ಮೊಟ್ಟೆ ಇಡೋ ಕೋಳಿ ಕತ್ತು ಕುಯ್ಯಬ್ಯಾಡ್ರಿ,ಮೊಟ್ಟೆನಾ ರುಚಿಗೆ ತಕ್ಕಂತೆ ಬಳಸ್ಕೋಳ್ರಿ...
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.30
1. ಅಫಜಲ್ಪುರದಲ್ಲಿ ಖರ್ಗೆ ಮಾತಿನ ಚಾವಟಿ
ಕೋಳಿ ಚೆಂದಾಗಿ ತತ್ತಿ ಇಡ್ಲಿಕತ್ತದ, ಅದರ ತತ್ತಿ ಬೇಕಾದ್ರ ಒಬ್ರು ಆಮ್ಲೇಟ್ ಮಾಡಿ, ಮತ್ತೊಬ್ರು ಕುದಿಸಿದ ತತ್ತಿ ರೂಪದಲ್ಲಿ, ಮಗದೊಬ್ರು ಹಾಗೇ ಕಚ್ಚಾ ತತ್ತಿಯನ್ನೇ ತಿನ್ರಿ... ಆದ್ರ ತತ್ತಿ ಇಟಕೊಂತ ಹೊಂಟ ಕೋಳೀನ ಹಿಡ್ದು ಕತ್ತು ಕುಯ್ಯಬ್ಯಾಡ್ರಿ..
2. ಗುಲ್ಬರ್ಗದಲ್ಲಿ ಖರ್ಗೆ ಮೊನಚು ಮಾತು
ಅರೆ ಇಲ್ಲಿಗೆ ಬಂದಾಗ್ಲೇ ತಮ್ಮದೊಂದು ಬೇಡಿಕೆ ಹೇಳಿ ಬಿಡ್ತಾರ ಧರ್ಮಸಿಂಗ್ ಸಾಹೇಬ್ರು, ಅಲ್ಲಿಗೆ(ಬೀದರ್) ಕರಕೊಂಡು ಹೋಗಿ ತಮ್ಮ ಕೆಲ್ಸ ಹೇಳೋರಲ್ಲ... ತಮ್ಮ ಕೆಲ್ಸ ಮಾಡ್ಕೊಂಡು ಬಿಡ್ತಾರ್ರಿ...
3. ನಾನಂತೂ ಫೋನ್ ಮಾಡೋನಲ್ಲ ಬಿಡ್ರಿ
ಆಸ್ಕರ್ಜಿಗೆ ಧರಂಸಿಂಗ್ ಸಾಹೇಬ್ರು ವಾರಕ್ಕೊಮ್ಮ ಫೋನ್ ಮಾಡ್ತಾರಂತ್ರಿ, ನಾನಂತೂ 2 ವಾರವಲ್ಲ, ಸುಮ್ನೆ ಫೋನ್ ಮಾಡೋನಲ್ಲ, ಕೆಲ್ಸ ಇದ್ದಾಗ ಬೆನ್ನ ಬಿದ್ದು ಫೋನ್ ಮಾಡಿ ಮಾತನಾಡಿ ಅದು ಕೈಗೂಡುವವರೆಗೂ ಗಂಟ ಬೀಳ್ತೀನಿ. ನಂತ್ರ ವಿನಾಕಾರಣ ಅವರಿಗೆ ಯಾಕ್ ಬೆನ್ನ ತಿಕ್ಕೋದು ವಾರಕ್ಕೊಮ್ಮ ಫೋನ್ ಮಾಡೋವ್ರ ಬೇಡಿಕೆಯೊಳ್ಗ ಫೋನ್ ಮಾಡದ ನಮ್ಮಂತಹ ಮಂದಿ ಬೇಡಿಕೆ ಮರಿತೀರಿ ಮತ್ತ(ಆಸ್ಕರ್ ಕುರಿತು)!
ಗುಲ್ಬರ್ಗದಲ್ಲಿ ಮಂಗಳವಾರ ನಡೆದ ರಾಹೆ 150ರ ಶಿಲಾನ್ಯಾಸ, ಅಫಜಲ್ಪುರದಲ್ಲಿ ನಡೆದ ಚೌಡಾಪುರ- ಕರ್ಜಗಿ ಅಂತಾರಾಜ್ಯ ಸಂಪರ್ಕ ರಸ್ತೆ ಅಡಿಗಲ್ಲು ಸಮಾರಂಭಗಳಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದ್ದ ಜನರ ಮುಂದೆಯೇ ತಮ್ಮ ಮೊನಚು ಮಾತುಗಳಿಂದ, ನಗೆಚಟಾಕಿಗಳಿಂದ ಸಭಿಕರನ್ನು ಆಕರ್ಷಿಸಿದರು.
ಮಾತಿನಲ್ಲೇ ಮಾಲೀಕಯ್ಯಗೆ ತಿವಿದರು: ಖರ್ಗೆಯವರು ಕೋಳಿಯನ್ನ ಉದಾಹರಣೆಯಾಗಿಟ್ಟುಕೊಂಡು ಅಫಜಲ್ಪುರದಲ್ಲಿ ಹೇಳಿದ ಕೋಳಿ- ತತ್ತಿ- ಕತ್ತು ಕುಯ್ಯುವ ಚಟದವರ ಕಥೆ ಸೇರಿದ್ದ ಗ್ರಾಮೀಣ ಜನರಿಗೆ ತುಂಬ ಪಸಂದ್ ಆಯ್ತು. ವೇದಿಕೆಯಲ್ಲಿ ಮಾಲೀಕಯ್ಯನವರಿಗೆ ಮಕ್ಬುಲ್ ಪಟೇಲ್ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿತ್ತಿದ್ದುದನ್ನು ಮಾತನಾಡುತ್ತಲೇ ಗಮನಿಸಿದ ಖರ್ಗೆಯವರು ಅದೇ ಸಂದರ್ಭ ತಮ್ಮ ಮಾತಿನ ಚಾವಟಿ ಬೀಸಲು ಬಳಸಬೇರೇ...
