30ರೊಳಗೆ ಮದ್ಯ ಮಾರಾಟದ ಪರವಾನಗಿ ನವೀಕರಿಸಿ: ಬಾಲಕೃಷ್ಣ
ಕನ್ನಡಪ್ರಭ ವಾರ್ತೆ , ಚಿಂಚೋಳಿ , ಜೂ.1
ತಾಲೂಕಿನಲ್ಲಿ ಮದ್ಯ ಮಾರಾಟ ಮಾಡುವ ಎಲ್ಲ ಸನ್ನದುದಾರರು ಜೂನ್ 30ರೊಳಗೆ ಮದ್ಯ ಮಾರಾಟದ ಪರವಾನಗಿಯನ್ನು ನವೀಕರಿಸಬೇಕು ಎಂದು ತಾಲೂಕು ಅಬಕಾರಿ ನಿರೀಕ್ಷಕ ಬಾಲಕೃಷ್ಣ ಮುದುಕಣ್ಣ ತಿಳಿಸಿದರು.
ಚಂದಾಪುರ ನಗರದ ಅಬಕಾರಿ ಇಲಾಖೆಯಲ್ಲಿ ಇತ್ತೀಚೆಗೆ ತಾಲೂಕು ಮದ್ಯ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲ 18 ಮದ್ಯ ಮಾರಾಟ ಅಂಗಡಿಗಳ ಮಾಲೀಕರು ತಮ್ಮ ಪರವಾನಗಿಯನ್ನು ಜೂನ್ 30ರೊಳಗೆ ಸರ್ಕಾರದ ಶುಲ್ಕವನ್ನು ಭರಿಸಿ ನವೀಕರಿಸಿಕೊಳ್ಳಬೇಕು ಜತೆಗೆ ಪಾನ್ಕಾರ್ಡ್, ಸರಿಯಾದ ವಿಳಾಸ, ವಾಣಿಜ್ಯ ತೆರಿಗೆ ಪಾವತಿಸಿದ ದಾಖಲೆ ಪತ್ರಗಳು, ಪಾಲುದಾರಿಕೆ ಪತ್ರ ಹಾಜರುಪಡಿಸಬೇಕು ಎಂದು ತಿಳಿಸಿದರು.
2012-13ನೇ ಸಾಲಿನಲ್ಲಿ ಮೇ ತಿಂಗಳಲ್ಲಿ 1,55,179 ಮದ್ಯದ ಪೆಟ್ಟಿಗೆಯನ್ನು ಮಾರಾಟ ಮಾಡುವ ಗುರಿಯನ್ನು ನೀಡಲಾಗಿತ್ತು. ಅದರಲ್ಲಿ 1,54,288 ಪೆಟ್ಟಿಗೆಯನ್ನು ಮಾರಾಟ ಮಾಡಿ ಸಾಧನೆ ಮಾಡಲಾಗಿದೆ. ಚಿಂಚೋಳಿ ವಾರ್ಷಿಕ ಗುರಿ 1,83,169 ಪೆಟ್ಟಿಗೆ ಮಾರಾಟ ಗುರಿ ಹೊಂದಿದ್ದು, ಮೇ ಅಂತ್ಯದವರೆಗೆ 2,47 ಕೋಟಿ ರು. ಆದಾಯ ಬಂದಿದೆ ಎಂದರು.