ಪ್ರತಿಭಾ ಪುರಸ್ಕಾರ ಮಕ್ಕಳ ಯಶಸ್ಸಿಗೆ ಪೂರಕ; ಆವಂಟಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.2
ವರ್ಷವಿಡೀ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದಾಗ ಅವರ ಶ್ರಮಕ್ಕೆ ತಕ್ಕಂತೆ ಅಂಕಗಳನ್ನು ಪಡೆಯುತ್ತಾರೆ. ಅವರ ಪರಿಶ್ರಮವನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುವುದರಿಂದ ಅವರ ಯಶಸ್ಸಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ನ್ಯಾಯವಾದಿ ಗಂಗಾಧರ ಆವಂಟಿ ಅಭಿಪ್ರಾಯಪಟ್ಟರು.
ನಗರದ ಆರ್.ವಿ. ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಈ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಶಿಕ್ಷಣ ಸಂಸ್ಥೆಗಳು ಮನಸ್ಸು ಮಾಡಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಅವರನ್ನು ಒಳ್ಳೆಯ ನಾಗರಿಕರನ್ನಾಗಿ ರೂಪಿಸಿ ಈ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದು ಹೇಳಿದರು.
ವಿದ್ಯಾರ್ಥಿ ಶ್ರಮದ ಮೇಲೆ ಸಂಸ್ಥೆ ಬೆಳವಣಿಗೆ: ಸಂಸ್ಥೆಯ ಸದಸ್ಯ ಡಾ. ಗಂಗಾಧರ ಮಾತನಾಡಿ, ಸಂಸ್ಥೆಯ ಬೆಳವಣಿಗೆ ವಿದ್ಯಾರ್ಥಿಗಳ ಶ್ರಮದ ಮೇಲೆ ನಿಂತಿರುತ್ತದೆ. ಮಕ್ಕಳು ಕಷ್ಟಪಟ್ಟು ಓದಿ ಹೆಚ್ಚು ಅಂಕಗಳನ್ನು ಗಳಿಸುವುದರಿಂದ ನಿಮಗೂ ಮತ್ತು ನಿಮಗೆ ವಿದ್ಯಾರ್ಜನೆ ಮಾಡಿದ ಗುರು ಹಾಗು ಸಂಸ್ಥೆಗಳಿಗೆ ಶ್ರೇಯಸ್ಸು ಸಲ್ಲುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲ ಕುಪೇಂದ್ರ ಪಾಟೀಲ, ಸಂಸ್ಥೆಯಲ್ಲಿ ಸಿಇಟಿ ತರಬೇತಿ ನೀಡಲಾಗುತ್ತಿದೆ. ಅದನ್ನ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಸಂಸ್ಥೆಯ ಅಧ್ಯಕ್ಷೆ ಕಮಲಾ ದೇವರಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪಿಯುಸಿ ದ್ವಿತೀಯ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ಬಹುಮಾನ ನೀಡಲಾಯಿತು. ಸಂಸ್ಥೆಯ ಸದಸ್ಯರಾದ ಚಂದ್ರಶೇಖರ ನಿಲಂಗಿ, ಸುರೇಶ ನಿಲಂಗಿ, ಬಸವರಾಜ ಚಾಮ, ವಿಜಯ ಕುಲಕರ್ಣಿ, ಸುಧಾಕರ್, ವೀರೇಶ ಇದ್ದರು.