ಹೆತ್ತ ಮಗು ಬಿಟ್ಟು ಪರಾರಿ!
ಯಾದಗಿರಿ: 2 ದಿನದ ಹಸುಗೂಸನ್ನು ಆಸ್ಪತ್ರೆಯಲ್ಲೇ ಬಿಟ್ಟು ತಾಯಿಯೊಬ್ಬಳು ಪರಾರಿಯಾದ ಘಟನೆ ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಅನಾಥ ಗಂಡು ಶಿಶು ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ನೋಡಿಕೊಳ್ಳಲಾಗುತ್ತಿದೆ. ತಾಲೂಕಿನ ಸೈದಾಪುರ ಗ್ರಾಮದ ಮಹಿಳೆಯೊಬ್ಬಳು ಮೇ 30ರಂದು ಅಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಮಾನಸಿಕ ಅಸ್ವಸ್ಥಳಾಗಿರುವ ಅವಳನ್ನು ಉಪಚರಿಸಲು ಜಿಲ್ಲಾ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಸೇರಿಸಲಾಗಿತ್ತು.
ಆದರೆ ಜೂ.1ರಂದು ರಾತ್ರಿ ವೇಳೆ ಏಕಾಏಕಿಯಾಗಿ ಆ ತಾಯಿ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದಾಳೆ. ಆದರೆ ಆಸ್ಪತ್ರೆ ಸಿಬ್ಬಂದಿ ಶಿಶುವನ್ನು ಜೋಪಾನವಾಗಿ ಉಪಚರಿಸುತ್ತಿದ್ದು, ಮಗು ಆರೋಗ್ಯದಿಂದಿದೆ.
ಶಿಶು ಕೇಂದ್ರಕ್ಕೆ ದಾಖಲಿಸಲು ವ್ಯವಸ್ಥೆ: ಈ ವಿಷಯ ತಿಳಿದ ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಟ್ರೂಡ್ ವೇಗಸ್ ಅವರು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ನಿರ್ದೇಶನದಂತೆ ಗುಲ್ಬರ್ಗದ ಶಿಶು ಕೇಂದ್ರಕ್ಕೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಸೋಮವಾರ ಶಿಶುವನ್ನು ಗುಲ್ಬರ್ಗಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಜಿ.ವೇಗಸ್ ತಿಳಿಸಿದ್ದಾರೆ.