ಅಂತಾರಾಜ್ಯ ಸಂಪರ್ಕದ ರಸ್ತೆ ಅಪೂರ್ಣ ಯಾಕ್ರಿ?
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.29
ದಶಕಗಳಿಂದ ಬುಟ್ಟಿ ಮಣ್ಣೂ ಕಾಣದ ರಸ್ತೆ ಎಂದೇ ಕುಖ್ಯಾತಿ ಗಳಿಸಿದ್ದ ಚೌಡಾಪುರ- ಅಫಜಲ್ಪುರ- ಕರ್ಜಗಿ- ಹೊಸೂರಿನ 70 ಕಿಮೀ ಉದ್ದದ ಅಂತಾರಾಜ್ಯ ಸಂಪರ್ಕ(ಕರ್ನಾಟಕ- ಮಹಾರಾಷ್ಟ್ರ) ರಸ್ತೆಯ ಚೌಡಾಪುರ- ಕರ್ಜಗಿವರೆಗಿನ 46 ಕಿಮೀ ಉದ್ದದ ರಸ್ತೆ ದ್ವಿಮುಖ ರಸ್ತೆಯಾಗಿ ಅಭಿವೃದ್ಧಿಗೊಳ್ಳುವ ಯೋಗ ಕೂಡಿ ಬಂದಿದೆ.
ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಡಿ ಅಂತಾರಾಜ್ಯ ಸಂಪರ್ಕ ಯೋಜನೆ (ಐಎಸ್ಸಿ)ಯಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಈ ರಸ್ತೆ ಅಭಿವೃದ್ಧಿ ಯೋಜನೆ ಗುಲ್ಬರ್ಗ- ಹೊಸೂರಿನ 100 ಕಿಮೀ ಉದ್ದದ ಅಂತಾರಾಜ್ಯ ರಸ್ತೆಗೆ ಹೋಲಿಕೆ ಮಾಡಿದಲ್ಲಿ ಅರ್ಧ ಕಾಮಗಾರಿ ಎಂದೇ ಹೇಳಬೇಕು.
20 ಕಿಮೀ ಅಭಿವೃದ್ಧಿಯಿಂದ ವಂಚಿತ: ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ ಈ ರಸ್ತೆ (ಗುಲ್ಬರ್ಗ- ಚೌಡಾಪುರವರೆಗೆ 33 ಕಿಮೀ)ಯ ಅಭಿವೃದ್ಧಿ ಕಾರ್ಯವನ್ನು 4 ವರ್ಷಗಳ ಹಿಂದೆಯೇ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿದೆ. ಚೌಡಾಪುರದಿಂದ ಹೊಸೂರವರೆಗಿನ 70 ಕಿಮೀ ರಸ್ತೆ ಅಂತಾರಾಜ್ಯ ಸಂಪರ್ಕ ಯೋಜನೆಯಡಿ ನಡೆಯುತ್ತಿದೆ. ಮತ್ತೆ 20 ಕಿಮೀ.ನಷ್ಟು ಉದ್ದ ರಸ್ತೆ ಅಭಿವೃದ್ಧಿ ಈ ಯೋಜನೆಯಿಂದ ವಂಚಿತವಾಗಿದೆ.
ಆದರೆ ಭೂ ಸಾರಿಗೆ ಸಚಿವಾಲಯದ ಅಂತಾರಾಜ್ಯ ಸಂಪರ್ಕ ಯೋಜನೆಯಡಿ ಕೊನೆಗೂ ರಸ್ತೆ ದುರಸ್ತಿ ಕೆಲಸಕ್ಕೆ ಚಾಲನೆ ದೊರಕುತ್ತಿದೆ ಎಂಬುದು ಅಲ್ಪ ಸಮಾಧಾನ ತಂದಿದೆ. ತುಂಡಾಗಿ ಅಭಿವೃದ್ಧಿಪಡಿಸುವುದಕ್ಕಿಂತ 100 ಕಿಮೀ ರಸ್ತೆಯನ್ನು ಏಕಕಾಲಕ್ಕೆ ಮಾಡಿ ಮುಗಿಸುವ ಕಾಳಜಿಯನ್ನು ಆಳುವವರು ತೋರಬೇಕಿತ್ತು.
ಚೌಡಾಪುರದಿಂದ ಹೊಸೂರವರೆಗಿನ ಎಲ್ಲ 70 ಕಿಮೀ ಉದ್ದದ ರಸ್ತೆಯನ್ನೇ ಅಂತಾರಾಜ್ಯ ಸಂಪರ್ಕ ಯೋಜನೆಯಡಿಯಲ್ಲಿ ಕೈಗೊಳ್ಳುವ ಭರವಸೆಗಳು ಹುಸಿಯಾಗಿವೆ. ಜು.30ರಂದು ಚೌಡಾಪುರ- ಕರ್ಜಗಿವರೆಗಿನ ಕಾಮಗಾರಿಯನ್ನು ಮಾತ್ರ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆಗೆ ಕೇಂದ್ರದ ಭೂಸಾರಿಗೆ ಸಚಿವಾಲಯ 76.36 ಕೋಟಿ ಅನುದಾನ ನೀಡಲಿದೆ. ಇದರಲ್ಲಿ ಸುಮಾರು 46 ಕಿಮೀ ರಸ್ತೆ ನಿರ್ಮಾಣವಾಗಲಿದೆ.
ಮಹತ್ವದ ರಸ್ತೆಯಾದ್ರೂ ದುರ್ಲಕ್ಷ ವಿಪರೀತ: ಗುಲ್ಬರ್ಗ- ಹೊಸೂರ 100 ಕಿಮೀ ರಸ್ತೆ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಾಜಕೀಯ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ಅಸಡ್ಡೆಯಿಂದಾಗಿ ಈ ರಸ್ತೆ ಹರಿದು ಹೋಗಿ ದಶಕಗಳೇ ಕಳೆದಿದ್ದರೂ ಇಂದಿಗೂ ದುರಸ್ತಿ ಕಂಡಿರಲಿಲ್ಲ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೆಶಿಪ್ ಅಡಿಯಲ್ಲಿ ಗುಲ್ಬರ್ಗ- ಚೌಡಾಪುರ 33 ಕಿಮೀ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಅರ್ಧಮರ್ಧ ಕಾಮಗಾರಿ ನಡೆದು 4 ವರ್ಷವಾದ್ರೂ ತೆವಳುತ್ತಲೇ ಸಾಗಿದೆ.
ಅಕ್ಕಲಕೋಟೆ, ಸೊಲ್ಲಾಪುರ ಮಾರ್ಗವಾಗಿ ಜಿಲ್ಲೆಯ ಗಾಣಗಾಪುರ, ಘತ್ತರಗಾ, ಮಣ್ಣೂರು ಸುಕ್ಷೇತ್ರಗಳಿಗೆ ನಿತ್ಯವೂ ಸಹಸ್ರಾರು ಭಕ್ತರು ಸಂಚರಿಸುತ್ತಾರೆ. ಅವರೆಲ್ಲ ರಸ್ತೆ ದುರವಸ್ಥೆ ಕಂಡು ಸರ್ಕಾರ- ಶಾಸಕರನ್ನು ಹಳಿಯುವಂತಾಗಿತ್ತು. ಕರ್ನಾಟಕ- ಮಹಾರಾಷ್ಟ್ರ ಸಂಪರ್ಕ ಬೆಸೆಯುವ ಈ ರಸ್ತೆ ಸಾರ್ವಕಾಲಿಕ ಹಾಗೂ ಸಂಪೂರ್ಣವಾಗಿರಬೇಕೆಂಬ ಸಾಮಾನ್ಯ ಪರಿಜ್ಞಾನವೂ ನಮ್ಮನ್ನಾಳುವವರಿಗಿಲ್ಲ ಎಂಬುದಕ್ಕೆ ಈ ರಸ್ತೆಯಲ್ಲಿನ ಬೆಳವಣಿಗೆಗಳೇ ಕನ್ನಡಿ.