ಸಬ್ಸಿಡಿ ದರಕ್ಕೆ ಗುಣಮಟ್ಟದ ಬೀಜ, ಗೊಬ್ಬರ ಪೂರೈಸಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.1
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗಾಗಿ ರೈತರಿಗೆ ಸಬ್ಸಿಡಿ ದರದಲ್ಲಿ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ಪೂರೈಸಬೇಕೆಂದು ಆಗ್ರಹಿಸಿ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ(ಹಸಿರು ಸೇನೆ) ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಮೆಣಸಿನಕಾಯಿ, ಸಜ್ಜೆ, ಶೇಂಗಾ, ಬತ್ತ, ಸೂರ್ಯಕಾಂತಿ, ಹೆಸರು ಬೆಳೆಗಳಿಗೆ ಗುಣಮಟ್ಟದ ಬೀಜ ರಸಗೊಬ್ಬರ ಕೊರತೆಯಿಂದಾಗಿ ಬೆಳೆಗಳ ಇಳುವರಿ ಪ್ರಮಾಣ ಕುಂಠಿತಗೊಳ್ಳುತ್ತಿದೆ. ಸಂಬಂಧಪಟ್ಟ ಇಲಾಖೆಗಳಿಗೆ ಪ್ರತಿ ವರ್ಷವೂ ಮನವಿ ಸಲ್ಲಿಸಿದರೂ ಇದುವರೆಗೆ ಸರಿಯಾಗಿ ವಿತರಣೆಯಾಗದೆ ರೈತಾಪಿ ವರ್ಗ ಸಂಕಷ್ಟದಿಂದ ತತ್ತರಿಸುತ್ತಿದೆ.
ಸಮಸ್ಯೆ ಸಾಲು ಸಾಲು: ಅನಾವೃಷ್ಟಿಯಂದಾಗಿ ರೈತ ಪಟ್ಟಣಗಳಿಗೆ ಗುಳೆ ಹೊರಟಿದ್ದಾನೆ. ನೀರಾವರಿ ಪ್ರದೇಶದ ವಿತರಣಾ ಕಾಲುವೆಗಳಲ್ಲಿ ಹೂಳು ತುಂಬಿದ್ದು, ಬಿಟ್ಟ ನೀರು ಕೂಡ ಹರಿಯದಂತಾಗಿದೆ. ಸಹಕಾರ ಸಂಘಗಳಿಂದ ಬ್ಯಾಂಕುಗಳಿಂದ ಬೆಳೆ ಸಾಲಗಳಿಲ್ಲದೆ ಒದ್ದಾಡುತ್ತಿದ್ದಾನೆ. ಇವುಗಳಲ್ಲದೇ ಬೆಳೆದ ಕೃಷಿ ಉತ್ಪನ್ನಗಳನ್ನು ವ್ಯಾಪಾರ ಮಾಡಲು ಎಪಿಎಂಸಿಗೆ ಹೋದಾಗ ಸರಿಯಾದ ಬೆಲೆ ಸಿಗದೆ ವ್ಯಾಪಾರಿಗಳಿಂದ ನಾನಾ ರೀತಿಯ ಮೋಸ ಹೋಗುತ್ತಿದ್ದಾರೆ ಎಂದು ತಿಳಿಸಿದರು.
ವ್ಯಾಪಾರಸ್ಥರ ಚೆಲ್ಲಾಟ: ವ್ಯಾಪಾರಸ್ಥರು ರೈತರನ್ನು ಶೋಷಣೆಗೆ ಒಳಪಡಿಸಿ ಅವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ಬಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಮರಳು ಗಣಿಗಾರಿಕೆ ಅಕ್ರಮವಾಗಿ ನಡೆದಾಗ ರೈತ ಸಂಘದ ಮನವಿಗೆ ಜಿಲ್ಲಾಡಳಿತ ಸ್ಪಂದಿಸಿ ತೆಗೆದುಕೊಂಡ ದಿಟ್ಟ ಕ್ರಮಕ್ಕೆ ರೈತ ಸಂಘ, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದೆ.
ಮರಳು ಗಣಿಗಾರಿಕೆಯಿಂದಾಗಿ ಹತ್ತಿಗುಡೂರಿನಿಂದ ನದಿ ದಡದವರೆಗಿನ ಅರ್ಧ ಕಿಮೀಕ್ಕಿಂತ ಹೆಚ್ಚು ಪ್ರದೇಶ ಧೂಳಿನಿಂದ ಬೆಳೆ ನಾಶವಾಗಿದ್ದು, ಎಕರೆಗೆ 10 ಸಾವಿರದಂತೆ ಶೀಘ್ರವೇ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಕೋರಲಾಗಿದೆ.
ಕ್ರಮಕ್ಕೆ ಆಗ್ರಹ: ಮರಳು ಸಾಗಾಣಿಕೆಯಿಂದ ಹದಗೆಟ್ಟ ರಸ್ತೆಯನ್ನು ಪುನರ್ ನಿರ್ಮಾಣಗೊಳಿಸಿ ವೈಜ್ಞಾನಿಕವಾಗಿ ತಾಡಪಾಲುಗಳನ್ನು ಹೊದಿಸಿ ನಿಯಮಬದ್ಧವಾಗಿ ಮರಳು ನೀತಿಯಂತೆ ವಹಿವಾಟು ಮಾಡಬೇಕೆಂದು ಮನವಿ ಮಾಡಲಾಗಿತ್ತು. ಆದರೂ ಇಲ್ಲಿಯವರೆಗೆ ಸರ್ಕಾರವಾಗಲಿ, ಸಂಬಂಧಪಟ್ಟ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸರ್ಕಾರ ಎಕರಿಗೆ 20 ಸಾವಿರ ಕನಿಷ್ಠ ಬೆಳೆ ಸಾಲ ಒದಗಿಸಬೇಕು. ಎಪಿಎಂಸಿಯಲ್ಲಿ ವೈಜ್ಞಾನಿಕ ಬೆಲೆ ನಿಗದಿ, ಗುಣಮಟ್ಟದ ತೂಕ ಮತ್ತು ದಲ್ಲಾಳಿಗಳ ಕಮೀಷನ್ ಇಲ್ಲದೆ ವ್ಯಾಪಾರ ನಡೆಸಬೇಕು. ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಿ ಸಂಗ್ರಹ ಕಾನೂನು ರಚಿಸಿ ಸರ್ಕಾರದ ಬೊಕ್ಕಸಕ್ಕೆ ಹಣ ಸಂದಾಯವಾಗಬೇಕೆಂದು ಆಗ್ರಹಿಸಿದರು.