ಮುಸುಕುಧಾರೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.31
ಈಗಾಗಲೇ 15 ದಿನಗಳಿಂದ ನಿರಂತರ ಸುರಿಯುವ ಮೂಲಕ ಜಿಲ್ಲೆಯ ಜನರಿಗೆ ಸತಾಯಿಸಿದ್ದ ಮಳೆ ಇದೀಗ ಬುಧವಾರ ಬೆಳಗ್ಗೆಯಿಂದ ಮತ್ತೆ ಸುರಿಯಲಾರಂಭಿಸಿದೆ. ದಿಢೀರನೇ ಮೋಡ ಕವಿದ ವಾತಾವರಣ ಗುಲ್ಬರ್ಗ ನಗರ ಹಾಗೂ ಜಿಲ್ಲೆಯಾದ್ಯಂತ ಕಂಡಿದೆ.
ಕಳೆದೊಂದು ವಾರದಿಂದ ಮಳೆ ವಿರಾಮ ನೀಡಿದ್ದರಿಂದ ಜಿಲ್ಲೆಯಲ್ಲಿ ರೈತರು ಕೃಷಿ ಕಾಯಕದಲ್ಲಿ ತೊಡಗಿದ್ದರು. ಆದರೀಗ ಮಳೆ ಮತ್ತೆ ಶುರುವಾಗಿದ್ದರಿಂದ ಕೃಷಿ ಕೆಲಸ, ಕಾರ್ಯಗಳೆಲ್ಲ ಸ್ಥಗಿತಗೊಳ್ಳುವ ಸಾಧ್ಯತೆಗಳೇ ಹೆಚ್ಚು.
ರೈತರು ಈಗಾಗಲೇ ಹೆಸರು, ಉದ್ದು, ಎಳ್ಳು ಬಿತ್ತಿದ್ದಾರೆ. ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದೀಗ ಮತ್ತೆ ಮಳೆ ಸುರಿಯುತ್ತಿರುವುದರಿಂದ ಕೃಷಿಗೆ ಇನ್ನೂ ಹೆಚ್ಚಿನ ತೊಂದರೆ ಸಂಭವಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂಬುದು ಹಿರಿಯ ರೈತರ ಅಭಿಮತ.
ಇದೀಗ ತೊಗರಿ ಬಿತ್ತನೆಗೆ ಸಿದ್ಧರಾಗುತ್ತಿದ್ದಾರೆ. ಆದರೆ ಮಳೆಯ ಕಾರಣ ಬಿತ್ತುವ ಕಾರ್ಯಕ್ಕೂ ಅಡಚಣೆ ಉಂಟಾಗುತ್ತಿದೆ. ಚಿತ್ತಾಪುರ, ಸೇಡಂ, ಚಿಂಚೋಳಿ ಸೇರಿದಂತೆ ಹಲವೆಡೆ ತೊಗರಿ ಬಿತ್ತನೆಗೂ ಸತತ ಮಳೆ ಹಿನ್ನಡೆ ಮಾಡಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.