ಇಂದು ಫೋನ್ ಇನ್ ಕಾರ್ಯಕ್ರಮ
ಗುಲ್ಬರ್ಗ: ಗುಲ್ಬರ್ಗ ದೂರದರ್ಶನ ಕೇಂದ್ರವು ರೈತರಿಗೆ ಜು.31 ರಂದು ಸಂಜೆ 5.30 ರಿಂದ 6ರವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ. ಗುಲ್ಬರ್ಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಳತ್ಕರ್ ಮತ್ತು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಬೇವಣಗಿ ಭೂ ಚೇತನ ಯೋಜನೆ ಕುರಿತು ಮಾಹಿತಿ ನೀಡಲಿದ್ದಾರೆ. ಕೆ.ಆರ್. ಶ್ರೀನಿವಾಸ ಕಾರ್ಯಕ್ರಮ ನಿರ್ಮಾಣ ಮಾಡಲಿದ್ದಾರೆ. 220491, 220492ಕ್ಕೆ ಸಂಪರ್ಕಿಸಿ ರೈತರು ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಇಂದು ಕಾರ್ಯಾಗಾರ
ಗುಲ್ಬರ್ಗ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿ ಹಾಲನ್ನು ನೀಡುವ ಯೋಜನೆ ಆ.1ರಿಂದ ಅನುಷ್ಠಾನಗೊಳಿಸಲಾಗುತ್ತಿರುವ ಸಂಬಂಧವಾಗಿ ಜು. 31ರಂದು ತಾಲೂಕು ಹಂತದಲ್ಲಿ ಮುಖ್ಯ ಶಿಕ್ಷಕರುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕೆಎಂಎಫ್ ಸಂಸ್ಥೆಯ ಮೂಲಕ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ನೌಕರರ ಸಂಘಕ್ಕೆ ಆಯ್ಕೆ
ಜೇವರ್ಗಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಡಿ.ಬಿ. ಪಾಟೀಲ್ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ನೌಕರರ ರಾಜ್ಯ ಪರಿಷತ್ ಸದಸ್ಯರಾಗಿ ವಿರುಪಾಕ್ಷಿ ಹಿರೇಗೌಡ, ಖಜಾಂಚಿಯಾಗಿ ರಾಜಶೇಖರ ಧನ್ನರಡ್ಡಿ ಅವಿರೋಧವಾಗಿ ಆಯ್ಕೆಯಾದರು.