ಹಾಲಿನಲ್ಲಿ ಕಲಬೆರಕೆ!
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಜೂ.1
ಬೆಳ್ಳಗಿರೋದೆಲ್ಲ ಹಾಲಲ್ಲ...
ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವ ಮುನ್ನ ಈ ಮಾತು ಮೆಲಕು ಹಾಕಬೇಕಿದೆ. ಏಕೆಂದರೆ ಹಿಂದೆಲ್ಲಾ ಹಾಲಿನ ಪ್ರಮಾಣ ಹೆಚ್ಚಾಗುವಂತೆ ಮಾಡಲು ಹಾಲಿಗೆ ನೀರು ಬೆರೆಸಿ ಮಾರಾಟ ಮಾಡಲಾಗುತ್ತಿತ್ತು. ಇದನ್ನು ತುಸು ಸಹಿಸಿಕೊಳ್ಳಬಹುದಿತ್ತೇನೋ..?
ಆದರೀಗ ಹಾಲಿಗೆ ಸೋಡಾ, ಯೂರಿಯಾ, ಮಾರ್ಜಕ ಪುಡಿ (ಡಿಟರ್ಜಂಟ್ ಪೌಡರ್), ಮೈದಾ ಹಿಟ್ಟಿನ ಮಿಶ್ರಣ ಹೀಗೆ ದೇಹಾರೋಗ್ಯಕ್ಕೆ, ಸೂಕ್ಷ್ಮ ಅಂಗಾಂಗಳಿಗೆ ಅಪಾಯತಂದೊಡ್ಡುವ ಹತ್ತು ಹಲವು ವಸ್ತುಗಳನ್ನು ಬೆರೆಸಿ ಎಗ್ಗಿಲ್ಲದೆ ಮಾರಲಾಗುತ್ತಿದೆ.
ದೇಶಾದ್ಯಂತ ಕಂಡು ಬಂದ ಹಲವು ಪ್ರಕರಣಗಳಲ್ಲಿ ಈ ಸಂಗತಿ ದೃಢಪಟ್ಟಿದೆ. ಅಷ್ಟೇ ಅಲ್ಲ, ಹಾಲಿನ ಕಲಬೆರಕೆ ವಿಚಾರ (ಕಳೆದ ವರ್ಷ) ದೇಶದ ಸರ್ವೋಚ್ಚ ನ್ಯಾಯಾಲಯದ ಮುಂದೆ ಪಿಐಎಲ್ ರೂಪದಲ್ಲಿ ಪ್ರತ್ಯಕ್ಷವಾದಾಗ ನ್ಯಾಯಾಲಯ ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ (ಎಫ್ಎಎಸ್ಎಎಸ್ಎಐ)ಗೆ ಹಾಲಿನ ಶುದ್ಧತೆ ಸಮೀಕ್ಷೆಗೆ ಸೂಚಿಸಿತ್ತು.
ಹಾಲಿಗೆ ವಿವಿಧ ಅಪಾಯಕಾರಿ ವಸ್ತುಗಳು ಸೇರಿಕೊಳ್ಳುತ್ತಿವೆ ಎಂಬ ಸಂಗತಿ ಆಧಾರಸಹಿತ ಈ ಸಂಸ್ಥೆ ಹೊರಹಾಕಿತು. ದೇಶಾದ್ಯಂತ ಮಾರುವ ಹಾಲಿನ ಪೈಕಿ ಶೇ.70 ಒಂದಿಲ್ಲೊಂದು ರೂಪದಲ್ಲಿ ಕಲಬೆರಕೆಯಾಗಿದೆ. ಗ್ರಾಮೀಣದಲ್ಲಿಯೂ ಶೇ.68 ರಷ್ಟು ಹಾಲಿನ ನಮೂನೆ ಕಲಬೆರಕೆಯಾಗಿದ್ದು ಸಮೀಕ್ಷೆ ಕಾಲದಲ್ಲಿ ಬಹಿರಂಗವಾಗಿದೆ ಎಂದು ಭಾರತೀಯ ಆಹಾರ ಮತ್ತು ಮಾನಕ ಸಂಸ್ಥೆ ಹೇಳಿಕೊಂಡಿದೆ.
ನೀರು ಸಾರ್ವತ್ರಿಕ ಕಲಬೆರಕೆ ವಸ್ತು: ಹಾಲಿಗೆ ಶುದ್ಧ ಕುಡಿಯುವ ನೀರನ್ನು ಹಾಲಿಗೆ ಬೆರೆಸಿದರೆ ಅಂತಹ ಹಾಲಿನ ಸೇವನೆಯಿಂದ ಬರುವ ಸಾಂಕ್ರಾಮಿಕ ರೋಗಗಳಿಂದಾದರೂ ದೂರವಿರಬಹುದು. ಆದರೆ ನೀರು ಅಶುದ್ಧವಾಗಿದ್ದರೆ ಅದು ತರುವ ಅಪಾಯ ಅಷ್ಟಿಷ್ಟಲ್ಲ.
ಇನ್ನು ಹಾಲಿನ ಎಸ್ಎನ್ಎಫ್ ಮಟ್ಟ ಹೆಚ್ಚಿಸಲೆಂದು ಸ್ಟಾರ್ಚ್ ಸೇರಿದಂತೆ ತರಹೇವಾರಿ ರಸಾಯನಿಕಗಳು, ಉಪ್ಪು, ಯೂರಿಯಾ, ಮೈದಾ ಇತ್ಯಾದಿ ಕಲಬೆರಕೆ ವಸ್ತುಗಳನ್ನು ಬಳಸಲಾಗುತ್ತದೆ. ಇದರ ಜತೆಗೆ ಮಾರಾಟಗಾರರು ಹಲವು ರಸಾಯನಿಕ ಬೆರೆಸಿ ಹಾಲಿನ ಹಾಗೂ ಎಸ್ಎನ್ಎಫ್ ಪ್ರಮಾಣದಲ್ಲಿ ಹೆಚ್ಚಳವಾಗುವಂತೆ ಮಾಡುತ್ತಾರೆ.
ಹಾಲು ಹೆಚ್ಚು ದೂರ ಸಾಗಣೆ ಮಾಡುವುದರಿಂದ ವರ್ತಕರು ಕಾಸ್ಟಿಕ್ ಸೋಡಾ, ಸೋಡಿಯಂ ಬೈ ಕಾರ್ಬೋನೇಟ್ನಂತಹ ಅಲ್ಕಲಿ ರಸಾಯನಿಕ ವಸ್ತುಗಳನ್ನು ಎಗ್ಗಿಲ್ಲದೆ ಬಳಸುತ್ತಾರೆ. ಇದು ಹಾನಿಕಾರಕ ಎಂದು ಗೊತ್ತಿದ್ದರೂ ಅನಿವಾರ್ಯವಾಗಿ ನಮ್ಮ ದೇಹ ಸೇರುತ್ತಿದೆ.
ಕಲಬೆರಕೆ ಎಲ್ಲೆಡೆ ಹೆಚ್ಚಿದೆ: ಪ್ಯಾಕ್ ಮಾಡಿದ ಹಾಲಿಗಿಂತ ಚಿಲ್ಲರೆ ಮಾರಾಟದ ಹಾಲಿನಲ್ಲೇ ಕಲಬೆರಕೆ ಹೆಚ್ಚು ನಡೆಯುತ್ತಿದೆ. ಪ್ಯಾಕ್ನಲ್ಲಿರುವ ಹಾಲಿನಲ್ಲಿಯೂ ಯೂರಿಯಾ, ಸ್ಟಾರ್ಚ್ನಂತಹ ಅಪಾಯಕಾರಿ ರಸಾಯನಿಕ ಕಲಬೆರಕೆ ಹೆಚ್ಚು.
ಇಂತಹ ಹಾಲಿನ ಸೇವನೆಯಿಂದ ದೇಹಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಭಾರತೀಯ ವೈದ್ಯಕೀಯ ಪರಿಷತ್ ಅಭಿಪ್ರಾಯಪಟ್ಟಿದೆ. ಮಾರ್ಜಕ ಪುಡಿಯನ್ನು ಕಲಬೆರಕೆ ಮಾಡಿದ್ದರೆ, ಅದರಿಂದ ಕರಳು ಬೇನೆ, ಆಹಾರ ವಿಷದಂತಹ ಸಮಸ್ಯೆ ತಂದೊಡ್ಡುತ್ತದೆ. ಇತರೆ ರಬ್ಬರ್ನಂತೆ ಹೋಲುವ ಕಲಬೆರಕೆಗಳಿಂದ ಹೃದಯ ಸಂಬಂಧಿ ತೊಂದರೆಗಳು, ಕ್ಯಾನ್ಸರ್ ಇತ್ಯಾದಿ ಪೀಡೆಗಳು ಅಮರಿಕೊಳ್ಳುತ್ತವೆ.
ಕರ್ನಾಟದಲ್ಲೂ ಕಲಬೆರಕೆ: ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿರುವ ಕರ್ನಾಟಕದಲ್ಲಿಯೂ ಅದಾಗಲೇ ಹಾಲಿನ ಕಲಬೆರಕೆ ದೊಡ್ಡ ತಲೆನೋವಾಗಿದೆ. ಪ್ಯಾಕೆಟ್ ಮೇಲೆ ಕೊಬ್ಬಿನಾಂಶ, ಎಸ್ಎನ್ಎಫ್ ಯಾವುದೂ ನಮೂದಿಸದ ಸುಮಾರು 50ಕ್ಕೂ ಅಧಿಕ ನಮೂನೆಯ ಹಾಲಿನ ಉತ್ಪನ್ನಗಳು ಇಂದು ಗಡಿಯಲ್ಲಿ ಸದ್ದು ಮಾಡುತ್ತಿವೆ.
ಎಫ್ಎಸ್ಎಸ್ಎಐ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಶೇ.25 ರಿಂದ ಶೇ.30 ರಷ್ಟು ಕಲಬೆರಕೆ ಹಾಲು ಮಾರಾಟವಾಗುತ್ತಿದೆ. ಆದರೆ ಅನ್ಯ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದ ಪ್ರತಿಶತ ಕಲಬೆರಕೆ ಹಾಲಿನ ಪ್ರಮಾಣ ಕಮ್ಮಿ. ಹಾಗಂತ ನಾವು ಈ ಸಂಗತಿ ಅಲಕ್ಷಿಸುವಂತಿಲ್ಲ. ಸರ್ಕಾರದ ಸಹಕಾರದೊಂದಿಗೆ ಕರ್ನಾಟಕ ಹಾಲು ಒಕ್ಕೂಟ ಕಲಬೆರಕೆ ಹಾಲಿನ ವಿರುದ್ಧ ಸಮರ ಸಾರಬೇಕಾಗಿದೆ.
ಹಾಲಿನ ಗ್ರಾಹಕರೇ ಎದ್ದೇಳಿ...
ಬೆಳಗಿನ ಜಾವ ವರ್ತಕರು ಎಸೆದ ಹಾಲಿನ ಪ್ಯಾಕೆಟ್ ಯಾವುದಿದೆ? ಅದರ ಮೇಲೆ ನಮೂದಾಗಿರುವ ಸಂಗತಿಗಳು ಎಂತಹವು ಎಂಬುದರ ಪರಿಶೀಲನೆ ಮಾಡಬೇಕು.
ಕೊಬ್ಬಿನಾಂಶ ಹಾಗೂ ಎಸ್ಎಫ್ ಪ್ರಮಾಣ ನಮೂದಿಸಲಾಗದ ಹಾಲಿನ ಪೌಚ್ಗಳ ಬಗ್ಗೆ ಎಚ್ಚರವಿರಲಿ
ಖುಲ್ಲಾ ಹಾಲು ಖರೀದಿಸುತ್ತಿದ್ದರೆ ಅದರ ಸ್ವಾದ, ನೀರಿನಾಂಶ, ಕೊಬ್ಬಿನಾಂಶ, ಕೆನೆ ಬರುವ ಪ್ರಮಾಣ ಎಲ್ಲವನ್ನು ಗಮನಿಸಬೇಕು
ಹಾಲು ವಾಸನೆಯಿಂದ ಕೂಡಿದ್ದರೆ ಅದು ಬಳಕೆಗೆ ಯೋಗ್ಯವಲ್ಲ
ಕಲಬೆರಕೆ ಹಾಲು ಸೇವಿಸಿ ಆರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ಜಾಗೃತೆಯಿಂದಿದ್ದು ಗುಣಮಟ್ಟದ ಹಾಲು ಬಳಸಲು ಮುಂದಾಗಿ.
- ಶೇಷಮೂರ್ತಿ ಅವಧಾನಿ