ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಾವಿ, ಬೋರ್‌ವೆಲ್ ಭರ್ತಿಯಾಗುವವರೆಗೂ ನೀರೊದಗಿಸಿ..

Lingaraj Badiger
Updated On : 3 Jun 2013, 11:14 am

ಕನ್ನಡಪ್ರಭ ವಾರ್ತೆ, ಆಳಂದ, ಜೂ.2
ಗ್ರಾಮೀಣ ಭಾಗದಲ್ಲಿ ನೀರಿಲ್ಲದೆ ಜನ ಜಾನುವಾರುಗಳಿಗೆ ಭಾರೀ ತೊಂದರೆಯಾಗುತ್ತಿದೆ. ಮಳೆಯಾಗಿ ಬಾವಿ, ಬೋರ್‌ವೆಲ್‌ಗಳಿಗೆ ನೀರು ಭರ್ತಿಯಾಗುವವರೆಗೂ ಸಂಬಂಧಿತ ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಪ್ರಯತ್ನ ಮೀರಿ ಕೆಲಸಮಾಡಬೇಕೆಂದು ಶಾಸಕ ಬಿ.ಆರ್. ಪಾಟೀಲ್ ತಾಕೀತು ಮಾಡಿದರು.
  ಪಟ್ಟಣದ ತಾಪಂ ಸಭಾಂಗಣದಲ್ಲಿ ಕರೆದ ಗ್ರಾಪಂ ಅಧ್ಯಕ್ಷರ ಹಾಗೂ ಪಿಡಿಒ ಅವರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ಮೂಲವೇ ಬರಡಾಗಿ ಹೋಗಿದ್ದರೆ ಟ್ಯಾಂಕರ್ ಮೂಲಕ ನೀರು ಮುಂದುವರೆಸಿ ಅಥವಾ ನೀರಿದ್ದರೆ ಪೈಪ್‌ಲೈನ್, ದುರಸ್ತಿ ಇನ್ನಿತರ ಸಣ್ಣಪುಟ್ಟ ಕಾರ್ಯಗಳು ಕೈಗೊಂಡು ನೀರಿನ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಿ: ಸಾಮಾನ್ಯವಾಗಿ ಈ ಭಾಗದಲ್ಲಿ ಜೂ.20ರ ನಂತರವೇ ಸಮರ್ಪಕವಾದ ಮಳೆ ಬರುತ್ತದೆ. ಮಳೆ ಬಂದ 15 ದಿನಗಳ ಬಳಿಕವೇ ಬತ್ತಿದ ಬಾವಿ, ಬೋರುವೆಲ್‌ಗೆ ಅಂತರ್ಜಲ ಹೆಚ್ಚಾಗಿ ನೀರು ಬಳಕೆಗೆ ಅನುಕೂಲವಾಗುತ್ತದೆ. ಒಂದೊಮ್ಮೆ ಮಳೆಯ ಮುಂದಕ್ಕೆ ಸರಿದರೆ ತೀರಾ ಕಷ್ಟವಾಗುತ್ತದೆ. ಅಲ್ಲಿಯವರೆಗೂ ಅಧಿಕಾರಿಗಳು ಮತ್ತು ಗ್ರಾಪಂ ಜನಪ್ರತಿನಿಧಿಗಳು ತುರ್ತು ಮತ್ತು ಅಗತ್ಯ ಕ್ರಮ ಕೈಗೊಂಡು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಅಗತ್ಯ ಮಳೆ ಬಿದ್ದರೆ ಸಮಸ್ಯೆ ಪರಿಹಾರ: ಪ್ರತ್ಯೇಕವಾಗಿ ಗ್ರಾಪಂ ಅಧ್ಯಕ್ಷರ ಹಾಗೂ ಅಭಿವೃದ್ಧಿ ಅಧಿಕಾರಿಗಳಿಂದ ನೀರಿನ ಸಮಸ್ಯೆ ನಿವಾರಣೆಗೆ ಶಾಸಕರು ಮಾಹಿತಿ ಆಲಿಸಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದರು. ಜಿಲ್ಲೆಯಲ್ಲಿ ಅತಿ ಹೆಚ್ಚಿನ ನೀರಿನ ಬರ ಈ ತಾಲೂಕಿನಲ್ಲಿ ಎದುರಾಗಿದೆ.
