ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಷ್ಟ್ರೀಯ ಹೆದ್ದಾರಿ 150ಕ್ಕೆ ಶಿಲಾನ್ಯಾಸ

Rashmi Kasaragodu
Updated On : 31 Jul 2013, 11:24 am

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಜು.30
ಇಲ್ಲಿನ ಪಂಡಿತ ರಂಗಮಂದಿರದಲ್ಲಿ ಮಂಗಳವಾರ ನಡೆದ ಗುಲ್ಬರ್ಗದ ಶಹಾಬಾದ್ ಕ್ರಾಸ್ನಿಂದ ಆರಂಭವಾಗಿ ಯಾದಗಿರಿ ಮೂಲಕ ಹಾದುಹೋಗಿ ರಾಯಚೂರಿನ ಕೃಷ್ಣಾ ಸೇತುವೆಯ ಬಳಿ ಹಗರಿ- ಜಡಚರ್ಲಾ ಹೊಸ ರಾಷ್ಟ್ರೀಯ ಹೆದ್ದಾರಿ 167ಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 150ಕ್ಕೆ ಶಿಲಾನ್ಯಾಸ ನೆರವೇರಿಸಲು ಬಂದ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಅವರು ಘೋಷಿತ ಹೆದ್ದಾರಿಗೆ ಹಸಿರು ಪತಾಕೆ ತೋರಿಸಿದ ಬೆನ್ನಲ್ಲೇ ನಾಯಕರಾದ ಧರಂ- ಖರ್ಗೆ ಇಬ್ಬರೂ ಹೊಸ ರಾಷ್ಟ್ರೀಯ ಹೆದ್ದಾರಿಗಳಿಗೆ ಬೇಡಿಕೆ ಮಂಡಿಸುವ ಮೂಲಕ ಭೂ ಸಾರಿಗೆ ಸಚಿವರ ಗಮನ ಸೆಳೆದರು.
ಹೆದ್ದಾರಿ ಶಿಲಾನ್ಯಾಸ ಸಮಾರಂಭದ ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಿಎಂ ಧರಂಸಿಂಗ್, ಸಿಖ್ ಧರ್ಮೀಯರ ಪವಿತ್ರ ತಾಣವಾಗಿರುವ ಬೀದರ್, ನಾಂದೇಡ್ ಸಂಪರ್ಕ ಬೆಸೆಯುವ ಜಹೀರಾಬಾದ್- ಬೀದರ್- ನಾಂದೇಡ್ ರಸ್ತೆಯನ್ನು ರಾಹೆ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು. ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು, ಗುಲ್ಬರ್ಗದಿಂದ ಆರಂಭವಾಗಿ ಅಫಜಲ್ಪುರ ಮೂಲಕ ಸೊಲ್ಲಾಪುರಕ್ಕೆ ಸಂಪರ್ಕ ಬೆಸೆಯುವಂತೆ ಹೊಸ ರಾಷ್ಟ್ರೀಯ ಹೆದ್ದಾರಿಯೊಂದನ್ನು ಹಿಂದುಳಿದ ಭಾಗಕ್ಕೆ ಕೊಡುಗೆಯಾಗಿ ನೀಡುವಂತೆ ಆಸ್ಕರ್ ಅವರನ್ನು ಆಗ್ರಹಿಸಿದರು.
ಘಟಾನುಘಟಿ ನಾಯಕರಿಬ್ಬರ ಹೊಸ ರಾಷ್ಟ್ರೀಯ ಹೆದ್ದಾರಿ ಪ್ರಸ್ತಾವನೆಯ ಬಗ್ಗೆ ತಮ್ಮ ಮಾತುಗಳಲ್ಲಿ ಸ್ಪಂದಿಸಿದ ಆಸ್ಕರ್ ಫರ್ನಾಂಡಿಸ್, ರಾಜ್ಯದಿಂದ ಬರುವ ಹೊಸ ಪ್ರಸ್ತಾವನೆಗಳನ್ನು ಆದ್ಯತೆ ಮೇಲೆ ಪರಿಗಣಿಸುವ ಭರವಸೆ ನೀಡಿದರು.
ಪಿಎಂ ಹೆಸರಿನಲ್ಲಿ ಹೊಸ ಹೆದ್ದಾರಿ ಬೇಡಿಕೆ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತುಗಳಲ್ಲಿ ಹೊಸ ಹೆದ್ದಾರಿ ಪ್ರಸ್ತಾವನೆಯನ್ನು ಮಾಡಿದ ಧರಂಸಿಂಗ್ ಅವರ ಬೇಡಿಕೆಯನ್ನು ಉದಾಹರಿಸುತ್ತ, ಪ್ರಧಾನಿ ಮನಮೋಹನ ಸಿಂಗ್ ಹೆಸರಿನೊಂದಿಗೆ ಹೊಸ ಹೆದ್ದಾರಿ ಬೇಡಿಕೆ ಧರಂಸಿಂಗ್ ಇಟ್ಟಿದ್ದಾರೆ. ತಾವಂತೂ ಹಿಂದುಳಿದ ನೆಲದ ಹೆಸರಲ್ಲಿ ಬೇಡಿಕೆ ಇಟ್ಟಿದ್ದಾಗಿ ಹೇಳುತ್ತ ಈ ಭಾಗದ ಸರ್ವತೋಮುಖ ಪ್ರಗತಿಗೆ ಹೆದ್ದಾರಿಗಳು ಬೇಕು, ತಕ್ಷಣ ಈ ಬೇಡಿಕೆಗಳಿಗೆ ಸ್ಪಂದಿಸಿ ಎಂದರು.
ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಮಾತನಾಡಿ, ರಾಜ್ಯ ಸರ್ಕಾರ 4,377 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸುವಂತಹ 23 ಪ್ರಸ್ತಾವನೆಗಳನ್ನು ಭೂ ಸಾರಿಗೆ ಸಚಿವಾಲಯದ ಮುಂದೆ ಇಟ್ಟಿದ್ದು, ಇವುಗಳನ್ನು ಪರಿಶೀಲಿಸಿ ಅನುಮೋದನೆ ಕೊಡುವಂತೆ ಕೋರಿದರು.
ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಮಾತನಾಡಿ, ಬೀದರ್ ಜಿಲ್ಲೆಯ ಹುಮನಾಬಾದ್ನಿಂದ ಜೇವರ್ಗಿವರೆಗಿನ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿದೆ. ಜೇವರ್ಗಿಯಿಂದ ಹಿರಿಯೂರುವರೆಗೂ ರಾಷ್ಟ್ರೀಯ ಹೆದ್ದಾರಿಯಾಗಿ ಇದನ್ನು ಮೇಲ್ದರ್ಜೆಗೇರಿಸುವ ಅಗತ್ಯವಿದೆ ಎಂದು ಆಗ್ರಹಿಸಿದರು.
ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಮಾತನಾಡಿದರು. ಮಾಜಿ ಸಂಸದ ಇಕ್ಬಾಲ್ ಸರಡಗಿ ಮಾತನಾಡಿದರು. ಭೂ ಸಾರಿಗೆ- ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಗಳಾದ ಜಯಪ್ರಕಾಶ, ಎಸ್.ಎಸ್. ನಹಾರ್, ಸಂಜಯ ಗಾರ್ಗಿ, ಮಾಥುರ್, ಮಧ್ಯ ರೇಲ್ವೆ ಪ್ರಧಾನ ವ್ಯವಸ್ಥಾಪಕ ಬಿ.ಪಿ. ಖರೆ, ಜಿಲ್ಲಾಡಳಿತದ ಅಧಿಕಾರಿಗಳು ಇದ್ದರು.
3 ವರ್ಷದಲ್ಲಿ ಕಾಮಗಾರಿ ಪೂರ್ಣ: ಹೈದ್ರಾಬಾದ್ ಕರ್ನಾಟಕದ ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಗುಲ್ಬರ್ಗ- ರಾಯಚೂರು ಶಕ್ತಿನಗರದ ಬಳಿಯ ಕೃಷ್ಣಾ ಸೇತುವೆವರೆಗಿನ ರಾಷ್ಟ್ರೀಯ ಹೆದ್ದಾರಿ 150 ಹೆದ್ದಾರಿ ಜಾಲದೊಂದಿಗೆ ಬೆಸೆಯಲಿದೆ.
