ಶಾಲೆ ಪ್ರಾರಂಭ ನೀರಸ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಜೂ.1
ಜಿಲ್ಲೆಯಲ್ಲಿ ಸಂತಸದಿಂದ ನಡೆಯಬೇಕಿದ್ದ ಶಾಲಾ ಪ್ರಾರಂಭೋತ್ಸವ ಸ್ಥಳೀಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ನಿರ್ಲಕ್ಷ್ಯತನದ ಧೋರಣೆ, ದೂರದೃಷ್ಟಿ ಕೊರತೆಯ ಚಿಂತನೆಗಳಿಂದಾಗಿ ನೀರಸವಾಗಿ ನಡೆಯುವಂತಾಯ್ತು.
2 ತಿಂಗಳ ಬೇಸಿಗೆ ರಜೆ ಮಜಾ ಅನುಭವಿಸಿ ಮಕ್ಕಳು ಶಾಲೆಗೆ ಮರಳುವಾಗ ಸರ್ಕಾರವೇ ಸಿಹಿ ಕೊಟ್ಟು ಮಕ್ಕಳಿಗೆ ಶಾಲೆಗೆ ಸ್ವಾಗತಿಸಿ ಎಂದು ಹೇಳಿತ್ತು. ಆದರೆ ಜಿಲ್ಲೆಯಲ್ಲಿ ಸಿಹಿ ಹಂಚುವ ಮಾತು ಒತ್ತಟ್ಟಿಗಿರಲಿ, ಸರಿಯಾಗಿ ವ್ಯವಸ್ಥೆಯೇ ಚುರುಕಾಗದೆ ಶಾಲೆಯ ಪ್ರಾರಂಭೋತ್ಸವ ನಡೆಯಿತು.
ಶಾಲಾ ಪ್ರಾರಂಭೋತ್ಸವದ ದಿನವನ್ನು ಸಮಾರಂಭದ ರೂಪದಲ್ಲಿ ಆಚರಿಸುವಂತೆ ಸರ್ಕಾರವೇ ಸೂಚಿಸಿತ್ತು. ಜಿಲ್ಲಾ ಹಂತದಲ್ಲಿ ಒಂದು ಶಾಲೆಯನ್ನು ಆಯ್ಕೆ ಮಾಡಿ ಈ ಸಮಾರಂಭ ಕಳೆಕಳೆಯಾಗಿಯೂ ಆಚರಿಸಬೇಕಾಗಿತ್ತು. ಆದರೆ ಡಿಡಿಪಿಐ ಸಾಹೇಬರು ಕೋರ್ಟ್ ಕಚೇರಿ ಕೆಲಸದಲ್ಲಿ ವಾರ ಕಾಲ ಮಗ್ನರಾದರೂ ಎಂದು ಹೇಳಿಕೊಂಡು ಆರಂಭೋತ್ಸವ ಕಳೆ ಇಲ್ಲದಂತೆ, ಕಾಟಾಚಾರದ ಸರ್ಕಾರಿ ಕಾರ್ಯಕ್ರಮವಾಗಿ ನಡೆದುಹೋಯ್ತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಸಾಹೇಬರು ಅದೆಷ್ಟು ಕೋರ್ಟ್ ಕೆಲಸದಲ್ಲಿ ಮಗ್ನರಾಗಿದ್ದರೂ ಎಂದರೆ ಕಳೆದ 3 ದಿನಗಳ ಕಾಲ ಜಿಲ್ಲಾ ಹಂತದಲ್ಲಿನ ಶಾಲಾ ಆರಂಭೋತ್ಸವದ ವಿಚಾರ ಹಾಗೂ ಜಿಲ್ಲೆಯ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಇತ್ಯಾದಿಗಳ ಬಗ್ಗೆ 'ಕನ್ನಡಪ್ರಭ' ಫೋನಾಯಿಸಿ ಮಾಹಿತಿ ಕೇಳಿದರೂ ಅದನ್ನೂ ಕೊಡಲಾಗದು ಎಂಬರ್ಥದಲ್ಲಿ ಮಾತನಾಡಿದರು.
ಮನವಿಗೆ ಸ್ಪಂದಿಸದ ಜಯರಾಂ: ಸತತ 3 ದಿನಗಳ ಕಾಲ ಫೋನ್ ಮಾಡಿದಾಗ 3ನೇ ದಿನ ಸಂಜೆ ಹೊತ್ತು ಕರೆ ಸ್ವೀಕರಿಸಿದ ಡಿಡಿಪಿಐ ಟಿ. ಜಯರಾಂ ಅವರು, ಖಾಸಗಿ ಶಿಕ್ಷಣ ಸಂಸ್ಥೆಗೆ ಸಂಬಂಧಪಟ್ಟಂತಹ ನ್ಯಾಯಾಂಗ ನಿಂದನೆ ಪ್ರಕರಣ ತಾವು ಎದುರಿಸುತ್ತಿರುವುದಾಗಿ ಹೇಳಿದರು. ಅಲ್ಲದೆ ಅದರ ಕಾರಣವೇ ತಾವು ತುಂಬ ಕಾರ್ಯ ಮಗ್ನ ಎಂದು ಹೇಳುತ್ತ ಶಾಲೆಗಳು, ಮಕ್ಕಳ ಕುರಿತಂತೆ ಪತ್ರಿಕೆ ಬಯಸಿದ ಯಾವುದೇ ಮಾಹಿತಿ ನೀಡಲಿಲ್ಲ.
ತಾವು ಅನ್ಯ ಕಾರ್ಯಗಳಲ್ಲಿ ಮಗ್ನರಾಗಿದ್ದರೆ ತಮ್ಮ ಕಚೇರಿಯ ಇತರೆ ಅಧಿಕಾರಿಗಳಿಗಾದರೂ ಮಾಹಿತಿಗೆ ಸೂಚಿಸಿ ಎಂಬ ಪತ್ರಿಕೆಯ ಮನವಿಗೂ ಸರಿಯಾಗಿ ಸ್ಪಂದಿಸದ ಜಯರಾಂ ಅವರು, ಈಗೆಲ್ಲ ಯಾರೂ ಮಾಹಿತಿ ನೀಡಲು ತಮ್ಮ ಕಚೇರಿಯಲ್ಲಿ ಇರೋದಿಲ್ಲ, ಲಭ್ಯವೂ ಇಲ್ಲ ಎಂದರು. ತಾವು ಕೋರ್ಟ್ ಕೆಲಸದಲ್ಲೇ ಬೀಸಿಯಾಗಿದ್ದಾಗಿ ಹೇಳುತ್ತ ಶಾಲೆಗಳ ಕುರಿತಾದ ಮಾಹಿತಿಗಿಂತ ತಮ್ಮ ಕಚೇರಿ ಕೆಲಸವೇ ಮೇಲೆಂದು ಹೇಳುವ ಪ್ರಯತ್ನ ಮಾಡಿದರೆ ಹೊರತು ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನೂ ನೀಡಲಿಲ್ಲ.
ಯಾವುದೇ ಜಾಥಾ- ಸಮಾರಂಭಗಳು ನಡೆಯಲಿಲ್ಲ: ಶಾಲಾ ಪ್ರಾರಂಭೋತ್ಸವದ ಸಂಬಂಧ ಜಿಲ್ಲಾ ಮಟ್ಟದಲ್ಲಿ ಸರ್ಕಾರದ ಸಮಾರಂಭಗಳು ಯಾವುದೂ ನಡೆಯಲಿಲ್ಲ. ಅಷ್ಟೇ ಯಾಕೆ ತಾಲೂಕು ಮಟ್ಟದಲ್ಲಿಯೂ ಶಾಲಾ ಪ್ರಾರಂಭೋತ್ಸವ ತನ್ನ ಎಂದಿನ ಆಕರ್ಷಣೆ ಕಳೆದುಕೊಂಡು ಕಳೆಗುಂದಿತ್ತು. ತಾಲೂಕು ಹಂತದಲ್ಲಿಯೂ ಸಮಾರಂಭಗಳು ಆಯೋಜಿಸಲಾಗಿರಲಿಲ್ಲ ಎಂದು ಪತ್ರಿಕೆಗೆ ಬಂದಿರುವ ಮಾಹಿತಿಗಳು ಬಹಿರಂಗಪಡಿಸಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ವ್ಯವಸ್ಥೆಯಲ್ಲಿನ ಈ ದೋಷದಿಂದಾಗಿ ಜಿಲ್ಲೆಯಾದ್ಯಂತ ಶಾಲೆಗಳು ಪುನಾರಂಭಗೊಂಡಿರುವ ಬಗ್ಗೆ ಜನತೆ ಗಮನಕ್ಕೆ ಬರದಂತಾಯ್ತು. ಹಳ್ಳಿಗಳಲ್ಲಂತೂ ಮಕ್ಕಳು ಇನ್ನೂ ರಜೆ ಇದೆ ಎಂಬಂತೆ ಶಾಲೆಗಳತ್ತ ಮುಖ ಮಾಡದ ನೋಟಗಳು ಕಂಡು ಬಂದವು.
ಶಿಕ್ಷಕರ ಕೊರತೆ ಆತಂಕ: ಜಿಲ್ಲೆಯಲ್ಲಿ 1,138 ಪ್ರಾಥಮಿಕ ಹಾಗೂ 1,596 ಹಿರಿಯ ಪ್ರಾಥಮಿಕ ಹಾಗೂ 696 ಪ್ರೌಢಶಾಲೆಗಳಿವೆ. ಈ ಶೈಕ್ಷಣಿಕ ವರ್ಷ ಆರಂಭವಾದರೂ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರ ಕಾಡುತ್ತಿದೆ.
ಪತ್ರಿಕೆಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಜಿಲ್ಲೆಯಲ್ಲಿ 1,112 ಪ್ರಾಥಮಿಕ ಹಾಗೂ 237 ಪ್ರೌಢಶಾಲಾ ಶಿಕ್ಷಕರ ಕೊರತೆ ಇದೆ. ಇಲ್ಲಿನ ಡಿಡಿಪಿಐ ಕಚೇರಿ ಈ ಬಗ್ಗೆ ಮಕ್ಕಳಿಗೆ ಅನುಕೂಲವಾಗುವಂತಹ ಕ್ರಮಗಳನ್ನು ಜರುಗಿಸುವಲ್ಲಿ ವಿಫಲವಾಗಿದೆ. ಏಕೆಂದರೆ ಶೈಕ್ಷಣಿಕ ವರ್ಷ ಆರಂಭವಾದರೂ ಡಿಡಿಪಿಐ ಕಚೇರಿಯಲ್ಲಿ ಖಾಲಿ ಶಿಕ್ಷಕರ ಸ್ಥಾನದಲ್ಲಿ ಅದೆಂತಹ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಯಾವುದೇ ಪ್ರಕ್ರಿಯೆಗಳು ಆರಂಭವಾಗಿಲ್ಲ.
ಪಠ್ಯ- ಸಮವಸ್ತ್ರ ಕೊರತೆ: ಜಿಲ್ಲೆಯಲ್ಲಿ ಪಠ್ಯ ಹಾಗೂ ಸಮವಸ್ತ್ರದ ಕೊರತೆಯೂ ಕಾಣಿಸಿಕೊಂಡಿದೆ. ಶಾಲೆ ಆರಂಭವಾದರೂ ಚಿಂಚೋಳಿಯಲ್ಲಿ ಪಠ್ಯ- ವಸ್ತ್ರಗಳ ಪೂರೈಕೆ ಸರಿಯಾಗಿ ಆಗಿಲ್ಲ. ಇದೇ ನೋಟ ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಕಂಡಿದೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಈ ವಿಚಾರದಲ್ಲಿಯೂ ಕ್ರಮ ಕೈಗೊಳ್ಳುವಲ್ಲಿ, ಮಕ್ಕಳಿಗೆ ಎಲ್ಲವನ್ನು ಸಮಯಕ್ಕೆ ಸರಿಯಾಗಿ ಒದಗಿಸುವಲ್ಲಿ ಮುಗ್ಗರಿಸಿದೆ. ಇದರಿಂದ ಹಳ್ಳಿಗಾಡಲ್ಲಿ ಮಕ್ಕಳು ಪಠ್ಯ, ಸಮವಸ್ತ್ರ ರಹಿತರಾಗಿಯೇ ಶಾಲೆಯತ್ತ ಹೆಜ್ಜೆ ಹಾಕುವಂತಾಗಿದೆ.