ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಭೆ
ಗುಲ್ಬರ್ಗ: ನಗರದ ಗಿರಿಜಾದೇವಿ ಸಂಗೀತ ಮತ್ತು ನೃತ್ಯ ಶಾಲೆಯಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಭೆ ನಡೆಯಿತು.
2013-14ನೇ ಶೈಕ್ಷಣಿಕ ಸಾಲಿಗೆ ಮಕ್ಕಳ ಚಿತ್ರಕಲಾ ಸ್ಪರ್ಧೆ ಹಾಗೂ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಮತ್ತು ಜಿಲ್ಲಾ ಸಮ್ಮೇಳನ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಇಲಾಖೆಯ ಅಧಿಕಾರಿಗಳು ಶಿಕ್ಷಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸದೇ ವಿಳಂಬ ನೀತಿ ಅನುಸರಿಸಿ ನಿಧಾನ ದ್ರೋಹ ಎಸಗುತ್ತಿದ್ದಾರೆ ಎಂದು ಹಲವಾರು ಶಿಕ್ಷಕರು ಆಪಾದಿಸಿದರು. ಜಿಲ್ಲೆಗೊಂದು ಚಿತ್ರಕಲಾ ವಿಷಯ ಪರಿವೀಕ್ಷಕರ ಹುದ್ದೆ ಸೃಷ್ಟಿಸಿ ಬಡ್ತಿ ಮೂಲಕ ಹುದ್ದೆ ತುಂಬಬೇಕು. ಪ್ರತಿ ತಿಂಗಳು 3ನೇ ಶನಿವಾರ ಶೈಕ್ಷಣಿಕ ಸಮಾಲೋಚನೆಗಾಗಿ, ಜಿಲ್ಲಾ ಸಂಘದ ಸಭೆಗೆ ಹಾಜರಾಗಲು ಶಿಕ್ಷಕರಿಗೆ ಒಒಡಿ ಸೌಲಭ್ಯ ಒದಗಿಸಬೇಕು. ಚಿತ್ರಕಲಾ ಗ್ರೇಡ್ ಪರೀಕ್ಷೆಗಳ ಈಗಿನ ಶುಲ್ಕ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದ್ದು, ಅದನ್ನು ಕಡಿಮೆಗೊಳಿಸಬೇಕು. ಚಿತ್ರಕಲಾ ಶಿಕ್ಷಕರಿಗೂ ಪ್ರತಿ ವರ್ಷ ತರಬೇತಿ, ಕಾರ್ಯಾಗಾರ ಏರ್ಪಡಿಸುವುದು ಸೇರಿದಂತೆ ಇನ್ನಿತರರ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಅಧ್ಯಕ್ಷ ಶಿವಾನಂದ ಕೊಪ್ಪದ ಭರವಸೆ ನೀಡಿದರು.