ಅನುಮತಿಯಿಲ್ಲದೆ ಸಭೆಗೆ ಗೈರಾದ್ರೆ ಸುಮ್ನಿರಲ್ಲ!
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.2
ಬಹುತೇಕ ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿ ಸಿಬ್ಬಂದಿಯನ್ನು ಸಭೆಗೆ ಕಳುಹಿಸುತ್ತಿದ್ದಾರೆ. ಸಮರ್ಪಕ ಮಾಹಿತಿ ಇಲ್ಲದ ಸಿಬ್ಬಂದಿ ಬಂದೂ ಪ್ರಯೋಜನವಿಲ್ಲ. ಅನುಮತಿ ಪಡೆಯದೇ ಇಲಾಖೆ ಅನುಷ್ಠಾನಾಧಿಕಾರಿಗಳು ಗೈರಾದರೆ ಸುಮ್ಮನಿರುವುದಿಲ್ಲ ಎಂದು ಜಿಪಂ ಅಧ್ಯಕ್ಷೆ ಮರೆಮ್ಮ ಶಾಣೆನೋರ್ ಎಚ್ಚರಿಕೆ ನೀಡಿದರು.
ಜಿಪಂ ಸಭಾ ಭವನದಲ್ಲಿ ಶನಿವಾರ ಜರುಗಿದ ಜಿಪಂ ಹಣಕಾಸು ಮತ್ತು ಯೋಜನಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಹಳಷ್ಟು ಅಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿದ್ದಾರೆ. ಅವರಿಗೇನು ಮಾಹಿತಿ ಗೊತ್ತಿರುತ್ತದೆ. ಅವರಿಂದ ಇಲಾಖೆಯ ಪ್ರಗತಿ ವರದಿ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಹೀಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು.
ಜಿಪಂ ಯೋಜನಾಧಿಕಾರಿ ಬಸವರಾಜ ಮಾತನಾಡಿ, ಸರಿಯಾದ ಮಾಹಿತಿ ಇದ್ದರೆ ಒದಗಿಸಿ. ಇಲ್ಲದಿದ್ದರೆ ನಿಮ್ಮ ಮೇಲಾಧಿಕಾರಿಗಳನ್ನು ಕಳಿಹಿಸಿ. ಸಭೆಗೆ ಗೈರು ಹಾಜರಾಗುವ ಮುನ್ನ ಅಧ್ಯಕ್ಷರ ಅನುಮತಿ ಪಡೆದುಕೊಳ್ಳಬೆಕೆಂಬ ಜ್ಞಾನವಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ನೆಟ್ಟ ಸಸಿ ತೋರಿಸಿ- ಎಚ್ಚರಿಕೆ: ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ಪ್ರಗತಿ ನೀಡುವಂತೆ ಕೋರಲಾಯಿತು. ಎಸ್ಡಿಪಿ ಯೋಜನೆಯಡಿ 86 ಹೆಕ್ಟೇರ್ ಪ್ರದೇಶದಲ್ಲಿ 1.68 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡುತ್ತಿದ್ದಂತೆ, ಜಿಪಂ ಉಪಾಧ್ಯಕ್ಷ ಶರಣಿಕಕುಮಾರ ದೋಖಾ ಗರಂ ಆಗಿ, ಅಲ್ರಿ ನೀವು ನೆಟ್ಟ ಸಸಿ ಎಲ್ಲಿವೆ ಅಂತ ತೋರಿಸಿ ಎಂದು ಹಲವಾರು ತಿಂಗಳುಗಳು ಕಳೆದವು. ಎಷ್ಟು ಬಾರಿ ಸಭೆಗಳಲ್ಲಿ ಈ ಮಾತನ್ನು ಹೇಳಬೇಕು ಎಂದು ತರಾಟೆಗೆ ತೆಗೆದುಕೊಂಡರು. ನೀವು ಸಸಿಗಳನ್ನು ಎಲ್ಲೆಲ್ಲಿ ನೆಟ್ಟಿದ್ದೀರಿ, ಅವುಗಳನ್ನು ತೋರಿಸುವವರೆಗೆ ನಿಮ್ಮ ಇಲಾಖೆ ಕ್ರಿಯಾಯೋಜನೆಗೆ ಅನುಮೋದನೆ ಕೊಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಎಷ್ಟು ಸಸಿ ನೆಟ್ಟಿದ್ದೀರಿ ಎಂಬುದನ್ನು ತೋರಿಸಿ ಅಂದರೂ ತೋರಿಸಲಾಗುತ್ತಿಲ್ಲ. ಕೇವಲ ಹತ್ತು ತೋಪುಗಳನ್ನು ತೋರಿಸಿ ಸಾಕು, ಕೇವಲ ಬೋಗಸ್ ಕಾಮಗಾರಿಗಳನ್ನು ತೋರಿಸುತ್ತಿದ್ದೀರಿ. ನೆಟ್ಟ ಸಸಿಗಳನ್ನು ತೋರಿಸಿದ ಮೇಲೆ ಪ್ರಗತಿ ವರದಿ ನೀಡಿ ಎಂದು ದೋಖಾ ಸೂಚಿಸಿದರು.
ಸಭೆಗೆ ಸಿಬ್ಬಂದಿ- ಗರಂ: ಜಿಲ್ಲೆಯಲ್ಲಿ ಎಷ್ಟು ಹಾಸ್ಟೆಲ್ಗಳು ಬಾಡಿಗೆ ಕಟ್ಟಡದಲ್ಲಿವೆ ಹಾಗೂ ಸ್ವಂತ ಕಟ್ಟಡಗಳಲ್ಲಿ ಎಷ್ಟು ನಡೆಯುತ್ತಿವೆ, ಎಷ್ಟು ಆಶ್ರಮ ಶಾಲೆಗಳಿವೆ ಎಂಬ ಸಂಪೂರ್ಣ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣಾಧಿಕಾರಿಗೆ ಸೂಚಿಸಿದಾಗ, ಕಚೇರಿಯ ಸಿಬ್ಬಂದಿ ಆಗಮಿಸಿದ್ದನ್ನು ಕಂಡು ಅಧ್ಯಕ್ಷರು ಮತ್ತೆ ಗರಂ ಆದರು. ಯಾಕ್ರಿ ಎಲ್ಲಿ ಹೋಗ್ಯಾರ ನಿಮ್ಮ ಸಾಹೇಬರು ಎಂದು ಕೇಳಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಅಕ್ಷರ ದಾಸೋಹ, ವಯಸ್ಕರ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.