ನಯವಂಚಕ ಶಿಕ್ಷಕ ಮತ್ತೆ ಪೊಲೀಸ್ ಅತಿಥಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.29
ಬ್ಯಾಂಕುಗಳ ಎಟಿಎಂಗಳಲ್ಲಿ ಠಳಾಯಿಸಿ ನಯವಾಗಿಯೇ ಅಲ್ಲಿಗೆ ಬರುವ ವೃದ್ಧರು, ಮಹಿಳೆಯರಿಗೆ ಸಹಾಯಹಸ್ತ ಚಾಚುವ ನೆಪದಲ್ಲಿ ಸಿಕ್ರೇಟ್ ಪಾಸ್ವರ್ಡ್ ಅರಿತು ಕ್ರೆಡಿಟ್ ಕಾರ್ಡ್ ಸಹ ಅದಲು ಬದಲು ಮಾಡಿ ಲಕ್ಷಾಂತರ ರು. ವಂಚನೆ ಮಾಡುತ್ತಿದ್ದ ಚಾಲಾಕಿ ಶಾಲಾ ಶಿಕ್ಷಕ, ಎಟಿಎಂ ನಯವಂಚಕ ನಾಥೂರಾಮ ಶಂಕರ ಚವ್ಹಾಣ್ನನ್ನು ಕೊನೆಗೂ ಗುಲ್ಬರ್ಗ ಪೊಲೀಸರು ಬಂಧಿಸಿದ್ದಾರೆ.
ಗಮನಿಸಬೇಕಾದ ಸಂಗತಿ ಎಂದರೆ- 2013ರ ಜೂನ್ನಲ್ಲಿ ಬೀದರ್ ಮೂಲದ ಸದ್ಯ ಇಲ್ಲಿನ ಜಯನಗರದಲ್ಲಿರುವ ಸಂತೋಷ ಬೋಡಾ ಎಂಬುವವರಿಗೆ ಸ್ಥಳೀಯ ಸಂಗಮೇಶ್ವರ ಕಾಲೋನಿ ಎಸಿಬಿಎಚ್ ಎಟಿಎಂನಲ್ಲಿ ಸಹಾಯ ಮಾಡುವುದಾಗಿ ಯಾಮಾರಿಸಿ 10 ಸಾವಿರ ಡ್ರಾ ಮಾಡಿದ್ದ. ಆಗ ಅವರೇ ವಂಚಕ ನಾಥೂರಾಮನನ್ನು ಹಣ ಸಮೇತ ರಾಘವೇಂದ್ರ ನಗರ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದರು.
12.6.2013ರಲ್ಲಿ ನಾಥೂರಾಮನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿ, ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿತ್ತು. 12 ದಿನ ನ್ಯಾಯಾಂಗ ಬಂಧನದಲ್ಲಿದ್ದ ಈತ ಜಾಮೀನು ಪಡೆದು ಹೊರಬಂದಿದ್ದ. ನಂತರ ಮತ್ತೆ ಎಟಿಎಂಗಳಲ್ಲೇ ಠಳಾಯಿಸಿ ವಂಚಿಸುವ ದಂಧೆಗೆ ಮುಂದಾಗಿ ಸರ್ಕಾರಿ ಮುದ್ರಣಾಲಯ ಮುಂದಿರುವ ಎಸ್ಬಿಐ ಎಟಿಎಂನಲ್ಲಿ ವಂಚನೆಗೆ ಸಂಚು ರೂಪಿಸಿ ಕಾಯುತ್ತಿದ್ದಾಗ ಜು.29ರ ಬೆ.9ಕ್ಕೆ ಪೊಲೀಸರು ಬಂಧಿಸಿದ್ದಾರೆ.
2012ರಲ್ಲೇ ಕಳವು ಮಾಡಿದ್ದ: ಲಕ್ಷ್ಮಣರಾವ ಕಟ್ಟೀಮನಿ ಎಂಬವರು 2012ರ ಅ.27ರಂದು ವಿದ್ಯಾನಗರ ಎಟಿಎಂನಲ್ಲಿ ಹಣ ಪಡೆಯಲು ಹೋದಾಗ ಅವರಿಗೆ ಎಟಿಎಂಗೆ ಆದೇಶ ನೀಡುವಲ್ಲಿ ನೆರವಾಗಿದ್ದಾನೆ. ಅದೇ ಖುಷಿಯಲ್ಲಿ ಇವರು ಮನೆಗೆ ವಾಪಸ್ಸಾಗಿದ್ದಾರೆ. ವಾರದ ನಂತರ ಬ್ಯಾಂಕಿಗೆ ಹೋಗಿ ಪಾಸ್ಬುಕ್ ಎಂಟ್ರಿ ಮಾಡಿಸಿದರೆ ಅದರಲ್ಲಿದ್ದ 92,600 ಡ್ರಾ ಮಾಡಲ್ಪಟ್ಟಿದೆ. ಗಾಬರಿಗೊಂಡು ಮ್ಯಾನೇಜರ್ಗೆ ವಿಚಾರಿಸಿದಾಗ, ಕ್ರೆಡಿಟ್ ಕಾರ್ಡ್ ತಪಾಸಣೆ ಮಾಡಿದ್ದಾರೆ. ಆಗ ಪಾಸ್ವರ್ಡ್ ಬದಲಾಗಿದ್ದನ್ನು ಖಾತ್ರಿ ಪಡಿಸಿದ್ದಾರೆ. ತಕ್ಷಣವೇ ಸ್ಟೇಷನ್ ಬಜಾರ್ ಠಾಣೆಗೆ ಲಕ್ಷ್ಮಣರಾವ ಕಟ್ಟೀಮನಿ ದೂರು ಸಲ್ಲಿಸಿದ್ದಾರೆ. ಕಳೆದೊಂದು ವರ್ಷದ ಹಿಂದೆಯೇ ನಾಥೂರಾಮ ಇಂತಹ ಕಳವು, ವಂಚನೆ ಮಾಡಿದ್ದರೂ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ. ಆದರೀಗ ಪೊಲೀಸರ ವಿಚಾರಣೆಯಲ್ಲಿ ಕಟ್ಟೀಮನಿಯವರ ಖಾತೆಯ ಹಣವನ್ನು ತಾನೇ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕಟ್ಟೀಮನಿಯವರಿಗೆ ನೀಡಿರುವ ಎಟಿಎಂ ಕಾರ್ಡ್ ಜಗನ್ನಾಥ ಹೂಗಾರ ಅವರದ್ದು. ಆ ಖಾತೆಯಿಂದಲೂ 13,100 ಲಪಟಾಯಿಸಿದ್ದಾನೆ. ನಾಥೂರಾಮ ಅವರ ಹೇಳಿಕೆಯನ್ನಾಧರಿಸಿ ಪೊಲೀಸರು ಮನೆ ತಪಾಸಣೆ ಮಾಡಿದ್ದು ಅಲ್ಲಿಂದ 71,400 ನಗದು ಜಪ್ತಿ ಮಾಡಲಾಗಿದೆ ಎಂದು ಡಿವೈಎಸ್ಪಿ ಬೇವಿನಮರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಜೆ.ಎಚ್. ಇನಾಮದಾರ್, ಎಂಎನ್ ಮುರಳಿ, ಮಲ್ಲಿಕಾರ್ಜುನ ಇಕ್ಕಳಕಿ, ಮತ್ತು ಸಿಬ್ಬಂದಿ ಡಿವೈಎಸ್ಪಿ ಬೇವಿನಮರದ ಉದಯಕುಮಾರ್ ನೇತೃತ್ವದಲ್ಲಿ ಎಸ್ಪಿ ಅಮೀತ್ ಸಿಂಗ್ ಹಾಗೂ ಎಎಸ್ಪಿ ಕಾಶೀನಾಥರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ವಂಚಕನ ಬಂಧಿಸುವಲ್ಲಿ ಯಶ ಕಂಡಿದ್ದಾರೆ.
ಹಲಕಟ್ಟಾ ಸರ್ಕಾರಿ ಶಾಲೆ ದೈಹಿಕ ಶಿಕ್ಷಕ
ಎಟಿಎಂ ವಂಚನೆಯ 2 ಪ್ರಕರಣಗಳಲ್ಲಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿರುವ ಆರೋಪಿ ನಾಥೂರಾಮ ಚವ್ಹಾಣ್(40) ಚಿತ್ತಾಪುರ ತಾಲೂಕಿನ ಹಲಕಟ್ಟಾ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ. ಶಿಸ್ತಾಗಿ ಡ್ರೆಸ್ ಮಾಡಿಕೊಂಡು ಎಟಿಎಂಗಳ ಬಳಿ ನಿಲ್ಲುವುದು, ಯಾರಾದರೂ ತೊಂದರೆ ಎದುರಿಸಿದರೆ ತಕ್ಷಣ ನೆರವಿಗೆ ಧಾವಿಸಿ ಅವರ ಸಿಕ್ರೆಟ್ ಕೋಡ್, ಕಾರ್ಡ್ ಎರಡನ್ನೂ ಯಾಮಾರಿಸಿ ಹಣ ಲಪಟಾಯಿಸುವುದನ್ನೇ ಕಾಯಕ ಮಾಡಿಕೊಂಡಿದ್ದ.
ಶಿಕ್ಷಣ ಇಲಾಖೆ ಕ್ಯಾರೆ ಎಂದಿಲ್ಲ: ಡಿವೈಎಸ್ಪಿ
ಇವರು ವಂಚನೆ ಪ್ರಕರಣದಲ್ಲಿ ದೈಹಿಕ ಶಿಕ್ಷಕ ನಾಥೂರಾಮ ಪೊಲೀಸ್ ಬಂಧಿ ಎಂದು ಇಲಾಖೆ ಡಿಡಿಪಿಐ ಕಚೇರಿಗೆ ತಿಳಿಸಿ ಪತ್ರ ಬರೆದಿದೆ. ಇಂದಿಗೂ ಈತನ ವಿರುದ್ಧ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಂಗ ಬಂಧನದಲ್ಲಿದ್ದಾಗ ಜಾಮೀನು ತಂದು ಹೊರಗೆ ಬಂದಿದ್ದ. ತನ್ನ ವೈಯಕ್ತಿಕ ದುಶ್ಚಟಗಳಿಗೆ ಹಣ ಹೊಂದಿಸಲು ಶಿಕ್ಷಕನಾಗಿದ್ದರೂ ಇಂತಹ ಮೋಸದ ದಂಧೆಗೆ ಇಳಿದಿದ್ದ ಎಂದು ವಿಚಾರಣೆಯಲ್ಲಿ ಹೇಳಿದ್ದಾನೆ.
ಉದಯಕುಮಾರ ಬೇವಿನಮರದ
ಡಿವೈಎಸ್ಪಿ ಎ ವಿಭಾಗ