ಈ ಹೊಸ ರಾಷ್ಟ್ರೀಯ ಹೆದ್ದಾರಿ 150, ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ(ಹಳೆಯ ರಾಹೆ- 218) ಗುಲ್ಬರ್ಗ ವರ್ತುಲ ರಸ್ತೆಯಲ್ಲಿರುವ ಶಹಾಬಾದ್ ಕ್ರಾಸ್ ಬಳಿ ಆರಂಭಗೊಳ್ಳುತ್ತದೆ. ಈ ಹೆದ್ದಾರಿ ಹಾಗೆಯೇ ಶಹಾಬಾದ್, ವಾಡಿ, ನಾಲವಾರ, ಯರಗೋಳ, ಯಾದಗಿರಿ, ರಾಮಸಮುದ್ರ, ಮೈಲಾರ, ಬಳಿಚಕ್ರ, ಸೈದಾಪುರ, ಆಂಧ್ರಪ್ರದೇಶದ ಗಡಿಯಲ್ಲಿರುವ ಕಡೆಚೂರು ಮೂಲಕ ರಾಯಚೂರಿನ ಕೃಷ್ಣಾ ಸೇತುವೆ ಬಳಿ ಅಂತ್ಯಗೊಳ್ಳುತ್ತದೆ. ಹೊಸ ರಾಹೆ 150 ಕೃಷ್ಣಾ ಸೇತುವೆಯ ಬಳಿಯಿಂದಲೇ ಸಾಗಿ ಹೋಗುವ ಹಗರಿ- ಜಡಚರ್ಲಾ ಹೊಸ ರಾಹೆ 167 ರೊಂದಿಗೆ ಸಂಪರ್ಕ ಸಾಧಿಸುತ್ತದೆ.
ಸದ್ಯಕ್ಕೆ ಈ ರಸ್ತೆ ಗುಲ್ಬರ್ಗದಿಂದ ವಾಡಿವರೆಗೆ ಏಕಪಥ ರಸ್ತೆಯಾಗಿದೆ, ವಾಡಿಯಿಂದ ಯಾದಗಿರಿ ಮತ್ತು ಆಂಧ್ರಪ್ರದೇಶ ಗಡಿಯಲ್ಲಿರುವ ಕಡೇಚೂರುವರೆಗಿನ ರಸ್ತೆ ಭಾಗವು ದ್ವಿಪಥ ರಸ್ತೆಯಾಗಿದೆ. ಈ ರಸ್ತೆಯನ್ನೇ ರಾಷ್ಟ್ರೀಯ ಹೆದ್ದಾರಿ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುತ್ತಿದೆ. 3 ತಿಂಗಳಲ್ಲಿ ಅಂದಾಜು ಪಟ್ಟಿ ಸಿದ್ಧಗೊಳಿಸಲಾಗುತ್ತದೆ. ಮಂದಿನ ಮೂರು ವರ್ಷಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.
120 ಕೋಟಿ ರು. ಅನುದಾನ: ರಾಹೆ 150 ಕರ್ನಾಟಕ ರಾಜ್ಯದಲ್ಲಿ 125 ಕಿ.ಮೀ. ಉದ್ದ ಸಾಗಲಿದೆ. ಈವರೆಗೂ ಹೈ-ಕ ಭಾಗದ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಯಾವುದೇ ರಾಹೆ ಜಾಲದಡಿಯಲ್ಲಿ ಸಂಪರ್ಕ ಸಾಧಿಸಿರಲಿಲ್ಲ. ಆದರೆ ಎನ್ಎಚ್ 150 ಇದೀಗ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೂ ಹೆದ್ದಾರಿಯೊಂದಿಗೆ ಹೊಸ ನಂಟು ಕಲ್ಪಿಸುತ್ತಿರುವುದು ವಿಶೇಷ. ಈ ರಸ್ತೆಗೆ ಭೂ ಸಾರಿಗೆ ಸಚಿವಾಲಯ 120 ಕೋಟಿ ಅನುದಾನ ಮೀಸಲಿಟ್ಟಿದೆ.
ಹೆದ್ದಾರಿ ರಸ್ತೆ ನಿರ್ಮಾಣಗೊಂಡಲ್ಲಿ ಹೈ-ಕ ಜಿಲ್ಲೆಗಳ ಜನತೆಗೆ ರಸ್ತೆ ಮೂಲಕ ರಾಜಧಾನಿ ಬೆಂಗಳೂರು ಇನ್ನೂ ಹತ್ತಿರವಾಗಲಿದೆ. ಈಗಿನ ಸುತ್ತುಬಳಸಿ ಸಾಗುವ ದಾರಿಯನ್ನು ಬಿಟ್ಟು ಹೊಸ ಹೆದ್ದಾರಿಗುಂಟ ಪ್ರಯಾಣ ಹಲವು ಅನುಕೂಲಗಳನ್ನು ತರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement