ಡೆಂಘೀ ನಿಯಂತ್ರಣ; ತಿಳಿವಳಿಕೆ ಅಗತ್ಯ
ಕನ್ನಡಪ್ರಭ ವಾರ್ತೆ, ಯಾದಗಿರಿ, ಜೂ.2
ಡೆಂಘೀ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆ. ಈಡೀಸ್ ಈಜಿಪ್ಟೈ ಎಂಬ ಸೊಳ್ಳೆಯಿಂದ ಈ ರೋಗ ಹರಡುತ್ತದೆ. ಈ ಕಾಯಿಲೆಯು ಸೋಂಕು ಹೊಂದಿದ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಕಾಯಿಲೆ ಹರಡುತ್ತದೆ. ಆದ್ದರಿಂದ ಈ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವುದು ಅಗತ್ಯ ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ರತ್ನಾಕರ ತೋರಣ ಹೇಳಿದರು.
ತಾಲೂಕಿನ ಅರಕೇರಾ(ಬಿ) ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರಕೇರಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಪಂ ಸದಸ್ಯರು, ಅಧ್ಯಕ್ಷರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗೆ ಡೆಂಘೀ ಜ್ವರದ ನಿಯಂತ್ರಣದ ಬಗ್ಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ರೋಗದ ಲಕ್ಷಣ: ಸೊಳ್ಳೆಯು ನಮ್ಮ ಮನೆಯಲ್ಲಿರುವ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತದೆ. ಅಲ್ಲದೆ ಈ ಸೊಳ್ಳೆಯು ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ. ಈ ರೋಗದ ಲಕ್ಷಣಗಳೆಂದರೆ ಇದ್ದಕ್ಕಿದ್ದಂತೆ ತೀವ್ರ ಜ್ವರ ಬರುವುದು, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದರು. ಈ ರೋಗಕ್ಕೆ ನಿರ್ದಿಷ್ಟ ಔಷಧಿ, ಲಸಿಕೆ ಇಲ್ಲ. ರೋಗದ ಲಕ್ಷಣಗಳನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಈ ಲಕ್ಷಣ ಕಂಡುಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕೆಂದು ಸಲಹೆ ನೀಡಿದರು.
ಮುನ್ನೆಚ್ಚರಿಕೆ ಅಗತ್ಯ: ಡೆಂಘೀ ರೋಗದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯ. ನೀರಿನ ತೊಟ್ಟಿ, ಬ್ಯಾರೆಲ್. ಏರ್ ಕೂಲರ್ ಇತ್ಯಾದಿ ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛ ಮಾಡಿ ಒಣಗಿಸಿ ಮತ್ತೆ ನೀರು ಸಂಗ್ರಹಿಸಬೇಕು. ಯಾವಾಗಲೂ ಭದ್ರವಾದ ಮುಚ್ಚಳಿಕೆಯಿಂದ ಮುಚ್ಚಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಬೇಕು ಎಂದರು. ಬಯಲಲ್ಲಿ ಟೈರು, ಎಳನೀರಿನ ಚಿಪ್ಪು ಮತ್ತು ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಸೂಕ್ತ ವಿಲೇವಾರಿ ಮಾಡುವುದು ಅಥವಾ ನಾಶಗೊಳಿಸುವುದು ಅಗತ್ಯ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಚನ್ನಮ್ಮ, ಸದಸ್ಯರಾದ ಹಣಮಂತ ಖಾನಳ್ಳಿ, ಬಂಗಾರಪ್ಪ, ಮಲ್ಲಮ್ಮ, ಲಕ್ಷ್ಮೀಬಾಯಿ, ಶರಣಮ್ಮ ಇತರರು ಇದ್ದರು.