ನಾನಿಲ್ಲಿ ಏನೆಲ್ಲಾ ಕೆಲ್ಸ ಮಾಡೀನಿ ಅಂತ ಹೇಳೋವಾಗ ಅದೇನ್ರಿ ಪಿಸುಮಾತು.. ಕೋಳಿ ತತ್ತಿ ಇಡ್ಲಿಕತ್ತದ, ಅದನ್ನ ನಿಮ್ಮ ರುಚಿಗೆ ತಕ್ಕಂಗ ಬಳಸ್ಕೋರಿ, ಕೋಳೀನ ಹಿಡ್ದು ಕತ್ತು ಕುಯ್ಯಬ್ಯಾಡ್ರಿ... ಎಂದಾಗ ಸೇರಿದ್ದ ಜನ ಚಪ್ಪಾಳೆಯೊಂದಿಗೆ ಜೋರಾಗಿ ನಕ್ಕರು. ಖರ್ಗೆ ಈ ಮಾತಿನ ಹಿಂದೆ ರಾಜಕೀಯ ಮರ್ಮವೇ ಅಡಗಿದ್ದನ್ನು ಅಲ್ಲಿನ ಜನ ಗುರುತಿಸಿದ್ದರು.
2009ರ ಲೋಕಸಭೆ ಚುನಾವಣೆಯಲ್ಲಿ ಕಣದಲ್ಲಿದ್ದ ಖರ್ಗೆ ಗೆಲವು ಸಾಧಿಸಿದರು. ಆದರೆ ಕಾಂಗ್ರೆಸ್ ಶಾಸಕರಿದ್ದರೂ ಅಫಜಲ್ಪುರ ಅಸೆಂಬ್ಲಿಯಲ್ಲಿ ಕಾಂಗ್ರೆಸ್ಗಿಂತ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದು ಖರ್ಗೆಗೆ ಘಾಸಿಗೊಳಿಸಿತ್ತು. ಕೋಳಿ- ತತ್ತಿ ಮಾತಿನ ಹಿಂದಿನ ಮರ್ಮ ಇದೇ, ಮಾಲೀಕಯ್ಯ ಸಾಹೇಬರಿಗೆ ಖರ್ಗೆಯವರು ಮಾತಿನಲ್ಲೇ ತಿವಿದರು ಎಂದು ಸೇರಿದ್ದವರೆಲ್ಲ ಆಡಿಕೊಂಡರು.
ಧರಂಸಿಂಗ್ ಧೋರಣೆಗೆ ವಗ್ಗರಣೆ: ಧರಂಸಿಂಗ್ ಅವರು ಬೀದರ್ ಕ್ಷೇತ್ರದ ಬೇಡಿಕೆಗಳನ್ನೆಲ್ಲ ಗುಲ್ಬರ್ಗದ ಸಮಾರಂಭದಲ್ಲಿ ಉಸುರಿದಾಗ ಅದರಿಂದ ಇರಿಸುಮುರುಸಾದರೂ ತೋರಿಸಿಕೊಡದಂತಿದ್ದ ಖರ್ಗೆಯವರು ಶಾಲದಲ್ಲಿ ಇಟ್ಟು... ಅಂತಾರಲ್ಲ ಆ ದಾಟಿಯಲ್ಲಿ ಹೇಳಿದ್ದೇನು ಗೊತ್ತೆ?
'ಧರಂಸಿಂಗ್ ಅವರು ಅಲ್ಲಿಗೆ(ಬೀದರ್) ಆಸ್ಕರ್ಜಿಗೆ ಕರಕೊಂಡು ಹೋಗದೆ ಇಲ್ಲೇ ನಮ್ಮ ಕಾರ್ಯಕ್ರಮದಲ್ಲೇ ತಮ್ಮದನ್ನು ಹೇಳ್ಯಾರ್ರಿ...' ಎಂದಾಗ ಜನ ನಕ್ಕರು.
ಇನ್ನು ಆಸ್ಕರ್ ಅವರೇ ಮಾತಿನಲ್ಲಿ ಧರಂಸಿಂಗ್ ವಾರಕ್ಕೊಮ್ಮೆಯಾದರೂ ಫೋನ್ನಲ್ಲಿ ಮಾತನಾಡುತ್ತಾರೆ ಎಂದಿದ್ದರು. ಇದನ್ನೇ ಪ್ರಸ್ತಾಪಿಸುತ್ತ ಖರ್ಗೆ ಮತ್ತೆ ಚಟಾಕಿ ಹಾರಿಸಿದರು. ನಾವಂತೂ ಫೋನ್ ಮಾಡೋರಲ್ಲ, ವಾರಕ್ಕೊಮ್ಮೆ ಮಾತಾಡೋರ ಬೇಡಿಕೆಯನ್ನೇ ನೆನಪಿಟ್ಟು ನಮ್ಮದನ್ನ ಮರತೀರಿ... ಎಂದು ಹೇಳಿದಾಗ ಆಸ್ಕರ್ ಸೇರಿದಂತೆ ವೇದಿಕೆಯ ಮೇಲಿದ್ದವರು, ಕೆಳಗಿದ್ದವರೆಲ್ಲರೂ ನಕ್ಕರೆನ್ನಿ.