  45 ಕಡೆ ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ. ಪರಿಸ್ಥಿತಿ ದಿನಕಳೆದಂತೆ ಕೈಮೀರುತ್ತಿದ್ದು, ಅಧಿಕಾರಿಗಳು ಸಾಕಷ್ಟು ಬೋರ್‌ವೆಲ್ ತೋಡಿದರೂ ಭೂಮಿಯಲ್ಲಿ ನೀರಿಲ್ಲ. ಸರ್ಕಾರದ ಹಣ ಖರ್ಚಾಗುವುದು ತಪ್ಪುತ್ತಿಲ್ಲ. ಇದೆಲ್ಲಕ್ಕೂ ಮಳೆ ಬಂದರೆ ಸಮಸ್ಯೆಗೆ ತೆರೆ ಬೀಳಲಿದೆ ಎಂದ ಅವರು, ಮುಂದಿನ ದಿನಗಳಲ್ಲಿ ನೀರಿನ ಶಾಶ್ವತ ಯೋಜನೆ ರೂಪಿಸಲಾಗುವುದು, ಅಲ್ಲಿಯವರೆಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.
39 ಗ್ರಾಪಂಗಳಿಗೆ 9 ಪಿಡಿಒ: ಸದ್ಯ ತಾಲೂಕಿನ 39 ಗ್ರಾಪಂಗಳಿಗೆ ಕೇವಲ 9 ಅಭಿವೃದ್ಧಿ ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬೊಬ್ಬರಿಗೆ ಎರಡ್ಮೂರು ಪಂಚಾಯತ್ ಅಧಿಕಾರ ವಹಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಯಾವ ಗ್ರಾಪಂ.ಗೂ ಹಾಜರಾಗುವುದಿಲ್ಲ. ಸಮಸ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.
  ಜಿಪಂ ಸದಸ್ಯ ಸಿದ್ಧರಾಮ ಪ್ಯಾಟಿ, ತಾಪಂ ಸದಸ್ಯ ಆಕಾಶ ಪಾಟೀಲ್ ಸೇರಿದಂತೆ ಅನೇಕ ಗ್ರಾಪಂ, ಮಹಿಳಾ ಹಾಗೂ ಪುರುಷ ಅಧ್ಯಕ್ಷರು ಮಾತನಾಡಿ, ಎದುರಾದ ನೀರಿನ ಸಮಸ್ಯೆ ವಿವರಿಸಿ ಕ್ರಮ ಕೈಗೊಳ್ಳಲು ಮಾರ್ಗಸೂಚಿ ಹೇಳಿದರು.
ಜನರ ಕೆಲಸ ಮಾಡಿ, ಇಲ್ಲವೇ ರಜೆ ಮೇಲೆ ತೆರಳಿ: ಪಿಡಿಒ ಮೇಲೆ ಹಿಡಿತ ಸಾಧಿಸದಿದ್ದರೆ ರಜೆ ಮೇಲೆ ತೆರಳಿ, ಇಲ್ಲ ಜನರ ಕೆಲಸ ಮಾಡಿ ಎಂದು ತಾಪಂ ಇಒ ಅಬ್ದುಲ್ ಸಲಾಂಗೆ ಶಾಸಕರು ಸೂಚಿಸಿದರು. ಇದುವರೆಗೆ ಯಶಸ್ವಿಯಾಗಿ ನೀರಿನ ಸಮಸ್ಯೆ ನಿವಾರಣೆ ಕುರಿತು ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶಾಂತಪ್ಪ ಠಕ್ಕಳಕಿ ವಿವರಿಸಿದರು.
 ತಹಸೀಲ್ದಾರ್ ಆಗಿ ಶನಿವಾರವೇ ಅಧಿಕಾರ ಸ್ವೀಕರಿಸಿದ ಪರಮೇಶ್ವರ ಕೆ.ಸ್ವಾಮಿ, ತಾಪಂ ಯೋಜನಾಧಿಕಾರಿ ಗುರುನಾಥ ಗೌಡಪ್ಪ, ವ್ಯವಸ್ಥಾಪಕ ಬಸವರಾಜ ಪಾಟೀಲ್, ರಮೇಶ ಬಾಬು, ಜೆಸ್ಕಾಂ ಅಧಿಕಾರಿ ವಿಶ್ವನಾಥ ರೆಡ್ಡಿ ಉಪಸ್ಥಿತರಿದ್ದರು.

