ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಿಗದಿತ ಬೆಲೆಗೆ ಬೀಜ, ಗೊಬ್ಬರ ಪೂರೈಸಲು ಆಗ್ರಹ

Vishwanath S
Updated On : 2 Jun 2013, 12:37 pm

ಯಾದಗಿರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮು ಆರಂಭವಾಗಿದ್ದು, ಬಿತ್ತನೆಗೆ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಸಾಯನಿಕ ಗೊಬ್ಬರ ಮತ್ತು ಬೀಜಗಳನ್ನು ನಿಗದಿತ ಬೆಲೆಗೆ ಪೂರೈಸಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು. ಪ್ರತಿ ವರ್ಷ ರೈತರು ಗೊಬ್ಬರ ಮತ್ತು ಬೀಜಕ್ಕಾಗಿ ಸಾಲ ಮಾಡಿ ತರುವ ಪರಿಸ್ಥಿತಿ ಇದ್ದು, ಕಡಿಮೆ ಬೆಲೆಗೆ ಕೊಡಲು ಕ್ರಮ ಕೈಗೊಳ್ಳಬೇಕು. ಕೆಲವರು ಕಳಪೆ ಮಟ್ಟದ ಮತ್ತು ಅಕ್ರಮವಾಗಿ ಕಳ್ಳ ಸಂತೆಯಲ್ಲಿ ಗೊಬ್ಬರ ಮತ್ತು ಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂಥರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ರ ಕ್ರಮ ಕೈಗೊಳ್ಳಬೇಕು. ಅಗ್ರೋ ಏಜನ್ಸಿಗಳು ಗೊಬ್ಬರ ಮತ್ತು ಬೀಜವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ರೈತರಿಗೆ ಮೋಸ, ವಂಚನೆ ಮಾಡುತ್ತಿದ್ದಾರೆ. ಇಂತಹ ಏಜನ್ಸಿ ಅಂಗಡಿಗಳನ್ನು ಪತ್ತೆ ಹಚ್ಚಿ ಇವುಗಳ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘಟನೆ ಶಹಾಪುರ ತಾಲೂಕಾಧ್ಯಕ್ಷ ಗುರುರಾಜ ಎನ್. ಯಕ್ಷಿಂತಿ, ನಿಂಗರಾಜ ಗುಂಡನೂರ, ಪರಶುರಾಮ, ಸುಮಂತ ಮುಂದಿನಮನಿ, ಸಚಿನ, ಆನಂದರಡ್ಡಿ ಹೊನಸಾನಿ, ರವಿ ನಾಯ್ಕಲ್, ಪರಶುರಾಮ ಮೇಟಿ ಇದ್ದರು.

'ಟ್ರಾಫಿಕ್; ಸರ್ವರ ಸಹಕಾರ ಅಗತ್ಯ'
ಶಹಾಪುರ: ಪ್ರಸಕ್ತ ದಿನಗಳಲ್ಲಿ ಟ್ರಾಫಿಕ್ ವ್ಯವಸ್ಥೆ ಸರಿಪಡಿಸುವುದಕ್ಕಾಗಿ ಪೊಲೀಸ್ ಇಲಾಖೆ ಜೊತೆ ಸಾರ್ವಜನಿಕರ ಸಹಕಾರ ಹಾಗೂ ಜವಾಬ್ದಾರಿಯೂ ಬಹುಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ತಿಳಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ಸಮಸ್ಯೆ ಸುಧಾರಿಸುವ ಕುರಿತು ಚರ್ಚೆ ನಡೆಸಿದ ಅವರು, ಪಟ್ಟಣದಲ್ಲಿ ದಿನನಿತ್ಯ ವಿಪರೀತ ವಾಹನಗಳ ದಟ್ಟಣೆಯಾಗುತ್ತಿದೆ. ವಾಹನ ಸವಾರರಲ್ಲಿಯೂ ಜಾಗೃತಿ ಬರಬೇಕು. ರಸ್ತೆ ಅಗಲೀಕರಣ ಎಷ್ಟೇ ನಡೆದರೂ ಮತ್ತೆ ಕೆಲವೆಡೆ ರಸ್ತೆಯವರೆಗೂ ಅಂಗಡಿಗಳು ಬಂದಿವೆ. ಅನಧಿಕೃತ ಕಟ್ಟಡಗಳು ತೆರವು ಕಾರ್ಯಾಚರಣೆ ಕ್ರಮಬದ್ಧವಾಗಬೇಕು. ಕ್ರಾಸಿಂಗ್‌ಗಳ ಪಾಲನೆಯಾಗಬೇಕು, ಸಿಬಿ ಕಮಾನ್, ಬಸ್ ಡಿಪೋಟ್, ಹಳೆ ತಹಸೀಲ್ದಾರ್ ಕಚೇರಿ ಭಾಗಗಳಲ್ಲಿ ಟ್ರಾಫಿಕ್ ಕಂಟ್ರೋಲ್ ಆಗಬೇಕು. ಟಂಟಂಗಳ ನಿಲುಗಡೆಯು ಬೇರೆಡೆ ವ್ಯವಸ್ಥೆಯಾಗಬೇಕು. ಮುಖ್ಯರಸ್ತೆ ಬಸವೇಶ್ವರ ವೃತ್ತದಲ್ಲಿ ಚರಂಡಿಗಳ ಮೇಲೆ ಸ್ಲ್ಯಾಬ್ ಹಾಕುವುದು, ಡಬ್ಬಾ ಅಂಗಡಿಗಳ ತೆರವು, ಲೈಸನ್ಸ್ ಇಲ್ಲದೆ ವಾಹನ ನಡೆಸುವವರಿಗೆ ಕಾನೂನು ಕ್ರಮ, ಬೈಕ್ ಮೇಲೆ ಮೂವರ ಸಂಚಾರ ನಿಷೇಧ, ಬಿಡಾಡಿ ದನಗಳ ಹಾವಳಿ ತಪ್ಪಿಸುವಲ್ಲಿ ಪುರಸಭೆಗೆ ಜವಾಬ್ದಾರಿ ನೀಡುವುದು ಸೇರಿದಂತೆ ಹಲವು ಕಾರ್ಯ ಮಾಡುವುದರ ಮೂಲಕ ಸಾಧ್ಯವಾದಷ್ಟು ಟ್ರಾಫಿಕ್ ಸಮಸ್ಯೆ ನೀಗಿಸಲು ಸಾಧ್ಯವಾಗುವುದು ಎಂಬ ಅಭಿಪ್ರಾಯವನ್ನು ಪಡೆದರು. ಟ್ರಾಫಿಕ್ ಸಮಸ್ಯೆ ವಿಪರೀತವಾಗಿದ್ದು ಇದನ್ನು ಪರಿಹರಿಸುವತ್ತ ಸರ್ವರೂ ಪ್ರಯತ್ನಿಸೋಣ ಎಂದು ವಂಶಿಕೃಷ್ಣ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement