡಬೇಕು ಎಂಬುದು ತೋಚದಂತಾಗಿದೆ.
ಇನ್ನೂ ಪರಿಶೀಲನೆಯಿಲ್ಲ: ಮಳೆ ಅಭಾವದಿಂದ ಬಿತ್ತನೆ ಕಾರ್ಯ ತಡವಾಗಿತ್ತು. ಈಗ ಪ್ರವಾಹ ಬಂದು ಹೊಲಗಳು ಜಲಾವೃತಗೊಂಡಿವೆ. ಬೆಳೆಗಳು ಕೊಳೆಯುತ್ತಿವೆ. ಇನ್ನೂ ಸಂಬಂಧಪಟ್ಟ ಅಧಿಕಾರಿಗಳು ನಷ್ಟ ಪರಿಶೀಲಿಸಲು ಆಗಮಿಸಿಲ್ಲ ಎಂದು ಐಕೂರು ಗ್ರಾಮದ ನಿಂಗಣ್ಣ ಪೂಜಾರಿ ಆರೋಪಿಸಿದ್ದಾರೆ. ನದಿಗೆ ಬಂದ ಪ್ರವಾಹ ಯಾವಾಗ ಕಡಿಮೆಯಾಗುತ್ತದೆ, ನೀರಿನಿಂದ ಮುಳುಗಿರುವ ಬೆಳೆಗಳು ಯಾವಾಗ ಕಣ್ಣಿಗೆ ಕಾಣುತ್ತವೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.