ಚರಂಡಿ ತುಂಬ ಹೂಳು, ಮಳೆ ಬಂದರೆ ಗೋಳು
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.2
ಮುಂಗಾರು ಆರಂಭಕ್ಕೆ ದಿನಗಣನೆ ಆರಂಭವಾಗಿದ್ದರೂ ಇಲ್ಲಿಯ ನಗರಸಭೆ ಮಾತ್ರ ಇನ್ನೂ ನಿದ್ದೆಯಿಂದ ಎದ್ದಿಲ್ಲ.
ಆರಂಭಿಕವಾಗಿ ಬಿದ್ದಿರುವ ಮಳೆಗೇ ನಗರ ಪ್ರದೇಶ ತುಂಬ ರಾಡಿಮಯವಾಗಿದೆ. ನಗರದ ಎಲ್ಲಾ ವಾರ್ಡು, ಪ್ರಮುಖ ರಸ್ತೆ ಪಕ್ಕದ ಚರಂಡಿಗಳು ಕಸದಿಂದ ತುಂಬಿಕೊಂಡಿದೆ. ಮಳೆ ನೀರು ಚರಂಡಿಯಲ್ಲಿ ಹರಿಯಲು ಆಸ್ಪದವೇ ಇಲ್ಲದಂತಾಗಿದ್ದು, ಜಿಲ್ಲಾ ಕೇಂದ್ರದಲ್ಲಿ ನಗರಸಭೆ ಇದೆಯೇ ಎಂದು ಪ್ರಶ್ನಿಸುವಂತಾಗಿದೆ.
ನಗರಸಭೆಗೇಕೆ ಅಸಡ್ಡೆ?: ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಳೆಗಾಲ ಆರಂಭಕ್ಕೂ ಮುನ್ನವೇ ಚರಂಡಿ ಹೂಳೆತ್ತುವ ಪ್ರಕ್ರಿಯೆ ನಡೆಸಲಾಗುತ್ತದೆ. ಆದರೆ ಯಾದಗಿರಿ ನಗರಸಭೆಗೆ ಮಾತ್ರ ಇದು ಅನ್ವಯವಾಗುವುದಿಲ್ಲ. ಜೂನ್ ತಿಂಗಳು ಆರಂಭವಾದರೂ ಚರಂಡಿಯ ಹೂಳೆತ್ತುವ ಕಾರ್ಯ ಮಾತ್ರ ಚುರುಕು ಪಡೆದಿಲ್ಲ.
ಜಿಲ್ಲಾ ಕೇಂದ್ರದ ಸೌಂದರ್ಯವೇ ಹಾಳಾಗಿದ್ದು, ಜನ ಹೇಸಿಗೆ ಪಟ್ಟುಕೊಳ್ಳುವಂತಾಗಿದೆ. ನಗರಸಭೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳ ಆಡಳಿತ ಇನ್ನೂ ಶುರುವಾಗದ್ದರಿಂದ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು ಏನೂ ಮಾಡದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ರಸ್ತೆ ಲೆವಲ್ಗೆ ಚರಂಡಿ: ಘನ ತ್ಯಾಜ್ಯ, ಪ್ಲಾಸ್ಟಿಕ್, ಕಸಕಡ್ಡಿಗಳೇ ಚರಂಡಿಯನ್ನು ಆಕ್ರಮಿಸಿಕೊಂಡಿವೆ. ಇದರಿಂದ ಇಲ್ಲಿಯ ಬಹುತೇಕ ಕಡೆ ರಸ್ತೆ ಪಕ್ಕದಲ್ಲಿನ ಚರಂಡಿಯೇ ಮಾಯವಾಗಿದೆ. ಪೌರ ಕಾರ್ಮಿಕರು ಎಷ್ಟೇ ಶ್ರಮ ವಹಿಸಿದರೂ ಕಣ್ಣಿಗೆ ಕಾಣಿಸದಂತಾಗಿದೆ. ಎಲ್ಲ ವಾರ್ಡುಗಳಲ್ಲಿ ಚರಂಡಿ ಹೂಳು ತುಂಬಿ ರಸ್ತೆಮಟ್ಟಕ್ಕೆ ಬಂದಿದೆ. ಸಣ್ಣ ಮಳೆ ಬಂದರೂ ನೀರು ಚರಂಡಿಯಲ್ಲಿ ಹರಿಯದೆ ರಸ್ತೆ ಮೇಲೆಯೇ ಹರಿಯುವಂತಾಗಿದೆ. ಆದರೂ ಈ ಬಗ್ಗೆ ನಗರಸಭೆ ಕಿಂಚಿತ್ತೂ ಗಮನ ನೀಡದಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಮುಖ ಬಡಾವಣೆಗಳಲ್ಲಿ ಒಂದಾದ ಬಸವೇಶ್ವರ ನಗರದ ಕೆಲ ಭಾಗಗಳಲ್ಲಿ ಚರಂಡಿ ಹಾಗೂ ರಸ್ತೆಯೇ ಇಲ್ಲ. ಮನೆಗಳಿಂದ ಹರಿದು ಬರುವ ತ್ಯಾಜ್ಯ ನೀರು ದಾರಿ ಮೇಲೆ ಹರಿಯುತ್ತಿದೆ. ಇಲ್ಲಿ ಜನರು ನಡೆದಾಡಲು ಸಾಧ್ಯವಾಗದೇ ಹಾರುತ್ತಲೇ ಸಾಗುತ್ತಾರೆ.
ನಗರವೇ ಕೊಳಚೆಮಯ: ನಗರದ ಸ್ಟೇಶನ್ ರಸ್ತೆ, ಬಸ್ ನಿಲ್ದಾಣದ ಪಕ್ಕದ ರಸ್ತೆ, ಚಿತ್ತಾಪುರ ರಸ್ತೆ, ಗಾಂಧಿಚೌಕ, ಚಕ್ರಕಟ್ಟಾ ಸೇರಿದಂತೆ ಎಲ್ಲ ಕಡೆ ಮಳೆ ಬಂದಾಗ ನಗರಸಭೆಯ ಆವಾಂತರಗಳೆಲ್ಲ ಬೆಳಕಿಗೆ ಬರುವಂತಾಗಿದೆ. ಬೇಸಿಗೆಯಲ್ಲಿ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳದ್ದರಿಂದ ಜನ ಪರದಾಡುವಂತಾಗಿದೆ. ಪಾದಚಾರಿಗಳು ಮೂಗು ಮುಚ್ಚಿ, ಬಟ್ಟೆ ಮೇಲೆತ್ತಿಕೊಂಡೇ ಓಡಾಡುವ ಸ್ಥಿತಿಯಿದೆ.
ಗಾಂಧಿಚೌಕದಲ್ಲಿನ ಮಾರುಕಟ್ಟೆ ಹಾಗೂ ಸ್ಟೇಶನ್ ಪ್ರದೇಶದ ಮಾರ್ಕೆಟ್ ರಸ್ತೆ ಬದಿಯಲ್ಲಿ ಚರಂಡಿಯೇ ಇಲ್ಲ. ಇದರಿಂದ ಬಿದ್ದ ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ತರಕಾರಿ ವ್ಯಾಪಾರಸ್ಥರು ಹಾಗೂ ಖರೀದಿಗೆ ಬರುವವರು ಕೊಚ್ಚೆಯಲ್ಲೇ ಸಂಚರಿಸುವಂತಾಗಿದೆ. ತರಕಾರಿಗಳೂ ಹಾಳಾಗುತ್ತಿದ್ದು, ಮುಂಗಾರು ಪೂರ್ವ ಮಳೆಗೇ ನಗರಸಭೆಗೆ ಜನ ಹಿಡಿಶಾಪ ಹಾಕುವಂತಾಗಿದೆ.
ಡಿಸಿಯೇ ಆಡಳಿತಾಧಿಕಾರಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಅವಧಿಯಲ್ಲಿ ಜಿಲ್ಲಾಧಿಕಾರಿಯವರೇ ಇಲ್ಲಿನ ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದುವರೆಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗದ್ದರಿಂದ ಆಡಳಿತ ಇನ್ನೂ ಜನಪ್ರತಿನಿಧಿಗಳ ಕೈಗೆ ಬಂದಿಲ್ಲ.
ಆದ್ದರಿಂದ ಮಳೆಗಾಲ ಪೂರ್ವ ಮುಂಜಾಗ್ರತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವವರು ಯಾರೂ ಇಲ್ಲ. ಪೌರಾಯುಕ್ತರು ಹಾಗೂ ಇತರ ಸಿಬ್ಬಂದಿ ಇದ್ದರೂ ನಗರದ ಸ್ವಚ್ಛತೆಯನ್ನು ಅವರು ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿಲ್ಲ. ಇದಕ್ಕೆ ನಗರಾದ್ಯಂತ ಕಾಣುವ ಚರಂಡಿ ದುಸ್ಥಿತಿಯೇ ಸಾಕ್ಷಿಯಾಗಿದೆ.
ಜಿಲ್ಲಾಧಿಕಾರಿಗಳೇ ಆಸಕ್ತಿ ವಹಿಸಬೇಕು..
ಜಿಲ್ಲಾಧಿಕಾರಿಯವರೇ ಈಗ ನಗರಸಭೆ ಆಡಳಿತದ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ಮಳೆಗಾಲದಲ್ಲಿ ಮಾರಕ ರೋಗಗಳು ಆವರಿಸಿಕೊಂಡ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ಈಗಲೇ ಎಚ್ಚೆತ್ತುಕೊಳ್ಳುವುದು ಅಗತ್ಯ. ಈಗಾಗಲೇ ಚರಂಡಿ ಹೂಳೆತ್ತುವ ಕಾಮಗಾರಿಗೆ ಸಮಯ ಮೀರಿದೆ. ಭಾರೀ ಮಳೆಯಾದರೆ ಚರಂಡಿ ನೀರು ಮನೆಗಳಿಗೆ ನುಗ್ಗಿ ಅಪಾಯವಾಗುವ ಸಾಧ್ಯತೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶೀಘ್ರವಾಗಿ ನಗರ ಪ್ರದೇಶದ ಚರಂಡಿ ಹಾಗೂ ಪ್ರಮುಖ ನಾಲಾಗಳ ಹೂಳೆತ್ತುವ ಕಾಮಗಾರಿ ನಡೆಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
-ನಾರಾಯಣ ಹೆಗಡೆ