ಹಿಂದುಳಿದ ನೆಲಕ್ಕೆ ರಾಷ್ಟ್ರೀಯ ಹೆದ್ದಾರಿ ನಂಟು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.29
ರಾಷ್ಟ್ರೀಯ ಹೆದ್ದಾರಿಗಳಿಂದಲೂ ವಂಚಿತವಾಗಿದ್ದ ಹೈ-ಕ ಜಿಲ್ಲೆಗಳಿಗೆ ಇದೀಗ ಹೊಸದಾಗಿ ಘೋಷಿಸಲಾಗಿರುವ ಗುಲ್ಬರ್ಗ- ರಾಯಚೂರು ಶಕ್ತಿನಗರದ ಬಳಿಯ ಕೃಷ್ಣಾ ಸೇತುವೆವರೆಗಿನ ರಾಷ್ಟ್ರೀಯ ಹೆದ್ದಾರಿ- 150 ಜಾಲದೊಂದಿಗೆ ಹಿಂದುಳಿದ ನೆಲದ ನಂಟು ಬೆಸೆಯಲಿದೆ.
ಈ ಹೊಸ ರಾಷ್ಟ್ರೀಯ ಹೆದ್ದಾರಿ 150, ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ (ಹಳೆಯ ರಾಹೆ 218) ಗುಲ್ಬರ್ಗ ವರ್ತುಲ ರಸ್ತೆಯಲ್ಲಿರುವ ಶಹಾಬಾದ್ ಕ್ರಾಸ್ ಬಳಿ ಆರಂಭಗೊಳ್ಳುತ್ತದೆ. ಈ ಹೆದ್ದಾರಿ ಹಾಗೇ ಶಹಾಬಾದ್, ವಾಡಿ, ನಾಲವಾರ, ಯರಗೋಳ, ಯಾದಗಿರಿ, ರಾಮಸಮುದ್ರ, ಬಳಿಚಕ್ರ, ಸೈದಾಪುರ, ಆಂಧ್ರ ಗಡಿಯಲ್ಲಿರುವ ಕಡೆಚೂರ್ ಮುಂತಾದ ಪ್ರಮುಖ ಪಟ್ಟಣಗಳ ಮೂಲಕ ರಾಯಚೂರಿನ ಕೃಷ್ಣಾ ಸೇತುವೆ ಬಳಿ ಅಂತ್ಯಗೊಳ್ಳುತ್ತದೆ. ಹೊಸ ರಾಷ್ಟ್ರೀಯ ಹೆದ್ದಾರಿ 150 ಕೃಷ್ಣಾ ಸೇತುವೆಯ ಬಳಿಯಿಂದಲೇ ಸಾಗಿ ಹೋಗುವ ರಾಹೆ 167 ರೊಂದಿಗೆ ಸಂಪರ್ಕ ಸಾಧಿಸುತ್ತದೆ.
ದ್ವಿಪಥ ರಸ್ತೆಯನ್ನೇ ಪರಿವರ್ತನೆ: ಸದ್ಯಕ್ಕೆ ಈ ರಸ್ತೆ ಗುಲ್ಬರ್ಗದಿಂದ ವಾಡಿವರೆಗೆ ಏಕಪಥ ರಸ್ತೆಯಾಗಿದೆ. ವಾಡಿಯಿಂದ ಯಾದಗಿರಿ ಮತ್ತು ಆಂಧ್ರ ಗಡಿಯಲ್ಲಿರುವ ಕಡೇಚೂರ್ವರೆಗಿನ ರಸ್ತೆ ಭಾಗವು ದ್ವಿಪಥ ರಸ್ತೆಯಾಗಿದೆ. ಈ ರಸ್ತೆಯನ್ನೇ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾಮಗಾರಿಗೆ ಗುಲ್ಬರ್ಗದಲ್ಲಿ ಜುಲೈ 30ರಂದು ಮಂಗಳವಾರ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಹಾಗೂ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
120 ಕೋಟಿ ಅನುದಾನ: ರಾಹೆ 150 ಕರ್ನಾಟಕ ರಾಜ್ಯದಲ್ಲಿ 125 ಕಿಮೀ ಉದ್ದ ಸಾಗಲಿದೆ. ಈವರೆಗೂ ಹೈ- ಕ ಭಾಗದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಯಾವುದೇ ರಾಹೆ ಜಾಲದಡಿಯಲ್ಲಿ ಸಂಪರ್ಕ ಸಾಧಿಸಿರಲಿಲ್ಲ. ಆದರೆ ಎನ್ಎಚ್ 150 ಇದೀಗ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೂ ಹೆದ್ದಾರಿಯೊಂದಿಗೆ ಹೊಸ ನಂಟು ಕಲ್ಪಿಸುತ್ತಿರುವುದು ವಿಶೇಷ. ಈ ರಸ್ತೆಗೆ ಭೂ ಸಾರಿಗೆ ಸಚಿವಾಲಯ 120 ಕೋಟಿ ಅನುದಾನ ಮೀಸಲಿಟ್ಟಿದೆ.