4 ದಿನಕ್ಕೊಮ್ಮೆ ನೀರು, ತತ್ತರಿಸಿದ ನಾಗರಿಕರು
ಕನ್ನಡಪ್ರಭ ವಾರ್ತೆ, ಆಳಂದ, ಜೂ.2
ಭೀಕರ ಬರ ಪರಿಸ್ಥಿತಿಯಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗಿದ್ದು ಆಳಂದ ನಗರಕ್ಕೂ ಅದರ ಬಿಸಿ ತಟ್ಟಿದೆ.
  ಎಲ್ಲೆಡೆ ಜಲಕ್ಷಾಮದ ಪರಿಣಾಮವಾಗಿ ನಗರದಲ್ಲಿ ನೀರಿನ ಆಹಾಕಾರ ಹೆಚ್ಚಿದೆ. ತಾಲೂಕಿನ ಅಮರ್ಜಾ ಅಣೆಕಟ್ಟಿನಿಂದ ಆಳಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕಾರ್ಯಕ್ಕೆ ತೊಂದರೆಯಾಗತೊಡಗಿದೆ.
ಅಣೆಕಟ್ಟೆ ನೀರಿನ ಕೊರತೆ: ಅಣೆಕಟ್ಟೆ ನೀರಿನ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಕಳೆದ ಎರಡೂ ತಿಂಗಳಿಂದಲೂ ಮೂರು ದಿನಕ್ಕೊಮ್ಮೆ ಇಲ್ಲಿಯ ನಾಗರಿಕರಿಗೆ ನೀರು ಪೂರೈಸಲಾಗುತ್ತಿದೆ. ಡ್ಯಾಂನಲ್ಲಿರುವ ಜಾಕ್‌ವೆಲ್ ಹತ್ತಿರ ನೀರಿನ ಪ್ರಮಾಣ ಇಳಿಮುಖವಾಗಿದೆ. ಹೀಗಾಗಿ ನೀರು ಸರಬರಾಜಿನಲ್ಲಿ ಕೊರತೆ ಉಂಟಾಗಿ ಜನ ಜಾನುವಾರುಗಳು ತತ್ತರಿಸುವಂತಾಗಿವೆ.
  ಜಾಕ್‌ವೆಲ್ ದುರಸ್ತಿ ಮಾಡಿ ಹೊಸ ಪಂಪ್ ಅಳವಡಿಸಲು 25 ಲಕ್ಷ ಅಂದಾಜು ವೆಚ್ಚದ ಕ್ರಿಯಾಯೋಜನೆ ಮಂಜೂರಾತಿಗಾಗಿ ಪುರಸಭೆ ಮುಖ್ಯಾಧಿಕಾಢಿರಿಗಳು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಈ ಅನುದಾನ ಮಂಜೂರಾದ ಮೇಲೆ ಪಂಪ್‌ಸೆಟ್ ದುರಸ್ತಿ ಕೈಗೊಳ್ಳಬೇಕಾಗಿದೆ.
ಕಲುಷಿತ ನೀರು: ಕಳೆದ ಮೂರು ತಿಂಗಳಿಂದ ನೀರಿನ ಫಿಲ್ಟರ್ ಯಂತ್ರ ಕೆಟ್ಟು ಹೋಗಿರುವುದರಿಂದ ಕಲುಷಿತ ನೀರನ್ನೇ ಸರಬರಾಜು ಮಾಡಲಾಗುತ್ತಿದೆ. ಕೆಲವೊಮ್ಮೆ ತಾತ್ಕಾಲಿಕ ದುರಸ್ತಿ ಮಾಡುವ ಮೂಲಕ ನೀರು ದೊರೆಯುತ್ತವೆ. ಇಂತಹ ಕಲುಷಿತ ನೀರು ಕುಡಿಯುವುದರಿಂದ ನಗರದಲ್ಲಿ ರೋಗ ಬಾಧೆಗಳು ಹೆಚ್ಚುವ ಆತಂಕ ಜನರಲ್ಲಿ ಮೂಡಿದೆ.
ಫಿಲ್ಟರ್ ಯಂತ್ರಗಳ ದುರಸ್ತಿ: ಫಿಲ್ಟರ್ ಅರ್ಧಮರ್ಧವಾಗುತ್ತಿದ್ದು ಮರಳು ಕೊರತೆ, ಯಂತ್ರಗಳು ಕೈಕೊಟ್ಟ ಪರಿಣಾಮ ಕಲುಷಿತ ನೀರನ್ನೇ ಸೇವಿಸುವಂತಾಗಿದೆ. ಇತ್ತೀಚೆಗೆ ಡಿಸಿ ಹಠಾತ್ ಭೇಟಿ ನೀಡಿ ನೀರಿನ ಕೊರತೆಯ ಬಗ್ಗೆ ಪರಿಶೀಲಿಸಿದರು. ಬರ ನಿರ್ವಹಣಾ ಯೋಜನೆ ಅಡಿ ಅಂದಾಜು 13.77 ಲಕ್ಷ ವಿಶೇಷ ಅನುದಾನವನ್ನು ಡಿಸಿ ಬಿಡುಗಡೆ ಮಾಡಿದ್ದಾರೆ. ಈ ಹಣದಲ್ಲಿ ಫಿಲ್ಟರ್ ಯಂತ್ರಗಳ ದುರಸ್ತಿ ಮಾಡಲಾಗುತ್ತಿದೆ.
  ನೀರು ಶುದ್ಧೀಕರಣಕ್ಕಾಗಿ ಮೈಸೂರು ಅಥವಾ ಗುಜರಾತ್ ರಾಜ್ಯದಿಂದ ವಿಶೇಷ ಮರಳು ತರಬೇಕಾಗಿದೆ. ಈಗಾಗಲೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ತಾಂತ್ರಿಕ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಂಡಿರುವರು.
ಜಿನುಗು ಕೆರೆ ನೀರೂ ಖಾಲಿ: ಪಕ್ಕದ ಮನೆಯವರ ಹತ್ತಿರ ಹೋಗಿ ನೀರು ತರುವಂತಹ ಸ್ಥಿತಿ ಪಟ್ಟಣದಲ್ಲಿ ಉದ್ಭವಿಸಿದೆ. ನಾಲ್ಕು ದಿನಕ್ಕೊಮ್ಮೆ ಬರುವ ನೀರನ್ನು ಸಂಗ್ರಹಿಸಿಕೊಂಡು ಜೀವನ ನಡೆಸಬೇಕಾಗಿದೆ. ಆಳಂದ ಹೊರವಲಯದ ಜಿನುಗು ಕೆರೆಯ ನೀರು ಬತ್ತಿ ಹೋಗುತ್ತಿವೆ. ಬರುವ ದಿನಗಳಲ್ಲಿ ಅಗತ್ಯ ಮಳೆ ಬೀಳದಿದ್ದರೆ ಕುಡಿಯುವ ನೀರಿನ ಭೀಕರತೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ. ನಗರದ ಸುತ್ತಮುತ್ತಲಿನ ಕೆರೆಬಾವಿಗಳು ಬತ್ತಿವೆ.
ಪೈಪ್‌ಲೈನ್ ಕಾಮಗಾರಿ: ಪಟ್ಟಣದ ಬಡಾವಣೆಗಳಲ್ಲಿ 30 ಲಕ್ಷ ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿ ಕೈಗೊಂಡು ನೀರಿನ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ನೀರಿನ ಲಭ್ಯತೆ ಸ್ಥಳಗಳಲ್ಲಿ ಕೊಳವೆಬಾವಿ ತೋಡಲಾಗಿದೆ. ಇದಕ್ಕಾಗಿ 1.80 ಲಕ್ಷ ಖರ್ಚು ಮಾಡಲಾಗಿದೆ. ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಎಸ್‌ಎಫ್‌ಸಿ ಯೋಜನೆಯಡಿ 20 ಲಕ್ಷ ಮಂಜೂರಾಗಿವೆ. ಪುರಸಭೆಯ ಅನುದಾನದಲ್ಲಿ ಇನ್ನಿತರ ಕಾಮಗಾರಿಗಳು ಕೈಗೊಂಡು ಸಮಸ್ಯೆಗೆ ಪರಿಹಾರ ಕೈಗೊಳ್ಳಲಾಗುತ್ತಿವೆ. ಶೀಘ್ರವೇ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಅಗತ್ಯ ಹಾಗೂ ಚರಂಡಿಗಳ ಸ್ವಚ್ಛತೆ ಕಾಪಾಡುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ಆಡಳಿತ ಕಾಳಜಿ ವಹಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement