ಕರ್ತವ್ಯ ಲೋಪ, 4 ಸಿಬ್ಬಂದಿ ಅಮಾನತು
ಯಾದಗಿರಿ: ಭೂ ಕಂದಾಯ ವಸೂಲಿ ಮಾಡಿ ಸರ್ಕಾರಕ್ಕೆ ಜಮಾ ಮಾಡದೇ ತಮ್ಮ ಸ್ವಂತಕ್ಕೆ ಬಳಸಿಕೊಂಡು ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸುರಪುರ ತಾಲೂಕಿನ 4 ಜನ ಕಂದಾಯ ಇಲಾಖೆ ಸಿಬ್ಬಂದಿಯನ್ನು ಅಮಾನತುಗೊಳಿಸಿ ಡಿಸಿ ಎಫ್.ಆರ್. ಜಮಾದಾರ ಆದೇಶಿಸಿದ್ದಾರೆ.
ಸುರಪುರ ಕಂದಾಯ ನಿರೀಕ್ಷಕ ಅಣವೀರಪ್ಪ, ಖಾನಾಪುರ ಎಸ್.ಎಚ್. ಗ್ರಾಮಲೆಕ್ಕಿಗ ಸೋಮಶೇಖರ, ಕೂಡ್ಲಗಿ ಗ್ರಾಮ ಲೆಕ್ಕಿಗ ಪ್ರಸಕ್ತ ಹುಣಸಗಿ ಭೂಮಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಬಿರಾದಾರ, ಹುಣಸಗಿ ಗ್ರಾಮ ಲೆಕ್ಕಿಗರಾಗಿದ್ದ ಸದ್ಯ ವಜ್ಜಲದಲ್ಲಿ ಸೇವೆ ಸಲ್ಲಿಸುತ್ತಿದ್ದ ಎಸ್.ಎಂ. ಗವಿಸಿದ್ದಯ್ಯ ಅಮಾನತುಗೊಂಡ ಸಿಬ್ಬಂದಿ.
ಸರ್ಕಾರಿ ಕೆಲಸ ನಿರ್ವಹಿಸುವಲ್ಲಿ ನಿರ್ಲಕ್ಷ್ಯತನ ತೋರಿ ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಸುರಪುರ ತಹಸೀಲ್ದಾರರು ನೀಡಿದ ವರದಿಯನ್ನಾಧರಿಸಿ ಈ ಸಿಬ್ಬಂದಿಯನ್ನು ಸರ್ಕಾರಿ ಸೇವೆಯಿಂದ ಅಮಾನತಿನಲ್ಲಿರಿಸಿ ಜಿಲ್ಲಾಧಿಕಾರಿ ಜಮಾದಾರ್ ಆದೇಶ ಹೊರಡಿಸಿದ್ದಾರೆ.