ಇಂದಿನಿಂದ ನಾಯಕತ್ವ, ಉದ್ಯಮಶೀಲತೆ ತರಬೇತಿ
ಗುಲ್ಬರ್ಗ: ಹುಬ್ಬಳ್ಳಿ ಮೂಲದ ದೇಶಪಾಂಡೆ ಫೌಂಡೇಷನ್ ಗುಲ್ಬರ್ಗ ನಗರದ ಕಾಲೇಜು ವಿದ್ಯಾರ್ಥಿಗಳಿಗೆ ನಾಯಕತ್ವ, ಉದ್ಯಮಶೀಲತೆಯ ಬಗ್ಗೆ ತರಬೇತಿ ನೀಡಿ ಅವರಲ್ಲಿ ನವೀನ ಪರಿಕಲ್ಪನೆ ಸೃಷ್ಟಿಸಿ ಅದನ್ನು ಕಾರ್ಯಗತಗೊಳಿಸಲು ಆರ್ಥಿಕ ನೆರವು ನೀಡಲು ಮುಂದಾಗಿದೆ.
ನಗರದ ವಿವಿಧ ಕಾಲೇಜುಗಳಿಗೆ ಸಂಪರ್ಕಿಸಿ ಈ ತರಬೇತಿ ಬಗ್ಗೆ ಅರಿವು ಮೂಡಿಸಿದ್ದು, ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು ತರಬೇತಿ ಪಡೆಯಲು ಮುಂದಾಗುತ್ತಿದ್ದು, ಜು.30 ರಂದು ನಗರದ ಶರಣಬಸವೇಶ್ವರ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ತರಬೇತಿ ಆರಂಭಿಸಲಾಗುತ್ತಿದೆ ಎಂದು ಫೌಂಡೇಷನ್ ಲೀಡ್ನ ಕಾರ್ಯಕಾರಿ ಮುಖ್ಯಸ್ಥ ಅಜಯ ಸುಮನ್ ಶುಕ್ಲ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನಗರದ ಗೋದುತಾಯಿ, ವಿ.ಜಿ. ಮಹಿಳಾ ಕಾಲೇಜು, ನೂತನ ವಿದ್ಯಾಲಯ ಪದವಿ ಕಾಲೇಜು, ಪಿಡಿಎ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವಾರು ಕಾಲೇಜುಗಳಿಗೆ ಭೇಟಿಯಾಗಿ ತರಬೇತಿ ಕುರಿತು ಮಾಹಿತಿ ನೀಡಲಾಗಿದೆ. ಶೇ.30ರಷ್ಟು ವಿದ್ಯಾರ್ಥಿಗಳು ತರಬೇತಿಗೆ ಆಸಕ್ತಿ ಹೊಂದಿದ್ದಾರೆ ಎಂದರು.
10 ದಿನಗಳ ತರಬೇತಿ: ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಆಯಾ ಕಾಲೇಜಿನ ಬಿಡುವಿನ ವೇಳೆಯಲ್ಲಿ ಅಥವಾ ರಜಾ ದಿನಗಳಲ್ಲಿ ಅವರಿಗೆ 10 ತಿಂಗಳ ಕಾಲ ತರಬೇತಿ ನೀಡಲಾಗುವುದು. ಪ್ರವೇಶ ಶುಲ್ಕ ಕೇವಲ 100 ರು. ಆಗಿದ್ದು, 6 ಅಥವಾ ಒಂದು ವರ್ಷದಲ್ಲಿ ಗುಲ್ಬರ್ಗದಲ್ಲಿಯೂ ಒಂದು ಫೌಂಡೇಷನ್ ಕಚೇರಿ ಸ್ಥಾಪಿಸುವ ಕುರಿತು ಚಿಂತನೆ ನಡೆದಿದೆ ಎಂದರು. ಡಾ. ಗುರುರಾಜ್ ದೇಶಪಾಂಡೆ ಮತ್ತು ಜಯಶ್ರೀ ದೇಶಪಾಂಡೆ ಅವರು 1996ರಲ್ಲಿ ಅಮೇರಿಕದಲ್ಲಿ, 2007 ರಲ್ಲಿ ಭಾರತದಲ್ಲಿ ಮತ್ತು ಆಗಸ್ಟ್ 2008ರಲ್ಲಿ ಹುಬ್ಬಳ್ಳಿಯಲ್ಲಿ ಈ ಫೌಂಡೇಷನ್ ಸ್ಥಾಪಿಸಿದ್ದು, ಪಿಯುಸಿ ಮತ್ತು ಪಿಯುಸಿ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ 10 ತಿಂಗಳ ನಾಯಕತ್ವ ವಿಕಸನ ಕಾರ್ಯಕ್ರಮ ನೀಡಲಾಗುತ್ತಿದೆ ಎಂದರು.
11 ಜಿಲ್ಲೆಗಳಲ್ಲಿ..: ಧಾರವಾಡ, ಹುಬ್ಬಳ್ಳಿ, ಗದಗ, ಹುಲಕೋಟಿ, ಲಕ್ಷ್ಮೇಶ್ವರ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಬಿಜಾಪುರ, ತಾಳಿಕೋಟಿ, ಜಮಖಂಡಿ, ಬಾಗಲಕೋಟೆ, ಶಿರಸಿ, ಬೆಳಗಾವಿ, ಚಿಕ್ಕೋಡಿ ಮತ್ತು ನಿಡಸೋಶಿ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ 16 ಸ್ಥಳಗಳಲ್ಲಿ ಲೀಡ್ ಕಾರ್ಯಕ್ರಮ ನಿರ್ವಹಿಸುತ್ತಿದೆ ಎಂ ದರು. ದೇಶಪಾಂಡೆ ಫೌಂಡೇಷನ್ ಆರ್ಥಿಕ ಅಭಿವೃದ್ಧಿ ಅನ್ವೇಷಣೆಯಲ್ಲಿ ಸಮರ್ಥನೀಯ ಬದಲಾವಣೆಗೆ ವೇಗವರ್ಧಕಗಳಾದ ಉದ್ಯಮಶೀಲತೆ ಮತ್ತು ನಾವೀನ್ಯತೆಯ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆಎಂದರು.ಸುದ್ದಿಗೋಷ್ಠಿಯಲ್ಲಿ ಕವಿತಾ ಕವಲಗಿ, ವಿಕ್ರಮ ಪಾಟೀಲ್ ಉಪಸ್ಥಿತರಿದ್ದರು.