ಆರ್ಥಿಕಾಭಿವೃದ್ಧಿಗೆ ವರವಾಗಲಿ: ಇದಕ್ಕೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ನಿರಂತರ ಪ್ರಯತ್ನ ಕಾರಣ. ರಾಷ್ಟ್ರೀಯ ಹೆದ್ದಾರಿ- 150 ಗುಲ್ಬರ್ಗ, ರಾಯಚೂರು ಹಾಗೂ ಯಾದಗಿರಿಯ ಮೂಲಕ ಸಾಗಬೇಕು. ಈ ಭಾಗದ ಆರ್ಥಿಕಾಭಿವೃದ್ಧಿಗೂ ಹೆದ್ದಾರಿಗಳು ವರವಾಗಬೇಕೆಂಬ ಅವರ ಚಿಂತನೆಯ ಫಲವೇ ಇಂದು ರಾಹೆ 150 ಕಾಮಗಾರಿಗೆ ಚಾಲನೆ ದೊರಕುತ್ತಿದೆ.
ಈ ಹೆದ್ದಾರಿ ಹಿಂದುಳಿದ ಜಿಲ್ಲೆಗಳ ಮೂಲಕ ಸಾಗುತ್ತಿರುವುದರಿಂದ ಹೊಸ ಶಕೆ ಆರಂಭವಾಗಲಿದೆ. ಆರ್ಥಿಕಾಭಿವೃದ್ಧಿ ಯೋಜನೆಗಳು ಜಾರಿಗೊಳ್ಳುತ್ತವೆ. ಜೊತೆಗೇ Þ ರಸ್ತೆಗುಂಟ ಸಾಗುವ ಕೆಲಸ ಕಾರ್ಯಗಳು, ಅನೇಕ ಚಟುವಟಿಕೆಗಳಿಗೂ ಬರವಿರುವುದಿಲ್ಲ. ಹೀಗೆ ಹೈ-ಕ ನೆಲದ ಆರ್ಥಿಕಾಭಿವೃದ್ಧಿಗೂ ಕಾರಣವಾಗಲಿದೆ.
ರಾಜಧಾನಿ ಇನ್ನೂ ಹತ್ತಿರ: ಹೆದ್ದಾರಿ ರಸ್ತೆ ನಿರ್ಮಾಣಗೊಂಡಲ್ಲಿ ಹೈ-ಕ ಜಿಲ್ಲೆಗಳ ಜನತೆಗೆ ರಸ್ತೆ ಮೂಲಕ ರಾಜಧಾನಿ ಬೆಂಗಳೂರು ಇನ್ನೂ ಹತ್ತಿರವಾಗಲಿದೆ. ಈಗಿನ ಸುತ್ತುಬಳಸಿ ಸಾಗುವ ದಾರಿಯನ್ನು ಬಿಟ್ಟು ಹೊಸ ಹೆದ್ದಾರಿಗುಂಟ ಪ್ರಯಾಣ ಸುಖಕರವಾಗಲಿದೆ. ಗುಲ್ಬರ್ಗದ ಪಂಡಿತ ರಂಗ ಮಂದಿರದಲ್ಲಿ ಬೆ.11 ಗಂಟೆಗೆ ರಾಹೆ 150ರ ಕಾಮಗಾರಿಗೆ ಅಡಿಗಲ್ಲು ಇಡುವ ಕಾರ್ಯಕ್ರಮ ಆಯೋಜಿಸಲಾಗಿದೆ.