ವಾಹನಗಳ ಅಕ್ರಮ ಸಂಚಾರ ತಡೆಯಿರಿ
ಯಾದಗಿರಿ: ಖಾಸಗಿ ವಾಹನಗಳ ಅಕ್ರಮ ಕಾರ್ಯಾಚರಣೆ ತಡೆಯಬೇಕೆಂದು ಎನ್ಇಕೆಆರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯೂನಿಯನ್ ಆಗ್ರಹಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಯೂನಿಯನ್ ಪ್ರಧಾನ ಕಾರ್ಯದರ್ಶಿ ರತ್ನಪ್ಪ ಜೈನ್, ಖಾಸಗಿ ಬಸ್ಗಳ ಮಾಲೀಕರು ಕ್ಯಾಜುವಲ್ ಕಾಂಟ್ರ್ಯಾಕ್ಟ್, ಟೂರಿಸ್ಟ್ ಪರ್ಮಿಟ್ ಪಡೆದು ಸ್ಟೇಜ್ ಕ್ಯಾರೇಜ್ ಆಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಟೆಂಪೋ, ಟ್ರ್ಯಾಕ್ಸ್, ಮ್ಯಾಕ್ಸಿಕ್ಯಾಬ್, ಟಂಟಂ ಮುಂತಾದ ವಾಹನಗಳು ಅಕ್ರಮ ಕಾರ್ಯಾಚರಣೆಗೊಳಿಸುತ್ತಿವೆ. ಮನಸೋಇಚ್ಛೆ ಹಣ ವಸೂಲಿ ಮಾಡಲಾಗುತ್ತಿದೆ. ಈ ರೀತಿಯ ಅಕ್ರಮ ಕಾರ್ಯಾಚರಣೆ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ. ಇದರಿಂದಾಗಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಪ್ರತಿ ದಿನ ಸುಮಾರು 2 ಕೋಟಿ ಆದಾಯ ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಹಗಲಿರುಳು ದುಡಿಯುತ್ತಿರುವ ನೌಕರರಿಗೆ ವೇತನ, ಹಬ್ಬದ ಮುಂಗಡ, ತುಟ್ಟಿ ಭತ್ಯೆ, ರಜೆ ನಗದೀಕರಣ ಮುಂತಾದ ಆರ್ಥಿಕ ಸೌಲಭ್ಯಗಳನ್ನು ಪಾವತಿಸಲು ವಿಳಂಬ ಆಗುತ್ತಿದೆ. ಇದೇ ರೀತಿ ಮುಂದುವರೆದರೆ ಸಾರಿಗೆ ಸಂಸ್ಥೆ ನೌಕರರು ಹಾಗೂ ಅವರ ಕುಟುಂಬ ಸದಸ್ಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಅಕ್ರಮವಾಗಿ ಕಾರ್ಯಾಚರಣೆ ನಡೆಸುವ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಬಸಣ್ಣಗೌಡ, ಶಿವಾನಂದ ಇತರರು ಆಗ್ರಹಿಸಿದ್ದಾರೆ.
'ಸಮಾಜ ತಿದ್ದುವಲ್ಲಿ ಸಾಹಿತ್ಯ ಪೂರಕ'
ಶಹಾಪುರ: ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಸಾಹಿತ್ಯವು ಪೂರಕವಾಗಿ ಕೆಲಸ ಮಾಡುತ್ತದೆ. ಕವಿಯಿಂದ ಕಾವ್ಯ ಹುಟ್ಟುವ ಹಾಗೆ ವಾಚಿಸುವ ಕಲೆಯು ಕರಗತವಾಗಬೇಕು ಅಂದಾಗ ಮಾತ್ರ ಕವಿತೆಯ ಸೌಂದರ್ಯ ಹೆಚ್ಚುತ್ತದೆ ಎಂದು ಯುವ ಸಾಹಿತಿ ಡಾ. ಗಾಳೆಪ್ಪ ಪೂಜಾರಿ ಕಿವಿಮಾತು ಹೇಳಿದರು. ವಿದ್ಯಾಜ್ಯೋತಿ ಪ್ರಕಾಶನದ ಆಶ್ರಯದಲ್ಲಿ ಅಶೋಕ ಚೌಧರಿಯವರ ಚುಟುಕು ಚಿಗುರು ಕೃತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಸಾಹಿತಿ ಚಂದ್ರಶೇಖರ ಆನೇಗುಂದಿ ಕಾರ್ಯಕ್ರಮ ಉದ್ಘಾಟಿಸಿದರು. ಅಶೋಕ ಚೌಧರಿ ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ ನಬಿಲಾಲ್ ಮಕಾಂದಾರ, ನಿಂಗಣ್ಣ ಗೌಡ ದೇಸಾಯಿ, ಡಾ. ವೆಂಕಣ್ಣಗೌಡ, ಶರಣಗೌಡ ಪಾಟೀಲ್, ಭೀಮರಾಯ ರಸ್ತಾಪೂರ, ವಿಠ್ಠಲ್ ಚವ್ಹಾಣ, ವೆಂಕಟೇಶ ಅನವಾರ, ರುದ್ರಪ್ಪ ತಳವಾರ, ಪಂಚಾಕ್ಷರಿ ಹಿರೇಮಠ, ಕವಿತಾ ಹಳ್ಳಿ, ವೀರಯ್ಯ, ಕಾಶಿಮಅಲಿ ಹುಜರತ್ತಿ, ಗಂಗಾಧರ ಹೊಟ್ಟಿ, ಸಿದ್ದಯ್ಯ ಮಠ, ಅನುಪಮ ಗುಗ್ಗರಿ, ಧರಮಣ್ಣ ಬಡಿಗೇರ ಇತರರು ಕವನ ವಾಚಿಸಿದರು. ಅಶ್ವಿನಿ ಜೋಶಿ ಪ್ರಾರ್ಥಿಸಿದರು, ನಿಂಗಣ್ಣಗೌಡ ದೇಸಾಯಿ ಸ್ವಾಗತಿಸಿದರು. ಕವಿತಾ ಹಳ್ಳಿ ನಿರೂಪಿಸಿದರು. ಪ್ರಶಾಂತ ಗುಗ್ಗರಿ ವಂದಿಸಿದರು.