ವೈನ್ ಶಾಪ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ದರೋಡೆ
ಗುಲ್ಬರ್ಗ: ಇಲ್ಲಿನ ಶ್ರೀನಿವಾಸ ಸರಡಗಿ ಕ್ರಾಸ್ನಸಮರ್ಥ ವೈನ್ಶಾಪ್ನ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಹಣ ದೋಚಿದ ಘಟನೆ ನಡೆದಿದೆ.
ಸಮರ್ಥ ವೈನ್ ಶಾಪ್ ಮಾಲೀಕರ ಬಳಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಜಾವೇದ್ ಎಂಬಾತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಇದರಿಂದ ಜಾವೇದ್ ಕುಪಿತಗೊಂಡು ಮಹಾಂಗರವಾಡಿಯ ಐವರು ಯುವಕರೊಂದಿಗೆ ಮದ್ಯ ಸೇವಿಸುವ ನೆಪದಲ್ಲಿ ವೈನ್ಶಾಪ್ಗೆ ಹೋಗಿ ವೈನ್ಶಾಪ್ ಮ್ಯಾನೇಜರ್ ಧೂಳಪ್ಪ ತಂದೆ ಸಾಯಿಬಣ್ಣ ಪೂಜಾರಿಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿ ಕೌಂಟರ್ನಲ್ಲಿದ್ದ ರು. 43 ಸಾವಿರ ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಮೇಲೆ ಅತ್ಯಾಚಾರ
ಗುಲ್ಬರ್ಗ: ಬಹಿರ್ದೆಸೆಗೆ ಹೋಗಿ ಮನೆಗೆ ಬರುತ್ತಿದ್ದ 20 ವರ್ಷದ ಯುವತಿಯೊಬ್ಬಳ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಘಟನೆ ಹಾಗರಗಾ ಗ್ರಾಮದಲ್ಲಿ ನಡೆದಿದೆ. ಹಾಗರಗಾ ಗ್ರಾಮದ ಯಶ್ವಂತ ಶಿವಶರಣಪ್ಪ ಬಪ್ಪನ್ (26) ಎಂಬಾತನೆ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತನ್ನ ಮೇಲೆ ನಡೆದ ಅತ್ಯಾಚಾರದ ವಿಷಯವನ್ನು ಯುವತಿ ಮನೆಯವರಿಗೆ ತಿಳಿಸಿದ್ದಾಳೆ. ಯುವತಿಯ ಸಹೋದರ ಈ ವಿಷಯ ಕೇಳಲು ಹೋದಾಗ ಯಶವಂತ ಬಪ್ಪನ್, ಆತನ ತಂದೆ ಶಿವಶರಣಪ್ಪ ಬಪ್ಪನ್, ಸಹೋದರರಾದ ಪ್ರವೀಣ ಮತ್ತು ಸೂರ್ಯಕಾಂತ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅತ್ಯಾಚಾರಕ್ಕೊಳಗಾಗಿರುವ ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾಗಿರುವ ಯುವತಿ ಸಹೋದರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ; 6 ಜನ ಬುಕ್ಕಿಗಳ ಬಂಧನ
ಗುಲ್ಬರ್ಗ: ತಾಲೂಕಿನ ಕಮಲಾಪುರದಲ್ಲಿ ಎರಡು ಕಡೆ ದಾಳಿ ನಡೆಸಿರುವ ಪೊಲೀಸರು 6 ಜನ ಮಟಕಾ ಬುಕ್ಕಿಗಳನ್ನು ಬಂಧಿಸಿ ರು. 1.34 ಲಕ್ಷ ಜಪ್ತಿ ಮಾಡಿದ್ದಾರೆ. ಭೀಮಾಶಂಕರ ಚಿಕ್ಕೊಗೋಳ ಎಂಬಾತನನ್ನು ಬಂಧಿಸಿ 96 ಸಾವಿರ ರು., ವೈಜನಾಥ ಬಿರಾದಾರ ಎಂಬಾತನನ್ನು ಬಂಧಿಸಿ 29 ಸಾವಿರ ರು., ಬಸವರಾಜ ಮುತ್ತಾಪುರ ಎಂಬಾತನನ್ನು ಬಂಧಿಸಿ 3 ಸಾವಿರ ರು., ವೈಜನಾಥ ಬಾಚಗೊಂಡ ಎಂಬಾತನನ್ನು ಬಂಧಿಸಿ ರು. 1500, ರೇವಣಸಿದ್ದ ಚಿಂದೆ ಎಂಬಾತನನ್ನು ಬಂಧಿಸಿ ರು. 3 ಸಾವಿರ, ಸಮದ್ ರಸೂಲಸಾಬ್ ಎಂಬಾತನನ್ನು ಬಂಧಿಸಿ 1700 ಜಪ್ತಿ ಮಾಡಿದ್ದಾರೆ.ಇನ್ನಿಬ್ಬರು ಮಟಕಾ ಬುಕ್ಕಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ಜಾಲ ಬೀಸಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.