ಶೌಚಕ್ಕೆ ದಾರಿ ಯಾವುದಯ್ಯ?
ಕನ್ನಡಪ್ರಭ ವಾರ್ತೆ , ಚಿತ್ತಾಪುರ , ಜೂ.1
ತಾಲೂಕಿನ ಹೋಬಳಿ ಕೇಂದ್ರ, ರಾಜಕೀಯದಲ್ಲಿ ಶಕ್ತಿ ಕೇಂದ್ರ ಹಾಗೂ ಬಲಿಷ್ಠ ನಾಯಕರನ್ನು ಹೊಂದಿರುವುದಲ್ಲದೆ, ಸೇಡಂ ಗುಲ್ಬರ್ಗ ರಾಜ್ಯ ಹೆದ್ದಾರಿಯಲ್ಲಿ ಬರುವ ಗುಂಡಗುರ್ತಿ ಗ್ರಾಮದಲ್ಲಿ ನಾಯಕರಿಗೇನು ಕೊರತೆಯಿಲ್ಲ. ಆದರೂ ಅವರ ಕಣ್ಣ ಮುಂದೆಯೇ ಇರುವ ಗ್ರಾಮದ ಮಹಿಳೆಯರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿರುವುದು ವಿಷಾದಕರ.
ಸರ್ಕಾರವು ಮಹಿಳೆಯರಿಗೆ ಸೌಲಭ್ಯ ನೀಡಲು ನಾನಾ ಕಸರತ್ತು ಮಾಡುತ್ತಿರುವಾಗ ಹೋಬಳಿ ಕೇಂದ್ರ, ನೂತನ ಶಾಸಕರು ಇದೇ ಗ್ರಾಮದ ಮೊಮ್ಮಗ, ಎಪಿಎಂಸಿ ಅಧ್ಯಕ್ಷರು ಇದೇ ಗ್ರಾಮದವರು, ಅಲ್ಲದೇ ಗ್ರಾಪಂ ಕೇಂದ್ರ ಸ್ಥಾನ ಈ ಗ್ರಾಮದಲ್ಲಿ ಇದೆ. ಆದರೂ ಪಂಚಾಯ್ತಿ ಅನತಿ ದೂರದಲ್ಲೆ ಶೌಚಾಲಯದ ಎದುರು ದೊಡ್ಡ ತಗ್ಗು ಇದ್ದು, ಅದರಲ್ಲಿ ಕೊಳಚೆ ನೀರು ತುಂಬಿ ಶೌಚಕ್ಕೆ ಹೋಗಲು ದಾರಿ ಇಲ್ಲದೆ ಪ್ರಯಾಸ ಪಡುವಂತಾಗಿದೆ.
ಬೇಸಿಗೆಯಲ್ಲೆ ಈ ರೀತಿ ಮಹಿಳೆಯರು ಪರದಾಡುವ ಸ್ಥಿತಿ ಇದ್ದಿರುವಾಗ ಇನ್ನು ಸ್ವಲ್ಪ ದಿನದಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಅವರು ಕಷ್ಟ ಪಡುವುದು ನಿತ್ಯದ ಕಾಯಕವಾಗುವುದರಲ್ಲಿ ಸಂದೇಹವಿಲ್ಲ. ಈಗಲಾದರೂ ಗ್ರಾಪಂನವರು ಸಮಸ್ಯೆಯ ಬಗ್ಗೆ ಗಮನ ಹರಿಸಿ ಶೌಚಾಲಯಕ್ಕೆ ದಾರಿ ಮಾಡಲು ಮುಂದಾಗುವರೆ ಎಂಬುದು ಗ್ರಾಮಸ್ಥರ ಅಳಲು.
ಉಪಯೋಗಕ್ಕೆ ಬಾರದ ಶೌಚಾಲಯ: ಚಿತ್ತಾಪುರ ಪಟ್ಟಣದಲ್ಲಿಯ ವಾರ್ಡ್ 23ರಲ್ಲಿ ಸಿನಿಮಾ ಮಂದಿರ ಹತ್ತಿರ ಪುರಸಭೆಯವರು ಮಹಿಳೆರಿಗಾಗಿ ನಿರ್ಮಿಸಿದ ಶೌಚಾಲಯ 2 ವರ್ಷಗಳಿಂದ ಅಲ್ಲಿಯ ಮಹಿಳೆಯರು ಸರಿಯಾಗಿ ಉಪಯೋಗಿಸುವ ಸ್ಥಿತಿಯಲ್ಲಿ ಇದ್ದಿರುವುದಿಲ್ಲ. ಶೌಚಾಲಯಕ್ಕೆ ಬಳಸಲು ಪುರಸಭೆಯವರು ಅಲ್ಲಿ ನೀರಿನ ವ್ಯವಸ್ಥೆ ಮಾಡಿರುದಿಲ್ಲ, ಆದರೆ ಅಲ್ಲಿ ನೀರಿಲ್ಲದೇ ಮಹಿಳೆಯರು ಶೌಚಾಲಯ ಬಳಕೆ ಮಾಡಿದ್ದರಿಂದ ಶೌಚಾಲಯ ಗಬ್ಬೆದ್ದು ನಾರುತ್ತಿದೆ.