5ರಂದು ವೈದ್ಯಕೀಯ ಮೌಲ್ಯಾಂಕ ಶಿಬಿರ
ಕನ್ನಡಪ್ರಭ ವಾರ್ತೆ , ಚಿಂಚೋಳಿ , ಜೂ.1
ವಿಶೇಷ ಅಗತ್ಯವುಳ್ಳ ವಿಕಲಚೇತನ ಮಕ್ಕಳಿಗಾಗಿ ವೈದ್ಯಕೀಯ ಮೌಲ್ಯಾಂಕ ಶಿಬಿರವನ್ನು ಜೂನ್ 5ರಂದು ಪಟ್ಟಣದ ಚಂದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.
ತಹಸೀಲ್ದಾರ್ ಜಗನ್ನಾಥರೆಡ್ಡಿ ಧರ್ಮರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಈ ಶಿಬಿರ ನಡೆಸಲು ನಿರ್ಧರಿಸಲಾಯಿತು.
ತಾಲೂಕು ಸಮನ್ವಯಾಧಿಕಾರಿ ವೀರಣ್ಣ ಬೊಮ್ಮನಳ್ಳಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 974 ಬುದ್ಧಿಮಾಂದ್ಯ, ಶ್ರವಣದೋಷ, ಕಣ್ಣಿನ ತೊಂದರೆ ಮತ್ತು ಇನ್ನಿತರ ವಿಕಲಚೇತನ ಮಕ್ಕಳಿಗೆ ಉಚಿತವಾಗಿ ವೈದ್ಯಕೀಯ ಶಿಬಿರದಲ್ಲಿ ಮೌಲ್ಯಾಂಕ ನಡೆಸಲಾಗುವುದು ಎಂದರು.
ಆಯಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಕಲಚೇತನ ಮಕ್ಕಳಿಗೆ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ತಪಾಸಣೆ ನಡೆಸಿ ಅಗತ್ಯವಾದ ಸಲಕರಣೆಯನ್ನು ನೀಡಲಾಗುವುದು. ದೈಹಿಕ ತಜ್ಞ(ಅರ್ಥೋ) ವೈದ್ಯರು- 3 ಮತ್ತು ಮನೋತಜ್ಞ ವೈದ್ಯರು- 2 ಹಾಗೂ ವಾಕ್ ಶ್ರವಣ ತಜ್ಞ ವೈದರು- 2 ಮತ್ತು ಇತರ ವೈದ್ಯರು ಗುಲ್ಬರ್ಗ ಜಿಲ್ಲೆಯಿಂದ ಆಗಮಿಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.
ಬಿಇಒ ಎಚ್.ಎಸ್. ನಾಟೀಕಾರ್ ಮಾತನಾಡಿ, ವಿಕಲಚೇತನ ಮಕ್ಕಳ ಪಾಲಕರು, ಪೋಷಕರು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್ಜಿಒಗಳು ಇನ್ನಿತರ ಆಸಕ್ತ ಸಂಸ್ಥೆಗಳು ಶಿಬಿರಕ್ಕೆ ಹಾಜರಾಗಲು ಕೋರಿದರು. ತಾಪಂ ಇಒ ಜಗದೇವ ಬೈಗೊಂಡ, ಸಿಡಿಪಿಒ ಮತ್ತು ಆರೋಗ್ಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ರಾಧಾಕೃಷ್ಣ ಸ್ವಾಗತಿಸಿದರು. ವಿಜಯಕುಮಾರ ಸ್ವಾಮಿ ವಂದಿಸಿದರು.