ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ನೇತ್ರ ತಪಾಸಣಾ ಶಿಬಿರ

Lingaraj Badiger
Updated On : 3 Jun 2013, 11:14 am

ಗುಲ್ಬರ್ಗ: ಹೈ-ಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ನೇತ್ರ ಚಿಕಿತ್ಸಾ ಶಾಸ್ತ್ರ ವಿಭಾಗ ಹಾಗೂ ಜರ್ಮನಿಯ ಹಮಾರಾ ಬಂಧನ ಸಂಸ್ಥೆಯ ಸಹಯೋಗದಲ್ಲಿ ಜೂ.3ರಂದು ಬೆಳಗ್ಗೆ 10ರಿಂದ 2.30ರವರೆಗೆ ಚಿಂಚೋಳಿಯ ಎಚ್‌ಕೆಇ ಸಂಸ್ಥೆಯ ಚೆನ್ನಮ್ಮ ಬಸಪ್ಪ ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ನೇತ್ರ ತಪಾಸಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ರೋಗಿಗಳಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಜೂ.4ರಿಂದ 5ರವರೆಗೆ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರಕ್ರಿಯೆಗೈದು, ಐಒಎಲ್ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಮರಾಠಿಯಲ್ಲಿ ಪ್ರಮಾಣ: ಖಂಡನೆ
ಚಿತ್ತಾಪುರ: ವಿಧಾನಸಭೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕೆಲವು ಶಾಸಕರು ಮರಾಠಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆಂದು ರಾವೂರ ಗ್ರಾಮ ಪಂಚಾಯ್ತಿ ಸದಸ್ಯ, ಕಸಾಪ ಸದಸ್ಯ ಶರಣು ಜ್ಯೋತಿ ಆರೋಪಿಸಿದ್ದಾರೆ. ಕನ್ನಡ ಭಾಷೆ, ಇಲ್ಲಿಯ ಕಲೆ ಸಂಸ್ಕೃತಿ ಉಳಿಸಿ ಬೆಳೆಸಬೇಕಾದ ಜನಪ್ರತಿನಿಧಿಗಳೇ ಭಾಷೆ ಬಗ್ಗೆ ತಾತ್ಸಾರ ಮನೋಭಾವನೆ ತೋರಿಸುವುದು ಸರಿಯಲ್ಲ. ಕನ್ನಡ ನಾಡಿನಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಕನ್ನಡ ಮರೆತು ಮರಾಠಿಯಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದು, ಕೂಡಲೇ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ದಂಪತಿ ಮೇಲೆ ಹಲ್ಲೆ
ಗುಲ್ಬರ್ಗ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ 3 ಜನ ಸೇರಿ ದಂಪತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಆಳಂದ ತಾಲೂಕಿನ ಝಳಕಿ (ಬಿ) ಗ್ರಾಮದಲ್ಲಿ ನಡೆದಿದೆ. ಶಿವಶರಣಪ್ಪ ತಂದೆ ಲಕ್ಕಪ್ಪ ಮರಬೆ ಮತ್ತು ಆತನ ಹೆಂಡತಿ ಲಕ್ಷ್ಮೀಬಾಯಿ ಗಾಯಗೊಂಡವರು. ಇಬ್ಬರು ಮನೆಯಲ್ಲಿರುವಾಗ ಎದುರು ಮನೆಯ ಶರಣಪ್ಪ ತಂದೆ ಖತಲಪ್ಪ ನಾಗಲೇಗಾಂವ, ಶಶಿಕಾಂತ ತಂದೆ ಶರಣಪ್ಪ ನಾಗಲೇಗಾಂವ, ರವಿಕಾಂತ ಎಂಬ ಮೂರು ಜನ ಸೇರಿ ಶಿವಶರಣಪ್ಪನಿಗೆ ಬಡಿಗೆಯಿಂದ ಹೊಡೆದರು. ಬಿಡಿಸಲು ಬಂದ ಲಕ್ಷ್ಮೀಬಾಯಿಗೆ ಹೊಡೆದು ಅವಮಾನಗೊಳಿಸಿ ಜೀವ ಬೆದರಿಕೆ ಹಾಕಿದ್ದಾರೆ. ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ
ಗುಲ್ಬರ್ಗ: ಮನೆ ಕಟ್ಟಲು 2 ಲಕ್ಷ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪತ್ನಿಗೆ ಗಂಡ, ಅತ್ತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಘಟನೆ ಶಹಾಬಾದ್‌ನ ಬಸವೇಶ್ವರ ಕಾಲೋನಿಯಲ್ಲಿ ನಡೆದಿದೆ. ಶೈಲಜಾ ಗಂಡ ಸಂತೋಷ ಮಾನವಿಕರ್ ಎಂಬ ಮಹಿಳೆ ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಡಿಗೆ ಸರಿಯಾಗಿ ಮಾಡಲು ಬರುವುದಿಲ್ಲ, ಅತ್ತೆಗೆ ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಹೇಳಿ ಗಂಡ ಸಂತೋಷ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದನು. ಈಚೇಗೆ ಮನೆ ಕಟ್ಟುತ್ತಿರುವುದರಿಂದ 2 ಲಕ್ಷ ತೆಗೆದುಕೊಂಡು ಬಾ ಎಂದು ಗಂಡ ಮತ್ತು ಅತ್ತೆ ಸೇರಿ ಕೋಣೆಯಲ್ಲಿ ಕೂಡಿ ಹಾಕಿ ಕೈಯಿಂದ ಮತ್ತು ಚಪ್ಪಲಿಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ. ತಾನು ತಪ್ಪಿಸಿಕೊಂಡು ಬಂದಿದ್ದು, ನನ್ನ ಜೀವಕ್ಕೆ ಅಪಾಯವಿದೆ ಎಂದು ಶೈಲಜಾ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement